ಬೆಂಗಳೂರು, ಸೆ.6- ಹಿರಿಯ ನಟ ವಿಷ್ಣುವರ್ಧನ್ ಮತ್ತು ಪಂಚ ಭಾಷಾ ನಟಿ ಬಿ. ಸರೋಜದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನಟಿಯರ ನಿಯೋಗ ಅಗ್ರಹಿಸಿದೆ.
ನಟಿಯರಾದ ಜಯಮಾಲ, ಶ್ರುತಿ, ಮಾಳವಿಕ ಅವಿನಾಶ್ ಅವರ ನಿಯೋಗ ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ಲಿಖಿತ ಮನವಿ ಸಲ್ಲಿಸಿದೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲ ಅವರು, ಇದೇ ತಿಂಗಳ 18ಕ್ಕೆ, ವಿಷ್ಣುವರ್ಧನ್ ಅವರಿಗೆ 75 ವರ್ಷಗಳಾಗಲಿದೆ. ಈ ಸಂದರ್ಭದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಬಿ. ಸರೋಜದೇವಿ ಅವರಿಗೂ ಕರ್ನಾಟಕ ರತ್ನ ನೀಡಬೇಕು. ಜೊತೆಗೆ ಅವರು ವಾಸಿಸುತ್ತಿದ್ದ ಮನೆಯನ್ನು ಸಂಪರ್ಕಿಸುವ ರಸ್ತೆಗೆ ಸರೋಜದೇವಿಯ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.

ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಇಂದು ಉಪಮುಖ್ಯಮಂತ್ರಿ ಅವರ ಭೇಟಿಯ ವೇಳೆ ಸಕಾರಾತಕ ಸ್ಪಂದನೆ ಸಿಕ್ಕಿದೆ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಖುಷಿಯಾಗುವಂತೆ ನಿರ್ಧಾರ ತೆಗದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಮಾಳವಿಕ ಅವಿನಾಶ್ ವಿಷ್ಣುವರ್ಧನ್ ಅವರ ಪುಣ್ಯಭೂಮಿಗೆ ಜಾಗ ಮೀಸಲಿಡುವಂತೆ ಹಾಗೂ ಕರ್ನಾಟಕ ರತ್ನ ಘೋಷಣೆಗೆ ನಿಯೋಗ ಮನವಿ ಮಾಡಿದೆ. ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದರು.