ಮೈಸೂರು,ಸೆ.9-ಸಾಹಿತಿ ಬಾನು ಮುಷ್ತಾಕ್ ಅವರನ್ನು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಚಾಮುಂಡಿಬೆಟ್ಟ ಚಲೋಗೆ ಮುಂದಾಗಿದ್ದ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಧಾರ್ಮಿಕ ಕೇಂದ್ರಗಳ ಮೇಲೆ ಜಾತ್ಯಾತೀತ ಹೆಸರಿನಲ್ಲಿ ಧರ್ಮವಿರೋಧಿಗಳು ನಡೆಸುತ್ತಿರುವ ಆಕ್ರಮಣಗಳನ್ನ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಜಾಗೃತಿ ಪಾದಯಾತ್ರೆ ಹಾಗೂ ಬಾನು ಮುಷ್ತಾಕ್ ರವರು ದಸರಾ ಉದ್ಘಾಟನೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿರುವ ಹಿನ್ನಲೆ ಇಂದು ಚಾಮುಂಡಿ ಚಲೋ ಕಾರ್ಯಕ್ರಮ ಹಮಿಕೊಳ್ಳಲಾಗಿತ್ತು.
ಮತ್ತೊಂದೆಡೆ ಮುಷ್ತಾಕ್ ಆಯ್ಕೆ ಸಮರ್ಥಿಸಿ ಪಾದಯಾತ್ರೆ ನಡೆಸಲು ಕೆಲ ದಲಿತ ಸಂಘಟನೆಗಳು ಕರೆ ನೀಡಿದ್ದವು. ಎರಡು ಪಾದಯಾತ್ರೆಗಳಿಗೆ ಪೊಲೀಸರು ಅನುಮತಿ ನೀಡಿರಲಿಲ್ಲ. ಅನುಮತಿ ಇಲ್ಲದಿದ್ದರೂ ಕೂಡ ಪಾದಯಾತ್ರೆ ಮಾಡುವುದಾಗಿ ಮುಂದಾಗಿದ್ದರು.
ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಚಲೋಗೆ ಬಿಜೆಪಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಕನ್ನಡ ವಿರೋಧಿ ಭಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಡುವುದಿಲ್ಲ ಎಂದು ಕಾರ್ಯಕರ್ತರು ಕುರುಬರಹಳ್ಳಿ ವೃತ್ತದ ಬಳಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಯಿತು.
ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೈಸೂರಿನಿಂದ ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಪೋಲೀಸರ ಸರ್ಪಗಾವಲು ಹಾಕಲಾಗಿದೆ.