ಬೆಂಗಳೂರು, ಸೆ.7– ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡುವವರ ಕುರಿತಂತೆ ರೆಂಬೆ-ಕೊಂಬೆಗಳನ್ನು ಕೀಳುವ ಜೊತೆಗೆ ತಾಯಿ ಬೇರನ್ನೂ ತೆಗೆಯಬೇಕಿದೆ ಎಂದು ಅವಧೂತ ವಿನಯ್‌ಗುರೂಜಿ ಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಿಂದಾಗಿ ಬಹಳಷ್ಟು ಮಂದಿ ಆರ್ಥಿಕ ಚೈತನ್ಯ ಪಡೆದುಕೊಂಡಿದ್ದಾರೆ, ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಸಾಕಷ್ಟು ಒಳ್ಳೆಯ ಕೆಲಸಗಳಾಗಿರುವ ಸಕಾರಾತಕ ವಿಚಾರಗಳನ್ನು ನಾನು ಗಮನಿಸಿದ್ದೇನೆ ಎಂದರು. ಧರ್ಮಸ್ಥಳದ ಮಂಜುನಾಥನ ಹೆಸರು ಹೇಳಿ ಮನೆಯಿಂದ ಹೊರ ಬರುವವರ ಸಂಖ್ಯೆ ಬಹಳಷ್ಟು ಇದೆ. ಹಳ್ಳಿಗಳಲ್ಲಿರುವ ವೆಂಕಟರಮಣ ದೇವಸ್ಥಾನವನ್ನು ಯಾರೂ ಗುರಿ ಮಾಡುವುದಿಲ್ಲ.
ತಿರುಪತಿಯ ವೆಂಕಟರಮಣ, ಧರ್ಮಸ್ಥಳದ ಮಂಜುನಾಥನನ್ನು ಗುರಿ ಮಾಡಲಾಗುತ್ತಿದೆ. ಇದರ ಹಿಂದಿನ ಕಾರಣಗಳನ್ನು ಹುಡುಕಿದಾಗ ಇಲ್ಲಿ ದೇವಸ್ಥಾನ ಗುರಿಯಲ್ಲ, ಅಲ್ಲಿನ ಖಜಾನೆ ಗುರಿಯಾಗುತ್ತಿದೆ ಎಂದು ವಿಶ್ಲೇಷಿಸಿದರು.
ತಮ ವಿರುದ್ಧವೂ ಷಡ್ಯಂತ್ರ ನಡೆದಿದ್ದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನದು ಬೇಲಿ ಕಿತ್ತು ನಡೆಯುವ ಆನೆಯ ದಾರಿ ಇದ್ದಂತೆ. ಕಳೆದು ಕೊಳ್ಳುವುದಕ್ಕೂ ಅಥವಾ ಪಡೆದುಕೊಳ್ಳುವುದಕ್ಕೂ ಏನೂ ಇಲ್ಲ, ಜೀವನ ಮುಕ್ತ ಬದುಕು ತಮದು. ಟೀಕೆ-ಹೊಗಳಿಕೆ ಎರಡನ್ನು ಸಮಾನವಾಗಿ ಸ್ವೀಕರಿಸುತ್ತೇನೆ ಎಂದರು.
ಅಜೆಂಡಾ ಇಲ್ಲದೆ ಏನೂ ನಡೆಯುವುದಿಲ್ಲ, ಗೊಂಬೆ ಆಡುತ್ತಿದೆ ಎಂದರೆ ಅದರ ಹಿಂದೆ ಸೂತ್ರಧಾರ ಇರಲೇಬೇಕು. ಒಳ್ಳೆಯದು ಅಥವಾ ಕೆಟ್ಟದ್ದು ಎರಡರ ಹಿಂದೆಯೂ ಯಾರು ಇರುತ್ತಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದರು.
ನಾಡ ಹಬ್ಬ ದಸರಾ ಉದ್ಘಾಟನೆಗೆ ಬಾನುಮುಷ್ತಾಕ್ ಅವರ ಜೊತೆಗೆ ದೀಪಾ ಭಾಸ್ತಿ ಅವರನ್ನೂ ಆಹ್ವಾನಿಸಬೇಕಿತ್ತು, ಇಬ್ಬರಿಗೂ ಪ್ರಶಸ್ತಿ ಸಿಕ್ಕಿದೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ. ಭಾರತದ ಮೂಲ ಬೇರು ಸನಾತನ ಧರ್ಮ. ಅದನ್ನು ಗೌರವಿಸಬೇಕು ಎಂದು ಹೇಳಿದರು.