ತಿರುವನಂತಪುರಂ,ಸೆ.9- ಜಗತ್ತಿನಲ್ಲಿ ಎಲ್ಲರೂ ಭರವಸೆ ಮೇಲೆ ಬದುಕುತ್ತಾರೆ. ಭರವಸೆ ಇಲ್ಲದೆ ಜೀವನವಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಧಿಕಾರ ಹಸ್ತಾಂತರ ಕುರಿತಂತೆ ಸೂಚ್ಯವಾಗಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿ ವಾಹಿನಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರ, 2028ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಆಶಾಭಾವನೆಯನ್ನು ಹೊರಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಂಡ ನಂತರ ನಿಮಗೆ ಅಧಿಕಾರ ಹಸ್ತಾಂತರವಾಗಲಿದೆಯೇ ಎಂಬ ಪ್ರಶ್ನೆಗೆ, ಪಕ್ಷದ ಹೈಕಮಾಂಡ್ ನಾವು ನಿರ್ದೇಶನದಂತೆ ನಡೆಯಬೇಕು ಎಂದಿದ್ದಾರೆ.
ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದನ್ನು ಪಾಲನೆ ಮಾಡುವುದಷ್ಟೇ ನಮ ಕೆಲಸ. ಕರ್ನಾಟಕದಲ್ಲಿ ನಾವು ಜನರಿಗೆ ಉತ್ತಮ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ನಮ ಒಗ್ಗಟ್ಟಿನಿಂದಲೇ ಜನರು ದೊಡ್ಡ ಜನಾದೇಶ ಕೊಟ್ಟಿದ್ದಾರೆ. ಉತ್ತಮ ಆಡಳಿತ ನಮ್ಮ ಮುಂದಿನ ಗುರಿ ಎಂದು ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.
ಹಾಗಾದರೆ ನೀವು ಸಿಎಂ ಸ್ಥಾನದ ಆಕಾಂಕ್ಷಿಯಲ್ಲವೇ ಎಂದು ಪ್ರಶ್ನಿಸಿದಾಗ, ಜಗತ್ತಿನಲ್ಲಿ ಪ್ರತಿಯೊಬ್ಬರೂ ಭರವಸೆ ಮೇಲೆಯೇ ಬದುಕುತ್ತಾರೆ. ಭರವಸೆ ಇಲ್ಲದ ಜೀವನ ಜೀವನವೇ ಅಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದರು.
ದೇಶದ ಜನತೆ ಬದಲಾವಣೆ ಬಯಸುತ್ತಿದ್ದು ,ಮುಂಬರುವ 2029ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಜನಾದೇಶ ಸಿಗಲಿದ್ದು, ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿಯಾಗುವುದು ಖಚಿತ ಎಂದು ಆತವಿಶ್ವಾಸದಿಂದು ನುಡಿದರು.
ದೇಶಕ್ಕೆ ಬದಲಾವಣೆಯ ಅಗತ್ಯವಿದೆ. ಈಗ ಜನರು ರಾಹುಲ್ ಗಾಂಧಿಯವರ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ. ಭರವಸೆಯ ಬೆಳಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 2029ರಲ್ಲಿ ಅವರು ಪ್ರಧಾನಿಯಾಗುವುದು ಖಚಿತ. ನನಗೆ ಈ ಬಗ್ಗೆ ತುಂಬಾ ಆತವಿಶ್ವಾಸವಿದೆ ಎಂದು ಹೇಳಿದ್ದಾರೆ.
ದೇಶವು ಬದಲಾವಣೆಯನ್ನು ಬಯಸುತ್ತದೆ. ಬಿಹಾರದಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ರಾಹುಲ್ ಗಾಂಧಿ ಮುಂದಿನ ಪ್ರದಾನಿ ಎಂದು ಹೇಳಿರುವುದು ಈ ದೇಶದ ಜನತೆ ಯಾರ ನಾಯಕತ್ವವನ್ನು ಎದುರುನೋಡುತ್ತಿದೆ ಎಂಬುದರ ಪ್ರತೀಕವಾಗಿದೆ. ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಹೋರಾಟಗಳು ಯಶಸಿಯಾಗುತ್ತಿವೆ. ನಾವೆಲ್ಲರು ಕೈಜೋಡಿಸುತ್ತಿದ್ದೇವೆ ಎಂದಿದ್ದಾರೆ.
ನಮಗೆ ಬಾಂಗ್ಲಾದಂತಹ ನೆರೆಯ ರಾಷ್ಟ್ರವು ಸ್ನೇಹದಿಂದ ದೂರವಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ನೇರ ಕಾರಣ. ಕಾಂಗ್ರೆಸ್ ಸರ್ಕಾರದಲ್ಲಿ ಭಾರತ ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಸಂಪಾದಿಸಿತ್ತು. ಈಗ ಅದು ಕಾಣುತ್ತಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರಮೋದಿ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ್ದಾರೆ.