ಬೆಂಗಳೂರು:ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮತ್ತು ನಟರಾದ ಡಾ. ವಿಷ್ಣುವರ್ಧನ ಹಾಗೂ ಬಿ. ಸರೋಜಾದೇವಿಗೆ ಕರ್ನಾಟಕ ರತ್ನ ನೀಡಲು ರಾಜ್ಯ ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ರವರು ತಿಳಿಸಿದರು.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಭೂಸ್ವಾಧೀನ ಪರಿಹಾರಕ್ಕೆ ಸೆ. 16 ರಂದು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯವಿರುವ ಜಮೀನಿಗೆ ಪರಿಹಾರ ನೀಡಲು ಮತ್ತು ಭೂಸ್ವಾಧೀನ ಕೈಗೊಳ್ಳಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಸೆ.16 ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ ಎಂದ ಅವರು ತಿಳಿಸಿದರು.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ತ್ವರಿತವಾಗಿ ಕೈಗೊಳ್ಳುವ ಕುರಿತಂತೆ ಒಪ್ಪಂದದ ಐತೀರ್ಪು ರಚಿಸಲು ಏಕರೂಪದ ದರ ನಿಗದಿಪಡಿಸಲು ಹಾಗೂ ಇನ್ನಿತರ ಆಡಳಿತಾತ್ಮಕ ವಿಷಯಗಳಿಗೆ ಅನುಮೋದನೆ ನೀಡುವ ಕುರಿತು ವಿಸ್ತೃತವಾದ ಹಾಗೂ ಸಕಾರಾತ್ಮಕ ಚರ್ಚೆ ನಡೆದಿದೆ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮತ್ತು ನಿಗಮ/ಮಂಡಳಿಗಳಲ್ಲಿ ಲಕ್ಷಾಂತರ ಕೆಲಸಗಾರರು (ನೌಕರರು ಎಂದು ಕರೆಸಲ್ಪಡುವವರು) ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಸೇವಾ ಭದ್ರತೆ ಮತ್ತು ಇತರ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ ಸಚಿವ ಸಂಪುಟಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸಚಿವ ಸಂಪುಟದ ಉಪಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ವಿವಿಧ ಇಲಾಖೆಗಳು ಮತ್ತು ಇಲಾಖೆಗಳ ಅಧಿನದಲ್ಲಿರುವ ನಿಗಮ/ಮಂಡಳಿಗಳಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಗಳ ಬಗ್ಗೆ ಸೂಕ್ತ ನಿರ್ಣಯ ಸಚಿವ ಸಂಪುಟದ ಉಪಸಮಿತಿ ಕೈಗೊಳ್ಳಲಿದೆ ಎಂದರು. ಹೊರಗುತ್ತಿಗೆ ನೌಕರರು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಅಪಾಯಕಾರಿ ಸೇವೆ ಸಲ್ಲಿಸುವ ನೌಕರರ ಹಿತರಕ್ಷಣೆ ಮಾಡುವ ದೃಷ್ಟಿಯಿಂದ ಸಚಿವ ಸಂಪುಟ ಉಪಸಮಿತಿ ಶಿಫಾರಸ್ಸಿನ ಆಧಾರದ ಮೇಲೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.