Saturday, September 6, 2025
Homeರಾಷ್ಟ್ರೀಯ | Nationalಮಳೆ-ಪ್ರವಾಹ ಪೀಡಿತ ರಾಜ್ಯಗಳಿಗೆ ಶೀಘ್ರವೇ ಪ್ರಧಾನಿ ಮೋದಿ ಭೇಟಿ

ಮಳೆ-ಪ್ರವಾಹ ಪೀಡಿತ ರಾಜ್ಯಗಳಿಗೆ ಶೀಘ್ರವೇ ಪ್ರಧಾನಿ ಮೋದಿ ಭೇಟಿ

PM Modi to visit flood-hit states, review relief efforts

ನವದೆಹಲಿ,ಸೆ.6- ಕಳೆದ ಎರಡು ವಾರಗಳಿಂದ ನಿರಂತರ ಮಳೆಯಿಂದಾಗಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿ ಹಾನಿಗೊಳಗಾಗಿರುವ ಜಮು ಮತ್ತು ಕಾಶೀರ, ಹಿಮಾಚಲ ಪ್ರದೇಶ, ಪಂಜಾಬ್‌ ಮತ್ತು ಉತ್ತರಾಖಂಡ ಸೇರಿದಂತೆ ಹಲವು ಮಳೆ ಪೀಡಿತ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ ಭೇಟಿ ನೀಡಲಿದ್ದಾರೆ. ಈ ಭೇಟಿಯ ಸಮಯದಲ್ಲಿ, ಪ್ರಧಾನಿಯವರು ಪರಿಸ್ಥಿತಿಯನ್ನು ಅವಲೋಕನ ಮಾಡಿ ಈ ರಾಜ್ಯಗಳಲ್ಲಿ ನಡೆಯುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪರಿಶೀಲಿಸಲಿದ್ದಾರೆ.

ಕಳೆದ ಕೆಲವು ವಾರಗಳಲ್ಲಿ ನಿರಂತರ ಮಳೆಯಿಂದಾಗಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಹಲವಾರು ಹೆದ್ದಾರಿಗಳು ಮುಚ್ಚಿಹೋಗಿವೆ, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ, ಬೆಳೆಗಳು ನೆಲಕಚ್ಚಿವೆ ಮತ್ತು ಸಾವಿರಾರು ಜನರು ಸಂಕಷ್ಟದಲ್ಲಿದ್ದಾರೆ. ಈ ಪ್ರದೇಶವು ದಶಕಗಳಲ್ಲಿಯೇ ಅತ್ಯಂತ ಭೀಕರ ಹವಾಮಾನ ವಿಕೋಪವನ್ನು ಎದುರಿಸುತ್ತಿದೆ, ಪೀಡಿತ ರಾಜ್ಯಗಳು ವಿನಾಶದ ಪ್ರಮಾಣವನ್ನು ನಿಭಾಯಿಸಲು ಹೆಣಗಾಡುತ್ತಿವೆ. ಪಂಜಾಬ್‌ ಒಂದರಲ್ಲೇ ಕನಿಷ್ಠ 29 ಸಾವಿನ ವರದಿಯಾಗಿವೆ, ಪ್ರವಾಹವು ಸುಮಾರು 10 ಜಿಲ್ಲೆಗಳಲ್ಲಿ 1000 ಕ್ಕೂ ಹೆಚ್ಚು ಹಳ್ಳಿಗಳನ್ನು ಅಪ್ಪಳಿಸಿದ್ದು, 2.5 ಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ.

ಇದಕ್ಕೂ ಮೊದಲು, ಪ್ರಧಾನಿ ಮೋದಿ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಪ್ರವಾಹ ಪೀಡಿತ ದಕ್ಷಿಣ ರಾಜ್ಯಗಳಿಗೆ ಎಲ್ಲಾ ಸಹಾಯದ ಭರವಸೆ ನೀಡಿದ್ದರು. ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಅವರು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಿಗೆ ಕರೆ ಮಾಡಿ, ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವ ಭರವಸೆ ನೀಡಿದ್ದರು.

ಈ ಮಧ್ಯೆ, ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿದ್ದು, ಪೀಡಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಪ್ರಯತ್ನಗಳನ್ನು ಮಾಡುತ್ತಿದೆ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‌ಡಿಆರ್‌ಎಫ್‌) ನಿಯೋಜಿಸಲಾಗಿದೆ. ಜಮು ಮತ್ತು ಕಾಶೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಪ್ರಧಾನಿ ಮೋದಿ ಅವರಿಗೆ ಪರಿಸ್ಥಿತಿಯ ಬಗ್ಗೆ ವಿವರಿಸಿದರು.

ಎನ್‌ಡಿಆರ್‌ಎಫ್‌ ತಂಡಗಳನ್ನು ನಿಯೋಜಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ಕೇಂದ್ರವು ಪೀಡಿತ ರಾಜ್ಯಗಳಿಗೆ ಸಂಪೂರ್ಣ ಬೆಂಬಲದ ಭರವಸೆ ನೀಡಿದೆ, ಪ್ರಧಾನ ಮಂತ್ರಿಯವರ ಭೇಟಿಯು ಪರಿಹಾರ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ.

RELATED ARTICLES

Latest News