ಬೆಂಗಳೂರು, ಸೆ.6- ಧರ್ಮಸ್ಥಳದ ವಿಚಾರವಾಗಿ ತಮ ವಿರುದ್ಧ ಆರೋಪ ಮಾಡಿರುವ ಶಾಸಕ ಗಾಲಿ ಜನಾರ್ದನರೆಡ್ಡಿ ವಿರುದ್ಧ ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದ ಸಂಸದ ಸಶಿಕಾಂತ್ ಶೆಂಥಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಅವರು, ನ್ಯಾಯಾಲಯಕ್ಕೆ ಖಾಸಗಿ ದೂರಿನ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ತಮ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಜನಾರ್ದನ ರೆಡ್ಡಿಗೆ ಒತ್ತಾಯಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾವತಿ ಶಾಸಕರಾಗಿರುವ ಗಾಲಿ ಜನಾರ್ದನರೆಡ್ಡಿ ತಮ ವಿರುದ್ಧ ಮಾಡಿರುವ ಆರೋಪಗಳು ಬಾಲಿಶತನದಿಂದ ಕೂಡಿವೆ. ಅವುಗಳಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದು ನಾನು ನಿರ್ಲಕ್ಷಿಸಿದ್ದೆ. ಜೊತೆಗೆ ಸಂಸದನಾದ ನನಗೆ ಇಂತಹ ವಿಚಾರಗಳಿಗಿಂತಲೂ ಬೇರೆ ಮಹತ್ವದ ವಿಷಯಗಳಿದ್ದವು ಎಂದಿದ್ದಾರೆ.
ಧರ್ಮಸ್ಥಳದ ವಿಚಾರವಾಗಿ ವಾತ್ಸ್ ಆ್ಯಪ್ ನೋಡಿಕೊಂಡು ಜನಾರ್ದನರೆಡ್ಡಿ ಮಾತನಾಡಿದಂತಿದೆ. ನನ್ನನ್ನು ಮಾಸ್ಟರ್ ಮೈಂಡ್, ಸ್ಕ್ರಿಪ್ಟ್ ರೈಟರ್ ಎಂದೆಲ್ಲಾ ಬಿಂಬಿಸಿದ್ದಾರೆ. ಅವರ ಹೇಳಿಕೆಯ ಬಳಿಕ ದಿನಕ್ಕೊಂದು ವರದಿ ಬಿತ್ತರವಾಗುತ್ತಿದ್ದು, ನನ್ನ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳಾಗುತ್ತಿವೆ. ಈ ಹಂತದಲ್ಲಿ ಪ್ರತಿಕ್ರಿಯಿಸಲೇಬೇಕಾಗಿರುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.
ಕರ್ನಾಟಕ ನನಗೆ ಹೊಸದಲ್ಲ. ಐಎಎಸ್ ಅಧಿಕಾರಿಯಾಗಿ ಇಲ್ಲಿ 10 ವರ್ಷ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ಎಲ್ಲರಿಗೂ ಅರಿವಿದೆ. ತಮ ವಿರುದ್ಧ ಆರೋಪ ಮಾಡಿರುವ ಜನಾರ್ದನರೆಡ್ಡಿ ಎಂತಹ ವ್ಯಕ್ತಿ ಎಂದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಆರೋಪಕ್ಕಾಗಿ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಕರ್ನಾಟಕದ ಹೆಸರನ್ನು ಇಡೀ ದೇಶದಲ್ಲಿ ಕೆಡಿಸಿದ್ದಾರೆ. ಇಂತಹ ವ್ಯಕ್ತಿಯ ಆರೋಪಗಳನ್ನು ಹರಡಲು ಬಿಟ್ಟರೆ ನನಗೂ ಸಮಸ್ಯೆಯಾಗಲಿದೆ, ಸಾರ್ವಜನಿಕ ವಲಯದಲ್ಲೂ ಲೋಪವಾಗುತ್ತದೆ ಎಂದು ಹೇಳಿದರು.
ಅದಕ್ಕಾಗಿ ನಾನು ಖಾಸಗಿ ದೂರು ಸಲ್ಲಿಸುತ್ತಿದ್ದು, ಜನಾರ್ದನರೆಡ್ಡಿ ಅವರು ನ್ಯಾಯಾಲಯಕ್ಕೆ ಬಂದು ತಮ ಹೇಳಿಕೆಗಳಿಗೆ ಸಾಕ್ಷ್ಯ ನೀಡಲಿ ಎಂದು ಆಗ್ರಹಿಸಿದರು. ಧರ್ಮಸ್ಥಳದ ವಿಚಾರದಲ್ಲಿ ವಿಚಾರಣೆ ಗೊಳಗಾಗುತ್ತಿರುವವರು ದೆಹಲಿಯಲ್ಲಿರುವ ಮನೆಯಲ್ಲಿ ತಮನ್ನು ಭೇಟಿ ಮಾಡಿದ್ದರು, ತಲೆ ಬುರುಡೆಯನ್ನು ಸಶಿಕಾಂತ್ ಶೆಂಥಿಲ್ ಅವರೇ ತಂದುಕೊಟ್ಟರು ಎಂದೆಲ್ಲ ಆರೋಪಗಳು ಮಾಡಲಾಗಿದೆ.
ಈಗಿನ ಕೇಂದ್ರ ಸರ್ಕಾರ ದೆಹಲಿಯಲ್ಲಿ ನನಗೆ ಈವರೆಗೂ ಒಂದು ಮನೆಯನ್ನು ಕೊಟ್ಟಿಲ್ಲ. ತಮಿಳುನಾಡು ಹೌಸ್‌ನಲ್ಲಿ ವಾಸವಿದ್ದೇನೆ. ತಲೆ ಬುರುಡೆ ಎಲ್ಲಿ ಸಿಗುತ್ತದೆ ಎಂದು ನನಗೆ ಗೊತ್ತಿಲ್ಲ. ಬಹುಶಃ ಜನಾರ್ದನರೆಡ್ಡಿಗೆ ಚೆನ್ನಾಗಿ ಗೊತ್ತಿರಬೇಕು ಎಂದು ತಿರುಗೇಟು ನೀಡಿದ್ದರು.
ಯಾವ ಆರೋಪಿಗಳೂ ನನ್ನ ಸಂಪರ್ಕದಲ್ಲಿ ಇಲ್ಲ. ಜನಾರ್ದನರೆಡ್ಡಿ ಹೇಳಿಕೆಯ ಬಳಿಕ ಮಾಧ್ಯಮಗಳು ನನಗೆ ಕರೆ ಮಾಡಿದಾಗಲಷ್ಟೇ ವಿಷಯ ತಿಳಿಯಿತು ಎಂದು ಸ್ಪಷ್ಟಪಡಿಸಿದರು.
ಇಡೀ ದೇಶದಲ್ಲಿ ಬಲಪಂಥೀಯ ರಾಜಕೀಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಐಎಎಸ್ ಹುದ್ದೆಗೆ ನೀಡಿದ ರಾಜಿನಾಮೆ ಪತ್ರದಲ್ಲೂ ಅದನ್ನು ಸ್ಪಷ್ಟವಾಗಿ ತಿಳಿಸಿದ್ದೇನೆ.
ಇದಕ್ಕಾಗಿ ನನ್ನ ವಿರುದ್ಧ ವ್ಯವಸ್ಥಿತವಾಗಿ ಸಂಬಂಧ ಪಡದೇ ಇರುವ ವಿಷಯಗಳಲ್ಲೂ ನನ್ನ ಹೆಸರನ್ನು ಸೇರಿಸಿ ಅಪಪ್ರಚಾರ ಮಾಡಲಾಗುತ್ತಿದೆ. ಬಲಪಂಥೀಯ ವಾದದ ವಿರುದ್ಧ ಹೋರಾಟ ಮಾಡುವವರ ವಿರುದ್ಧ ಈ ರೀತಿಯ ಆರೋಪಗಳು ಸಾಮಾನ್ಯವಾಗಿದೆ ಎಂದು ಹೇಳಿದರು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ತನಿಖೆಯ ಬಗ್ಗೆ ನಾನು ವೈಯಕ್ತಿಕವಾಗಿ ಯಾವುದೇ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ. ತನಿಖೆ ನ್ಯಾಯಯುತವಾಗಿ ನಡೆಯಬೇಕಿದೆ ಎಂದು ಹೇಳಿದರು.
ಧರ್ಮಸ್ಥಳದ ವಿಷಯವಾಗಿ ಅನಗತ್ಯವಾಗಿ ಯಾರೇ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕಾಗುತ್ತದೆ. ನಾನು ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ ಎಂದು ಧರಣಿ ನಡೆಸಿದರೆ, ಅದನ್ನು ಧರ್ಮಸ್ಥಳದ ವಿರುದ್ಧದ ಹೋರಾಟ ಎಂದು ಬಿಂಬಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಂಧಿತ ಚಿನ್ನಯ್ಯ ಮತ್ತು ನಾನು ತಮಿಳುನಾಡಿನವರು ಎಂಬ ಕಾರಣಕ್ಕಾಗಿ ಆರೋಪ ಮಾಡುವುದಾದರೆ, ತಮಿಳುನಾಡಿನಲ್ಲೇ ಮತ್ತೊಬ್ಬ ವ್ಯಕ್ತಿಯಿದ್ದು ಅವರು ಐಪಿಎಸ್ ಅಧಿಕಾರಿಯಾಗಿದ್ದರು. ಪೊಲೀಸರಿಗೆ ತಲೆಬುರುಡೆಗಳು ಇನ್ನೂ ಬೇಗ ಸಿಗುತ್ತವೆ. ಅವರ ವಿರುದ್ಧ ಏಕೆ ಆರೋಪ ಮಾಡಿಲ್ಲ ಎಂದು ಪ್ರಶ್ನಿಸಿದ್ದರು.