Friday, September 12, 2025
Homeರಾಷ್ಟ್ರೀಯ | Nationalನವೋದ್ಯಮಗಳಿಗೆ 100 ಕೋಟಿ ರೂ. ಆರ್ಥಿಕ ನೆರವು : ಸಚಿವ ಜೋಶಿ

ನವೋದ್ಯಮಗಳಿಗೆ 100 ಕೋಟಿ ರೂ. ಆರ್ಥಿಕ ನೆರವು : ಸಚಿವ ಜೋಶಿ

Pralhad Joshi announces ₹100 cr support for green hydrogen start-ups

ನವದೆಹಲಿ, ಸೆ.12- ಹಸಿರು ಹೈಡ್ರೋಜನ್‌ ಸಂಶೋಧನೆ ಮತ್ತು ಅಭಿವೃದ್ಧಿನಿರತ ನವೋದ್ಯಮಗಳಿಗೆ ಕೇಂದ್ರ ಸರ್ಕಾರ ಒಟ್ಟಾರೆ 100 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ಮೊದಲ ವಾರ್ಷಿಕ ಹಸಿರು ಹೈಡ್ರೋಜನ್‌ ಸಂಶೋಧನೆ ಮತ್ತು ಅಭಿವೃದ್ಧಿ ಸಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಹಸಿರು ಹೈಡ್ರೋಜನ್‌ ನಾವೀನ್ಯತೆಯಲ್ಲಿ ನವೋದ್ಯಮಗಳನ್ನು ಬೆಂಬಲಿಸಲು 100 ಕೋಟಿ ರೂ. ಆರ್ಥಿಕ ನೆರವಿಗೆ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ ಎಂದರು.

ನವೀನ ಜಲಜನಕ ಉತ್ಪಾದನೆ, ಸಂಗ್ರಹಣೆ, ಸಾರಿಗೆ ಮತ್ತು ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆಯ ಪ್ರತಿ ಯೋಜನೆಗೆ 5 ಕೋಟಿ ವರೆಗೆ ಒದಗಿಸುತ್ತದೆ. ಎಲೆಕ್ಟ್ರೋಲೈಜರ್‌ ಉತ್ಪಾದನೆಯಿಂದ ಹಿಡಿದು ಎಐ-ಚಾಲಿತ 25 ನವೋದ್ಯಮಗಳು ನಾವೀನ್ಯತೆ ಪ್ರದರ್ಶಿಸುತ್ತಿವೆ. ರಸಗೊಬ್ಬರಗಳಲ್ಲಿ ಭಾರತ ಮೊದಲ ಹಸಿರು ಅಮೋನಿಯಾ ಹರಾಜು ನಡೆಸಿದ್ದು, 2024ರಲ್ಲಿ ಪ್ರತಿ ಕೆಜಿಗೆ 100.28ರೂ.ಇದ್ದರೆ, ಇದೀಗ ಪ್ರತಿ ಕೆಜಿಗೆ ಅದರ ಅರ್ಧದಷ್ಟು ಅಂದರೆ ಕೇವಲ 49.75 ರೂ. ಐತಿಹಾಸಿಕವಾಗಿ ಕಡಿಮೆ ಬೆಲೆ ದಾಖಲಾಗಿದೆ. ಒಡಿಶಾದ ಪ್ಯಾರದೀಪ್‌ ಫಾಸ್ಫೇಟ್‌ಗಳಲ್ಲಿ ಸರಬರಾಜು ಪ್ರಾರಂಭವಾಗಲಿದೆ ಎಂದು ಹೇಳಿದರು.

ಜುಲೈ 14ರಂದು ಆರಂಭಿಸಿದ 2ನೇ ಸುತ್ತಿನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಸ್ತಾವನೆಗಳು ಸೆ.15ರವರೆಗೆ ತೆರೆದಿರುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಇಯು-ಭಾರತ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗ ನೀಡಲಿದೆ. ತ್ಯಾಜ್ಯದಿಂದ ಹೈಡ್ರೋಜನ್‌ ಉತ್ಪಾದನೆಗೆ 30ಕ್ಕೂ ಹೆಚ್ಚು ಜಂಟಿ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದರು.

ವಾರ್ಷಿಕ 5 ಮಿ.ಮೆ. ಟನ್‌ ಹಸಿರು ಹೈಡ್ರೋಜನ್‌: ಭಾರತ 2030ರ ವೇಳೆಗೆ ವಾರ್ಷಿಕವಾಗಿ 5 ಮಿಲಿಯನ್‌ ಮೆಟ್ರಿಕ್‌ ಟನ್‌ ಹಸಿರು ಹೈಡ್ರೋಜನ್‌ ಉತ್ಪಾದನೆ ಗುರಿ ಹೊಂದಿದ್ದು, 125 ಜಿಡ್ಲ್ಯು ಹೊಸ ನವೀಕರಿಸಬಹುದಾದ ಸಾಮರ್ಥ್ಯ ಮತ್ತು 8 ಲಕ್ಷ ಕೋಟಿ ರೂ. ಹೂಡಿಕೆಗೆ ಒತ್ತು ನೀಡಲಾಗಿದೆ. ಇದರಿಂದ 6 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಪ್ರತಿ ವರ್ಷ 50 ಮಿಲಿಯನ್‌ ಟನ್‌ ಸಿಓ2 ಕಡಿತವಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ 2023ರಲ್ಲಿ 19,744 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌ಪ್ರಾರಂಭಿಸಿದ ಮೇಲೆ ಭಾರತ ಹಸಿರು ಹೈಡ್ರೋಜನ್‌ಗಾಗಿ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಹಸಿರು ಅಮೋನಿಯಾ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಂತೆ ಮೊದಲ ಸುತ್ತಿನಲ್ಲೇ 23 ಯೋಜನೆಗಳನ್ನು ನೀಡಿದ್ದು, ಐಐಟಿ, ಐಐಎಸ್‌‍ಇಆರ್‌, ಸಿಎಸ್‌‍ಐಆರ್‌ ಪ್ರಯೋಗಾಲಯ ಮತ್ತು ಕೈಗಾರಿಕಾ ಪಾಲುದಾರರು ಈ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದರು.

ಭಾರತದ ಮೊದಲ ಬಂದರು ಆಧಾರಿತ ಹಸಿರು ಹೈಡ್ರೋಜನ್‌ ಪೈಲಟ್‌ ಯೋಜನೆಯನ್ನು ತಮಿಳುನಾಡಿನ ವಿ.ಒ.ಚಿದಂಬರನಾರ್‌ ಬಂದರಿನಲ್ಲಿ ಪ್ರಾರಂಭಿಸಲಾಗಿದೆ. ಉಕ್ಕಿನ ವಲಯದಲ್ಲಿ ಐದು ಪೈಲಟ್‌ ಯೋಜನೆಗಳು ಹೈಡ್ರೋಜನ್‌ ಆಧಾರಿತ ಡಿಕಾರ್ಬೊನೈಸೇಶನ್‌ ಪ್ರದರ್ಶಿಸುತ್ತಿವೆ. ಇಂಧನ ಭರ್ತಿ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ. ಹೈಡ್ರೋಜನ್‌ ಬಸ್‌‍ ಮತ್ತು ಇಂಧನ ತುಂಬುವ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ವಿವರಿಸಿದರು.

ಲಕ್ಷಾಂತರ ಉದ್ಯೋಗ ಸೃಷ್ಟಿ:
ಭಾರತದ ರಫ್ತು ಬಲಪಡಿಸಲು ಕಾಂಡ್ಲಾ, ಪ್ಯಾರದೀಪ್‌ ಮತ್ತು ಟುಟಿಕೋರಿನ್‌ ಬಂದರುಗಳಲ್ಲಿ ಹೈಡ್ರೋಜನ್‌ ಹಬ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಎನ್‌ಟಿಪಿಸಿ, ರಿಲಯನ್‌್ಸ ಮತ್ತು ಐಒಸಿಎಲ್‌ನಂತಹ ದೊಡ್ಡ ಉದ್ಯಮಗಳು, ಸ್ಟಾರ್ಟ್‌-ಅಪ್‌ಗಳು ಮತ್ತು ಎಂಎಸ್‌‍ಎಂಇಗಳು ಹೈಡ್ರೋಜನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಇದರಿಂದ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕಾರ್ಯದರ್ಶಿ ಸಂತೋಷ್‌ ಕುಮಾರ್‌ ಸಾರಂಗಿ ಮಾತನಾಡಿ, ಹಸಿರು ಹೈಡ್ರೋಜನ್‌ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ 400 ಕೋಟಿ ರೂ. ಬಜೆಟ್‌ ಹೊಂದಿದ್ದು, ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌ ಚಾಲನೆ ಬೆಂಬಲಿಸಲು ಸಿದ್ಧವಾಗಿದೆ ಎಂದರು. ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಮಿಷನ್‌ ನಿರ್ದೇಶಕ ಡಾ.ಅಭಯ್‌ ಭಾಕ್ರೆ, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್‌ ಕುಮಾರ್‌ ಸೂದ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News