Saturday, September 6, 2025
Homeರಾಜ್ಯಚಂದ್ರಗ್ರಹಣದ ಹಿನ್ನೆಲೆಯಲ್ಲಿ ಘಾಟಿ ಸುಬ್ರಮಣ್ಯ ದೇವಾಲಯ ಬಂದ್‌

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಘಾಟಿ ಸುಬ್ರಮಣ್ಯ ದೇವಾಲಯ ಬಂದ್‌

Ghati Subramanya Temple closed in view of lunar eclipse

ದೊಡ್ಡಬಳ್ಳಾಪುರ,ಸೆ.6– ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇವಾಲಯವನ್ನು 7ರಂದು ಸಂಜೆ 4.30ಕ್ಕೆ ಮುಚ್ಚಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಸೆ. 7ರ ಸಂಜೆ 4.30 ಗಂಟೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಿದ್ದು, ಮರುದಿನ ಬೆಳಿಗ್ಗೆ ಶುದ್ಧೀಕರಣದ ವಿಧಿಗಳ ನಂತರ ಪುನಃ ಭಕ್ತರ ದರ್ಶನಕ್ಕಾಗಿ ತೆರೆಯಲಾಗುತ್ತದೆ.

2025ರ ವಿಶೇಷ ಚಂದ್ರಗ್ರಹಣ:
ಈ ಬಾರಿ ಸಂಭವಿಸುವ ಚಂದ್ರಗ್ರಹಣವು 2025 ರಲ್ಲಿ ಖಗೋಳದಲ್ಲಿ ಸಂಭವಿಸುವ ಅತ್ಯಂತ ಪ್ರಮುಖ ಘಟನೆಗಳಲ್ಲಿ ಒಂದೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭಾದ್ರಪದ ಮಾಸದ ಪೂರ್ಣಿಮೆ ದಿನವಾದ ಸೆ.7ರಂದು ಇದು ಗೋಚರಿಸಲಿದೆ. ಈ ವರ್ಷ ಎರಡನೇ ಬಾರಿಗೆ ಸಂಭವಿಸುವ ಚಂದ್ರಗ್ರಹಣವಾಗಿದ್ದು, ಹಾಗೆ ವರ್ಷದ ಕೊನೆಯ ಗ್ರಹಣವೂ ಹೌದು.

ಏಷ್ಯಾ ಖಂಡದ ಬಹುತೇಕ ಭಾಗಗಳು ಸೇರಿದಂತೆ ಆಸ್ಟ್ರೇಲಿಯಾ, ಆಫ್ರಿಕಾ ಹಾಗೂ ಯುರೋಪಿನ ಹಲವೆಡೆಗಳಲ್ಲಿಯೂ ಈ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ವಿಶೇಷವೆಂದರೆ, ಭಾರತದಲ್ಲಿ ಈ ಗ್ರಹಣ ಸಂಪೂರ್ಣವಾಗಿ ಗೋಚರವಾಗುವುದರಿಂದ ಧಾರ್ಮಿಕಾಸಕ್ತರು ಹಾಗೂ ಖಗೋಳಾಸಕ್ತರಿಗೆ ಇದು ಅಪೂರ್ವ ಅನುಭವವಾಗಲಿದೆ.

ರಕ್ತ ಚಂದ್ರನ ದೃಶ್ಯ:
ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ಸಾಮಾನ್ಯವಾಗಿ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಭೂಮಿಯ ವಾತಾವರಣದಿಂದ ಬರುವ ಬೆಳಕಿನ ವಿಲೀನ ಪ್ರಕ್ರಿಯೆಯಿಂದ ಚಂದ್ರನ ಮೇಲೈ ಈ ಕೆಂಪು ಮಿಶ್ರಿತ ಬಣ್ಣವನ್ನು ತಳೆಯುತ್ತದೆ. ಈ ವೈಜ್ಞಾನಿಕ ಅಂಶವು ಧಾರ್ಮಿಕ ಭಾವನೆಗಳೊಂದಿಗೆ ಮಿಶ್ರಣಗೊಂಡು ಜನರಲ್ಲಿ ವಿಶೇಷ ಕುತೂಹಲವನ್ನು ಹುಟ್ಟಿಸುತ್ತದೆ.

ಧಾರ್ಮಿಕ ಆಚರಣೆ ಮತ್ತು ನಿರ್ಬಂಧ:
ಚಂದ್ರಗ್ರಹಣ, ಸೂರ್ಯಗ್ರಹಣಗಳ ಸಮಯದಲ್ಲಿ ಹಿಂದು ಧಾರ್ಮಿಕ ಪರಂಪರೆಯ ಪ್ರಕಾರ ದೇವಸ್ಥಾನಗಳನ್ನು ಮುಚ್ಚಿ, ದೇವರ ಪೂಜೆ,ಅರ್ಚನೆಗಳನ್ನು ನಿಲ್ಲಿಸುವ ಆಚರಣೆ ಹಲವು ಶತಮಾನಗಳಿಂದ ನಡೆದುಕೊಂಡು ಬಂದಿದೆ. ಗ್ರಹಣ ಮುಗಿದ ನಂತರ ದೇವಸ್ಥಾನದಲ್ಲಿ ಶುದ್ಧೀಕರಣ ವಿಧಿಗಳನ್ನು ನೆರವೇರಿಸಿ ನಂತರ ದೇವರ ದರ್ಶನವನ್ನು ಪುನಃ ಪ್ರಾರಂಭಿಸುವುದು ರೂಡಿಗತವಾಗಿದೆ.

ಸಾಮಾನ್ಯವಾಗಿ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪ್ರತಿದಿನ ರಾತ್ರಿ 8.30ರವರೆಗೆ ದರ್ಶನಕ್ಕೆ ಅವಕಾಶವಿದ್ದರೂ, ಈ ಬಾರಿ ಗ್ರಹಣದ ಕಾರಣದಿಂದ ಸಂಜೆ 4.30 ಕ್ಕೆ ಬಾಗಿಲು ಮುಚ್ಚಲಾಗುತ್ತದೆ. ಇದರಿಂದ ಭಕ್ತರು ತಮ್ಮ ಕ್ಷೇತ್ರ ದರ್ಶನದ ದಿನವನ್ನ ಬದಲಿಸಿಕೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.

ಘಾಟಿ ಸುಬ್ರಮಣ್ಯ ದೇವಸ್ಥಾನವು ಕರ್ನಾಟಕದಲ್ಲೇ ಪ್ರಸಿದ್ಧವಾದ ಸರ್ಪಸುಬ್ರಮಣ್ಯ ಆರಾಧನಾ ಕ್ಷೇತ್ರವಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ಇಲ್ಲಿ ಆಗಮಿಸುತ್ತಾರೆ. ಭಾನುವಾರ ಹಾಗೂ ಪೂರ್ಣಿಮೆಯ ದಿನವಾಗಿರುವುದರಿಂದ ಹೆಚ್ಚಿನ ಭಕ್ತರ ಆಗಮನ ನಿರೀಕ್ಷಿತವಾಗಿದೆ. ಆದ್ದರಿಂದ ದೇವಾಲಯ ಮುಚ್ಚುವ ವೇಳೆಯನ್ನು ಸ್ಪಷ್ಟವಾಗಿ ಪ್ರಕಟಿಸಿರುವುದು ಭಕ್ತರಿಗೆ ಅನುಕೂಲವಾಗಲಿದೆ ಎಂದು ಕಾರ್ಯದರ್ಶಿ ಪಿ.ದಿನೇಶ್‌ ಮತ್ತು ಉಪ ಆಯುಕ್ತರು ತಿಳಿಸಿದ್ದಾರೆ.

RELATED ARTICLES

Latest News