ಬೆಂಗಳೂರು,ಸೆ.10– ಬೆಂಗಳೂರಿನಿಂದ ಹುಬ್ಬಳ್ಳಿ-ಶಿವಮೊಗ್ಗಕ್ಕೆ ಈ ಹಿಂದೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಪುನಃ ಪ್ರಾರಂಭಿಸಬೇಕೆಂದು ನೆಲಮಂಗಲ ಮೂಲದ ರೈಲ್ವೆ ಪ್ರಯಾಣಿಕರು ಕೇಂದ್ರ ಸಚಿವ ಸೋಮಣ್ಣ ಅವರ ಬಳಿ ಮನವಿ ಮಾಡಿದ್ದಾರೆ.ಕಳೆದ 2019 ರ ಮುಂಚೆ 3 ಪ್ಯಾಸೆಂಜರ್ ರೈಲುಗಳಾದ ಮಹಾಲಕ್ಷ್ಮಿ ಫಾಸ್ಟ್ ಪ್ಯಾಸೆಂಜರ್, ಹುಬ್ಬಳ್ಳಿ-ಶಿವಮೊಗ್ಗ, ಬೆಂಗಳೂರು-ಹುಬ್ಬಳ್ಳಿ ಪ್ಯಾಸೆಂಜರ್, ಮೈಸೂರು-ಬೆಳಗಾವಿ ಎಕ್ಸ್ ಪ್ರೆಸ್, ವಿಶ್ವಮಾನ್ಯ ಎಕ್ಸ್ ಪ್ರೆಸ್, ಬೆಂಗಳೂರು-ಶಿವಮೊಗ್ಗ ನಡುವಿನ ರೈಲು ನೆಲಮಂಗಲ ಮಾರ್ಗವಾಗಿ ಸಂಚರಿಸುತ್ತಿತ್ತು. ಇದರಿಂದ ಸಾಕಷ್ಟು ಅನುಕೂಲಗವಾಗುತ್ತಿತ್ತು. ಆದರೆ ಕೊರೋನಾದಿಂದ ಲಾಕ್‌ಡೌನ್ ನಂತರ ಈ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.
ಬೆಂಗಳೂರಿನಿಂದ ನೆಲಮಂಗಲ, ತ್ಯಾಮಗೊಂಡ್ಲು, ತುಮಕೂರಿಗೆ ಬರುವ ಅನೇಕ ವಿದ್ಯಾರ್ಥಿಗಳು, ಉಪಾಧ್ಯಾಯರು, ಶಿಕ್ಷಕರು, ರೈತರು ಸೇರಿದಂತೆ ವಿವಿಧ ಇಲಾಖೆಗಳ ಉದ್ಯೋಗಿಗಳು ಇಲ್ಲಿನ ದೇವಸ್ಥಾನ, ಮಠಗಳಿಗೆ ತೆರಳಲು ರೈಲು ಸೇವೆಯನ್ನು ಪಡೆಯುತ್ತಿದ್ದರು. ಆದರೆ ಈಗ ಸಂಚರಿಸುತ್ತಿರುವ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಇದೆ.
ಇದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುತ್ತಿಲ್ಲ. ಬೆಳಗಿನ ಸಮಯ ರೈಲುಗಳು ಇರುವುದಿಲ್ಲ. ಹೀಗಾಗಿ ಈ ಹಿಂದೆ ಸಂಚರಿಸುತ್ತಿದ್ದ 6 ರೈಲುಗಳನ್ನು ಪುನಃ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ನಗರ, ಮಲ್ಲೇಶ್ವರ, ಯಶವಂತಪುರ, ಚಿಕ್ಕಬಾಣಾವರ, ಸೋಲದೇವನಹಳ್ಳಿ, ಗೊಲ್ಲಹಳ್ಳಿ, ಭೈರನಾಯಕನಹಳ್ಳಿ, ದೊಡ್ಡಬೆಲೆ, ಮುದ್ದಲಿಂಗನಹಳ್ಳಿ, ನಿಡುವಂದ, ದಾಬಸ್‌ಪೇಟೆ, ಹಿರೇಹಳ್ಳಿ, ಕ್ಯಾತ್ಸಂದ್ರ, ತುಮಕೂರು ಭಾಗದಲ್ಲಿ ಅತೀ ಹೆಚ್ಚು ಜನರು ವಾಸಿಸುತ್ತಿದ್ದು, ಪ್ಯಾಸೆಂಜರ್ ರೈಲಿನ ಓಡಾಟದಿಂದಾಗಿ ಅನುಕೂಲವಾಗುತ್ತದೆ. ಹೀಗಾಗಿ ರೈಲುಗಳನ್ನು ಪುನಃ ಚಾಲನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.