ಮೈಸೂರು, ಸೆ.12- ಹಿಂದೂಗಳ ಧರ್ಮಾಚರಣೆಗೆ ಅಡ್ಡಿ ಪಡಿಸುತ್ತಿರುವ ಸಿದ್ದರಾಮಯ್ಯ ಅವರ ಸರ್ಕಾರ ಮುಂದಿನ 3 ತಿಂಗಳಲ್ಲೇ ಪತನವಾಗಲಿದೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭವಿಷ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ವಿಸರ್ಜನೆ ಹಾಗೂ ಇತರೆ ಸಂದರ್ಭಗಳಲ್ಲಿ ಮಸೀದಿಗಳಿಂದ ಕಲ್ಲು ತೂರಾಟ ನಡೆಸಿರುವುದು, ಹಲವು ಕಡೆ ಪಾಕಿಸ್ತಾನದ ಧ್ವಜರೋಹಣ, ಪಾಕಿಸ್ತಾನದ ಪರ ಘೋಷಣೆ ಸೇರಿದಂತೆ ಅನೇಕ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಹಿಂದೂ ವಿರೋಧಿ ಧೋರಣೆಯನ್ನು ಬದಲಾಯಿಸಿಕೊಳ್ಳದಿದ್ದರೆ 2028ಕ್ಕೂ ಮುಂಚೆಯೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶೋತ್ಸವದ ಮೇಲೆ ಕಲ್ಲು ತೂರಿದ ಪ್ರಕರಣದ ವಿರುದ್ಧ ಪ್ರತಿಭಟನೆಗಳಾದಾಗ ಬಿಜೆಪಿ ನಾಯಕರ ಎದುರು ಕಾರ್ಯಕರ್ತರು ಯತ್ನಾಳ್ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದ್ದರು. ಅದರಂತೆ ನಾನು ಅಲ್ಲಿಗೆ ಹೋಗಿದ್ದೆ. ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಭ್ರಷ್ಟ ಸರ್ಕಾರ ತೊಲಗಬೇಕು, ಹೊಂದಾಣಿಕೆಯ ರಾಜಕಾರಣ ಕೊನೆಯಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಗಣೇಶ ವಿಸರ್ಜನಾ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಸಲು ಆಶ್ರಯ ನೀಡಿರುವ ಅಕ್ರಮ ಮಸೀದಿಗಳನ್ನು ನೆಲ ಸಮಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುತ್ತೇನೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಇದೇ ಧೋರಣೆ ಮುಂದುವರೆದರೆ, ರಾಜ್ಯದಲ್ಲಿ ನೇಪಾಳದ ಮಾದರಿಯಲ್ಲಿ ಕ್ರಾಂತಿಯಾಗುತ್ತದೆ. ರಾಜ್ಯದಲ್ಲಿ ಮಸೀದಿಗಳನ್ನು ಪರಿಶೀಲನೆಗೊಳಪಡಿಸಬೇಕು. ಕಲ್ಲು ತೂರಾಟಕ್ಕೆ ಮುಂಚಿತವಾಗಿಯೇ ಮಸೀದಿಗಳಲ್ಲಿ ಕಲ್ಲುಗಳನ್ನು ಸಂಗ್ರಹಿಸಲಾಗಿದೆ. ಇದಕ್ಕೆ ಅವಕಾಶ ನೀಡಿದ ಬಗ್ಗೆ ತನಿಖೆಯಾಗಬೇಕು ಹಾಗೂ ಮಸೀದಿಗಳನ್ನು ತಪಾಸಣೆಗೊಳಪಡಿಸಬೇಕು ಎಂದರು.
ಕಾಂಗ್ರೆಸ್ ಸರ್ಕಾರ ತಮಗೆ ಮುಸ್ಲಿಮರು ಮಾತ್ರ ಮತ ಹಾಕಿದ್ದಾರೆ ಎಂಬಂತೆ ವರ್ತಿಸುತ್ತಿದೆ. ಹಿಂದೂ ವಿರೋಧಿ ನಿಲುವುಗಳನ್ನು ಪಾಲಿಸುತ್ತಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರನ್ನು ಅಹ್ವಾನಿಸುವ ಸಿದ್ದರಾಮಯ್ಯ ಅವರಿಗೆ ಚಾಮುಂಡಿ ದೇವಿಯ ಶಾಪ ತಟ್ಟಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಸಾವಿರಾರು ಕೋಟಿ ಲೂಟಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿಗಮಗಳ ಹಣವನ್ನು ದೋಚಲಾಗಿದೆ. ಭ್ರಷ್ಟ ಸರ್ಕಾರದ ಜೊತೆ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧವೂ ಸಾಕಷ್ಟು ಭ್ರಷ್ಟಚಾರ ಪ್ರಕರಣಗಳಿವೆ. ಹೀಗಾಗಿ ಭ್ರಷ್ಟರೆಲ್ಲಾ ಸೇರಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನಮ ತಂಡದ ಸರ್ಕಾರ ರಚನೆಯಾಗಲಿದೆ. ಭ್ರಷ್ಟಾಚಾರ ರಹಿತವಾದ ಸರ್ಕಾರ ನೀಡುತ್ತೇವೆ. ಹಿಂದುತ್ವದ ರಕ್ಷಣೆ ಹಾಗೂ ಅಭಿವೃದ್ಧಿ ಪರ ಆಡಳಿತ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಪೂಜ್ಯ ತಂದೆ ಮತ್ತು ಮಗ ಹೊರತು ಪಡಿಸಿ ಉಳಿದ ಎಲ್ಲಾ ಬಿಜೆಪಿ ನಾಯಕರೂ ನನ್ನ ಸಂಪರ್ಕದಲ್ಲಿದ್ದಾರೆ. ಯಡಿಯೂರಪ್ಪ ಅವರು ಅಮಿತ್ ಶಾ ಅವರ ಮುಂದೆ ಕುಳಿತು ಯತ್ನಾಳರನ್ನು ಉಚ್ಚಾಟನೆ ಮಾಡದೇ ಇದ್ದರೆ ನಾನು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಬ್ಲಾಕ್‌ಮೇಲ್ ಮಾಡಿದ್ದರು. ಅದಕ್ಕಾಗಿ ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಈ ಕ್ರಮ ತೆಗೆದುಕೊಂಡಿದ್ದು ತಪ್ಪಾಗಿದೆ ಎಂದು ಖುದ್ದು ಅಮಿತ್ ಶಾ ಅವರೇ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ತಿಳಿದು ಬಂದಿದೆ ಎಂದರು.
ಪ್ರಧಾನ ಮಂತ್ರಿಯವರು ಭ್ರಷ್ಟಚಾರ ರಹಿತ ಹಾಗೂ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಾರೆ. ರಾಜ್ಯ ಬಿಜೆಪಿಯಲ್ಲಿ ಈ ಎರಡೂ ಇವೆ. ಮುಂದಿನ ದಿನಗಳಲ್ಲಿ ಇದು ಸರಿ ಹೋಗದೇ ಇದ್ದರೆ 2028ರ ವೇಳೆಗೆ ಹೊಸ ಪಕ್ಷ ಸ್ಥಾಪನೆ ಮಾಡಿ, ಚುನಾವಣೆ ಎದುರಿಸುತ್ತೇವೆ. ನಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.