ಬೆಂಗಳೂರು,ಸೆ.6- ಕಾರಿಗೆ ಜಾಗ ಬಿಡಲಿಲ್ಲವೆಂಬ ಕಾರಣಕ್ಕೆ ಬಿಎಂಟಿಸಿ ಬಸ್ ಚಾಲಕ ಹಾಗ ಕಾನ್‌ಸ್ಟೆಬಲ್ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಜಿಗಣಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಒಬ್ಬರು ರಾತ್ರಿ 10.30ರ ಸುಮಾರಿನಲ್ಲಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಬಿಎಂಟಿಸಿ ಬಸ್ ಚಾಲಕ ಮುಂದೆ ಸಾಗಲು ಸೈಡ್ ಬಿಟ್ಟಿಲ್ಲ.
ಇದರಿಂದ ಕೋಪಗೊಂಡ ಅವರು ರಸ್ತೆಬದಿ ಕಾರು ನಿಲ್ಲಿಸಿ ಬಸ್ ಚಾಲಕನೊಂದಿಗೆ ಜಗಳವಾಡಿದ್ದು, ಹಲ್ಲೆ, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಬಸ್ ಚಾಲಕ ಡಿಪೋಗೆ ಹೋಗಿ ಅಲ್ಲಿನ ಸಿಬ್ಬಂದಿಗಳಿಗೆ ವಿಷಯ ತಿಳಿಸಿದ್ದಾರೆ.
ಕಾನ್‌ಸ್ಟೆಬಲ್ ವರ್ತನೆಯಿಂದ ಕೋಪಗೊಂಡ ಸಹೋದ್ಯೋಗಿ ಚಾಲಕರು ಸಹ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಘಟನೆ ವಿಕೋಪಕ್ಕೆ ತಿರುಗಬಹುದೆಂದು ಅರಿತ ಇನ್‌ಸ್ಪೆಕ್ಟರ್ ಅವರು ಸ್ಥಳಕ್ಕೆ ಹೋಗಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.