Friday, September 12, 2025
Homeರಾಜ್ಯಮುಂಗಾರು ಚೇತರಿಕೆ : ರಾಜ್ಯದಲ್ಲಿ ಸೆ.18ರವರೆಗೂ ಮಳೆ ಸಾಧ್ಯತೆ

ಮುಂಗಾರು ಚೇತರಿಕೆ : ರಾಜ್ಯದಲ್ಲಿ ಸೆ.18ರವರೆಗೂ ಮಳೆ ಸಾಧ್ಯತೆ

Monsoon recovery: Rain likely in the state till September 18

ಬೆಂಗಳೂರು, ಸೆ.12-ನೈಋತ್ಯ ಮುಂಗಾರು ಮತ್ತೆ ಪ್ರಬಲವಾಗಿದ್ದು, ನಾಲ್ಕೈದು ದಿನಗಳ ಕಾಲ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ. ದುರ್ಬಲಗೊಂಡಿದ್ದ ಮುಂಗಾರು ಕಳೆದ ಎರಡು ದಿನಗಳಿಂದ ಚೇತರಿಸಿಕೊಂಡಿದ್ದು, ಒಳನಾಡಿನ ಹಲವೆಡೆ ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಮೇಲೈ ಸುಳಿಗಾಳಿಯ ಪ್ರಭಾವದಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಹಲವೆಡೆ ಮಳೆ ಬಿದ್ದಿದೆ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಬೀದರ್‌ ಜಿಲ್ಲೆಯಲ್ಲಿ ನಿನ್ನೆ ವ್ಯಾಪಕ ಪ್ರಮಾಣದ ಮಳೆಯಾಗಿದೆ. ರಾಯಚೂರು, ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣವಾಗಿ ವ್ಯಾಪಕ ಮಳೆ ಬಿದ್ದಿದೆ. ಮಾನ್ವಿ ತಾಲ್ಲೂಕಿನ ತೋರಂಡಿನ್ನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 77.5 ಮಿ.ಮೀ.ನಷ್ಟು ಅತಿ ಹೆಚ್ಚು ಮಳೆಯಾಗಿದೆ.

ಕೊಪ್ಪಳ, ಕಲಬುರಗಿ, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಮಳೆಯಾಗಿದ್ದು, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಕೋಲಾರ, ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ವಿಜಯನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಕೆಲವೆಡೆ ಮಾತ್ರ ಮಳೆ ಬಿದ್ದಿದೆ. ಉಳಿದಂತೆ ಒಣಹವೆ ಮುಂದುವರೆದಿದ್ದು, ಅತ್ಯಲ್ಪ ಪ್ರಮಾಣದ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಸೆ.18ರವರೆಗೂ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಸೆ.14ರವರೆಗೆ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಸಿ.ಎಸ್‌‍.ಪಾಟೀಲ್‌ ತಿಳಿಸಿದ್ದಾರೆ.

ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಹಾಗೂ ಕರಾವಳಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಹೊಂದಿಕೊಂಡಂತೆ ವಾಯುಭಾರ ಕುಸಿತ ಹಾಗೂ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮದಿಂದ ರಾಜ್ಯದ ದಕ್ಷಿಣ ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆಗಳಿವೆ.

ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News