ತಿರುವನಂತಪುರಂ,ಸೆ.6- ಇಡೀ ರಾಷ್ಟ್ರದ ಗಮನಸೆಳೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣ ಸಂಬಂಧ ಕೇರಳದ ಕಮ್ಯುನಿಸ್ಟ್ (ಸಿಪಿಐ ಪಕ್ಷದ ಸಂಸದರೊಬ್ಬರ ಹೆಸರು ತಳಕು ಹಾಕಿಕೊಂಡಿದೆ.ಕಮ್ಯುನಿಸ್ಟ್ ಪಕ್ಷದ ರಾಜ್ಯಸಭಾ ಸದಸ್ಯ ಸಂತೋಷ್‌ಕುಮಾರ್ ಅವರೇ ತಲೆಬುರುಡೆಯನ್ನು ಪ್ರಕರಣದ ಪ್ರಮುಖ ಆರೋಪಿ ಪ್ರಸ್ತುತ ಎಸ್‌ಐಟಿ ವಶದಲ್ಲಿರುವ ಚಿನ್ನಯ್ಯ ಅವರಿಗೆ ತಂದುಕೊಟ್ಟಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಅವರು ತಿರುವಂತನಪುರಕ್ಕೆ ತೆರಳಿ ರಾಜ್ಯಸಭಾ ಸದಸ್ಯರೂ ಆಗಿರುವ ಸಂತೋಷ್‌ಕುಮಾರ್ ಅವರನ್ನು ಭೇಟಿಯಾಗಿ ತಲೆಬುರುಡೆ ಹಾಗ ಪ್ರಕರಣದ ಬಗ್ಗೆ ಯಾವ ಯಾವ ತಂತ್ರಗಳನ್ನು ರೂಪಿಸಬೇಕು ಎಂಬುದರ ಬಗ್ಗೆ ರಹಸ್ಯ ಸ್ಥಳವೊಂದರಲ್ಲಿ ಚರ್ಚೆ ನಡೆಸಿದ್ದರು.
ಎಸ್‌ಐಟಿ ವಶದಲ್ಲಿರುವ ಚಿನ್ನಯ್ಯ ಹಾಗೂ ವಿಚಾರಣೆಗೆ ಹಾಜರಾಗಿದ್ದ ಗಿರೀಶ್ ಮಟ್ಟಣ್ಣನವರ್, ಜಯಂತ್, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿಚಾರಣೆ ವೇಳೆ ಈ ಪ್ರಕರಣದ ಮಾಸ್ಟರ್ ಮೈಂಡ್ ಸಂತೋಷ್‌ಕುಮಾರ್ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ದೆಹಲಿಗೂ ತೆರಳಿದ್ದ ಈ ತಂಡವು ಸಂಸದರನ್ನು ಭೇಟಿಯಾಗಿ ಧರ್ಮಸ್ಥಳದಲ್ಲಿ ಕಳೆದ ಹಲವಾರು ವರ್ಷದಿಂದ ಶವಗಳನ್ನು ಹೂತು ಹಾಕಿದ್ದೇನೆ. ಈಗ ನನಗೆ ಇದರ ಪಾಪಪ್ರಜ್ಞೆ ಕಾಡುತ್ತಿದೆ. ಪೊಲೀಸರು ತನಿಖೆ ನಡೆಸಿದರೆ ಎಲ್ಲವನ್ನು ಬಾಯಿ ಬಿಡುವುದಾಗಿ ಹೇಳುವಂತೆ ಚಿನ್ನಯ್ಯನ ತಲೆಗೆ ತುಂಬಿದ್ದು ಈ ತಂಡ ಎಂಬುದು ಗೊತ್ತಾಗಿದೆ.
ನಾನು ತಂಡ ಹೇಳಿದಂತೆ ಕೇಳಿದ್ದೆ. ಇದರಲ್ಲಿ ನನ್ನ ಪಾತ್ರವೇನಿಲ್ಲ ಎಂದು ಕಟಕಟೆಯಲ್ಲಿ ಕಣ್ಣೀರು ಹಾಕಿದ್ದ ಚಿನ್ನಯ್ಯ ತನಗೆ ಯಾವ ರೀತಿ ಆಮಿಷವೊಡ್ಡಿದರು, ತಲೆಬುರಡೆಯನ್ನು ತಂದಿದ್ದು ಎಲ್ಲಿಂದ? ದೆಹಲಿಯಲ್ಲಿ ಭೇಟಿಯಾಗಿದ್ದು ಯಾರನ್ನು? ತಿರುವಂತನಪುರದಲ್ಲಿ ಭೇಟಿಯಾಗಿದ್ದು ಸೇರಿದಂತೆ ಹಲವು ವಿಷಯಗಳನ್ನು ಬಾಯಿಬಿಟ್ಟಿದ್ದಾನೆ.
ಇದೀಗ ಎಸ್‌ಐಟಿ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಆರೋಪಿಸಿರುವ ರಾಜ್ಯಸಭಾ ಸದಸ್ಯನಿಗೆ ನೋಟಿಸ್ ನೀಡಲು ಸಿದ್ದತೆ ನಡೆಸಿದೆ. ಒಂದು ವೇಳೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದರೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.
ಈ ಹಿಂದೆ ಈ ಪ್ರಕರಣದಲ್ಲಿ ತಮಿಳುನಾಡು ಮೂಲದ ಸಂಸದರೊಬ್ಬರ ಕೈವಾಡವಿತ್ತು ಎಂದು ಶಂಕಿಸಲಾಗಿತ್ತು. ಕರ್ನಾಟಕದಲ್ಲಿ ಉನ್ನತ ಅಽಕಾರಿಯಾಗಿ ಸೇವೆ ಸಲ್ಲಿಸಿದ್ದ ಅವರು ನಂತರ ಬದಲಾದ ಪರಿಸ್ಥಿತಿಯಲ್ಲಿ ಸ್ವಯಂ ನಿವೃತ್ತಿ ಪಡೆದು ರಾಷ್ಟ್ರೀಯ ಪಕ್ಷವೊಂದರಿಂದ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ವಿಜೇತರಾಗಿದ್ದರು. ಹೀಗಾಗಿ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿತ್ತು.
ಆದರೆ ಈಗ ಕೇರಳದ ಸಂಸದರೊಬ್ಬರ ಹೆಸರು ಕೇಳಿಬಂದಿರುವುದರಿಂದ ಧರ್ಮಸ್ಥಳದ ಬುರುಡೆ ಪ್ರಕರಣ ಇನ್ನೂ ಯಾರ್ಯಾರಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ನಡುವೆ ತಲೆಬುರುಡೆಯನ್ನು ಕೊಟ್ಟಿದ್ದು ಜಯಂತ್. ತಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲವೆಂದು ಚಿನ್ನಯ್ಯ ಎಸ್‌ಐಟಿ ಮುಂದೆ ಹೇಳಿಕೊಂಡಿದ್ದಾನೆ. ಆದರೆ ಜಯಂತ್, ತಲೆ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ಕೊಟ್ಟಿದ್ದು ಎಂದಿದ್ದಾನೆ. ಮಟ್ಟಣ್ಣನವರ್ ಇದನ್ನು ನಿರಾಕರಿಸಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ.
11 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ತನಿಖೆ :
ತಲೆಬುರುಡೆ ಪ್ರಕರಣ ಹಾಗೂ ಒಟ್ಟಾರೆ ಧರ್ಮಸ್ಥಳ ಪ್ರಕರಣವನ್ನು ಈವರೆಗೆ ಒಟ್ಟು 11 ಸೆಕ್ಷನ್‌ಗಳಡಿ ದಾಖಲಿಸಿಕೊಂಡು ಎಸ್‌ಐಟಿ ತನಿಖೆ ನಡೆಸುತ್ತಿದೆ. ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರಗಳನ್ನು ಆಧರಿಸಿ ಸೆಕ್ಷನ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ನಂಬರ್ 39/2025 ರಲ್ಲಿ ಬಿಎನ್‌ಎಸ್ 211(ಂ), 336, 230, 231, 229, 227, 228, 240, 236, 233, 248 ಸೆಕ್ಷನ್ ಅಳವಡಿಕೆ ಮಾಡಲಾಗಿದೆ.