ಲಖ್ನೋ,ಸೆ.10– ನೆರೆಯ ನೇಪಾಳದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ, ಹಿಮಾಲಯನ್ ರಾಷ್ಟ್ರದೊಂದಿಗಿನ ಏಳು ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಉತ್ತರ ಪ್ರದೇಶ ಸರ್ಕಾರ ಪೊಲೀಸ್ ಆಡಳಿತಕ್ಕೆ ನಿರ್ದೇಶನ ನೀಡಿದೆ. ಭ್ರಷ್ಟಾಚಾರದ ವಿರುದ್ಧ ಯುವಕರ ನೇತೃತ್ವದಲ್ಲಿ ನಡೆದ ಹಿಂಸಾತಕ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಮತ್ತು ವಿವಾದಾತಕ ಸಾಮಾಜಿಕ ಮಾಧ್ಯಮ ನಿಷೇಧದ ನಂತರ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬಲರಾಮ್ಪುರ್, ಬಹ್ರೈಚ್, ಪಿಲಿಭಿತ್, ಲಖಿಮ್ಪುರ ಖೇರಿ, ಸಿದ್ಧಾರ್ಥನಗರ ,ಮಹಾರಾಜಗಂಜ್‌ನಲ್ಲಿ ದಿನದ 24 ಗಂಟೆಯೂ ಕಣ್ಗಾವಲು, ಗಸ್ತು ತೀವ್ರಗೊಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿನೆ ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ ಶ್ರಾವಸ್ತಿ ತಿಳಿಸಿದ್ದಾರೆ.
ನೇಪಾಳದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲು ಲಕ್ನೋದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಒಂದು ವಾಟ್ಸಾಪ್ ಸಂಖ್ಯೆ ಸೇರಿದಂತೆ ಮೂರು ಸಹಾಯವಾಣಿ ಸಂಖ್ಯೆಗಳು 2್ಠ47 ಕಾರ್ಯನಿರ್ವಹಿಸುತ್ತವೆ – 0522-2390257, 0522-2724010, ಮತ್ತು 9454401674 (ವಾಟ್ಸಾಪ್ 9454401674 ನಲ್ಲಿಯೂ ಲಭ್ಯವಿದೆ).
ಱಉತ್ತರ ಪ್ರದೇಶ ಪೊಲೀಸರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ನೇಪಾಳದಲ್ಲಿ ಸಿಲುಕಿರುವ ಭಾರತೀಯ ನಾಗರಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸಂಪೂರ್ಣವಾಗಿ ಬದ್ಧರಾಗಿದ್ದಾರೆ ಎಂದು ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ಹೇಳಿದ್ದಾರೆ.
ಭಾರತ-ನೇಪಾಳ ಗಡಿಯನ್ನು ಮುಚ್ಚಲಾಗಿಲ್ಲವಾದರೂ, ಕಟ್ಟೆಚ್ಚರವನ್ನು ಹೆಚ್ಚಿಸಲಾಗಿದೆ. ಮುಕ್ತ ಗಡಿಯನ್ನು ನಿರ್ವಹಿಸುವ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್ಬಿ), ಸಮಾಜ ವಿರೋಧಿ ಶಕ್ತಿಗಳ ಒಳನುಸುಳುವಿಕೆಯನ್ನು ತಡೆಗಟ್ಟಲು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದೆ. ದೇವಿಪಟನ್ ವಿಭಾಗದ ಆಯುಕ್ತ ಶಶಿ ಲಾಲ್ ಭೂಷಣ್ ಸುಶೀಲ್ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಪೊಲೀಸ್ ಮತ್ತು ಎಸ್‌ಎಸ್‌ಬಿ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುವಂತೆ ಸೂಚಿಸಿದ್ದಾರೆ.
ಹೊತ್ತಿ ಉರಿಯುತ್ತಿರುವ ನೇಪಾಳ :
ನೇಪಾಳದ ರಾಜಧಾನಿ ಕಠಂಡು ಮತ್ತು ಇತರ ಹಲವಾರು ನಗರಗಳಲ್ಲಿ ಹಿಂಸಾತಕ ಘರ್ಷಣೆಗಳು ನಡೆದ ನಂತರ ಈ ಎಚ್ಚರಿಕೆಯನ್ನು ಹೆಚ್ಚಿಸಲಾಗಿದೆ. ಅಲ್ಲಿ ಪ್ರತಿಭಟನಾಕಾರರು ಸಂಸತ್ತು ಕಟ್ಟಡ, ಶೀತಲ್ ನಿವಾಸ್‌ನಲ್ಲಿರುವ ಅಧ್ಯಕ್ಷರ ಕಚೇರಿ ಮತ್ತು ಉನ್ನತ ನಾಯಕರ ನಿವಾಸಗಳಿಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಗುಂಡಿನ ದಾಳಿ ಮತ್ತು ಘರ್ಷಣೆಗಳಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಂಗಳವಾರ, ನೇಪಾಳ ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಶಾಂತವಾಗಿರಲು ಮನವಿ ಮಾಡಿದರು. ಪ್ರತಿಭಟನಾಕಾರರು ವಿನಾಶದ ಬದಲು ಮಾತುಕತೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು. ಪ್ರಜಾಪ್ರಭುತ್ವದಲ್ಲಿ, ನಾಗರಿಕರು ಎತ್ತುವ ಬೇಡಿಕೆಗಳನ್ನು ಸಂವಾದ ಮತ್ತು ಮಾತುಕತೆಯ ಮೂಲಕ ಪರಿಹರಿಸಬಹುದು ಎಂದು ಅವರು ದಿ ಹಿಮಾಲಯನ್ ಟೈಮ್ಸೌ ಉಲ್ಲೇಖಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದಾಯ ಮತ್ತು ಸೈಬರ್ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಸೇರಿದಂತೆ 26 ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರದಿಂದ ಅಶಾಂತಿ ಉಂಟಾಯಿತು. ನಂತರ ನಿಷೇಧವನ್ನು ಹಿಂತೆಗೆದುಕೊಂಡರೂ, ಈ ಕ್ರಮವು ಸಾರ್ವಜನಿಕ ಕೋಪವನ್ನು ಹೆಚ್ಚಿಸಿತು, ಪ್ರತಿಭಟನಾಕಾರರು ಭ್ರಷ್ಟಾಚಾರವನ್ನು ಕೊನೆಗೊಳಿಸಲು ಮತ್ತು ಆಡಳಿತದಲ್ಲಿ ಹೆಚ್ಚಿನ ಹೊಣೆಗಾರಿಕೆಯನ್ನು ಒತ್ತಾಯಿಸಿದರು.
ಪ್ರತಿಭಟನೆಗಳು ನೇಪಾಳಗಂಜ್‌ನಂತಹ ಗಡಿ ಪಟ್ಟಣಗಳಿಗೂ ಹರಡಿದ್ದು, ಅಲ್ಲಿ ಶಾಲೆಗಳು ಮತ್ತು ವ್ಯವಹಾರಗಳು ಸತತ ಎರಡನೇ ದಿನವೂ ಮುಚ್ಚಲ್ಪಟ್ಟಿವೆ. ರಸ್ತೆಗಳಲ್ಲಿ ಟೈರ್‌ಳನ್ನು ಹಚ್ಚಿ ಸಂಚಾರ ನಿರ್ಬಂಧಿಸಲಾಗಿದೆ ಮತ್ತು ಸರ್ಕಾರಿ ಕಚೇರಿಗಳಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ.