ಬೆಂಗಳೂರು,ಸೆ.11– ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ನಗರದ ಹಲವಾರು ಕಡೆ ಮರಗಳು ಧರೆಗುರುಳಿ ಅವಾಂತರ ಸೃಷ್ಟಿಸಿದರೆ ಮತ್ತೊಂದು ಕಡೆ ಶೆಡ್ ಮೇಲೆ ಗೋಡೆ ಬಿದ್ದು ತಾಯಿ, ಮಗ ಗಂಭೀರ ಗಾಯಗೊಂಡಿದ್ದಾರೆ.
ರಾಜಾಜಿನಗರದ ನಾಲ್ಕನೇ ಬ್ಲಾಕ್‌ನಲ್ಲಿ ವಾಹನಗಳ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮೂರು ಕಾರುಗಳು ಹಾಗೂ ಎರಡು ಬೈಕ್‌ಗಳು ಜಖಂಗೊಂಡಿವೆ.ಮನೆ ಮುಂದೆಯೇ ಈ ಮರ ಉರುಳಿದ್ದರಿಂದ ಅಕ್ಕಪಕ್ಕದ ಎರಡು ಕುಟುಂಬದವರೂ ಮನೆಯಿಂದ ಹೊರಬರಲಾಗದೇ ಪರದಾಡುವಂತಾಯಿತು.
ಅದೇ ರೀತಿ ಚಾಮರಾಜಪೇಟೆಯ ಐದನೇ ಮುಖ್ಯರಸ್ತೆಗೆ ಅಡ್ಡಲಾಗಿ ಮರವೊಂದು ಉರುಳಿದ್ದರಿಂದ ಈ ಮಾರ್ಗದಲ್ಲಿ ವಾಹನಗಳು ಕೆಲಕಾಲ ಸಂಚರಿಸಲು ಸಾಧ್ಯವಾಗಲಿಲ್ಲ.
ಜೆ.ಪಿ.ನಗರ ಮೂರನೇ ಹಂತ, ಬನಶಂಕರಿ, ಡಾಲರ್‌ರಸ ಕಾಲೋನಿಗಳಲ್ಲೂ ಮರಗಳು ಉರುಳಿದ್ದರಿಂದ ಸಂಚಾರಕ್ಕೆ ಅಡಚಣೆಯುಂಟಾಯಿತು.
ಮಳೆಯಿಂದಾಗಿ ಎಲ್ಲೆಲ್ಲಿ ಮರಗಳು ಉರುಳಿವೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ ಜಿಬಿಎ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ, ಅಗ್ನಿ ಶಾಮಕ ಸಿಬ್ಬಂದಿಗಳು ಮರಗಳನ್ನು ಕತ್ತರಿಸಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮನೆಗಳಿಗೆ ನುಗ್ಗಿದ ನೀರು:
ಬಾಣಸವಾಡಿ, ರಾಜಾಜಿನಗರ, ಜೆ.ಪಿ.ನಗರದ ತಗ್ಗುಪ್ರದೇಶಗಳ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ನೀರನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.
ತಾಯಿ-ಮಗ ಗಂಭೀರ :
ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗರದ ವಿಭೂತಿಮಠದ ರಸ್ತೆಯಲ್ಲಿ ಗೋಡೆಯೊಂದು ಶೆಡ್ ಮೇಲೆ ಕುಸಿದು ಬಿದ್ದ ಪರಿಣಾಮ ತಾಯಿ-ಮಗ ಗಾಯಗೊಂಡಿದ್ದು, ಕಗ್ಗ ದಾಸನಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ಸ್ಥಳದಲ್ಲಿ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು, ಅದಕ್ಕೆ ಹೊಂದಿಕೊಂಡಂತೆ ಶೆಡ್ ಹಾಕಿಕೊಂಡು ಲಿಂಗಸೂರಿನ ಗಂಗಮ ಅವರು ಮಗ ಸಂಗಮೇಶ್ ಜೊತೆ ವಾಸವಿದ್ದರು. ರಾತ್ರಿ ಸುರಿದ ಮಳೆಯಿಂದಾಗಿ ಗೋಡೆ ಶಿಥಿಲಗೊಂಡು ಶೆಡ್ ಮೇಲೆ ಬಿದ್ದ ಪರಿಣಾಮ ಈ ಘಟನೆ ನಡೆದಿದೆ.
ಒಟ್ಟಾರೆ ನಗರದಲ್ಲಿ ರಾತ್ರಿ ಸುಮಾರು 3 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿದೆ.