ಬೆಂಗಳೂರು,ಸೆ.12– ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಅನ್ಯಾಯದ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ, ಧರ್ಮೋ ರಕ್ಷತಿ ರಕ್ಷಿತಃ ಎಂದು ಖ್ಯಾತ ನಟ, ನಿರ್ದೇಶಕರಾದ ಎಸ್.ನಾರಾಯಣ ಹೇಳಿದ್ದಾರೆ.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ನನ್ನ ಕುಟುಂಬದ ಮೇಲೆ ಸೊಸೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು. ಆಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾನೂನು ಪ್ರಕಾರ ಪ್ರಕ್ರಿಯೆಗಳು ನಡೆಯಲಿ. ನಾನು ಅದನ್ನು ಕಾನೂನಿನ ಮೂಲಕವೇ ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.
ಇಂದಿನ ಸಮಾಜದಲ್ಲಿ ಮೌಲ್ಯಗಳು ಹಾಳಾಗುತ್ತಿವೆ. ಸಂಸ್ಕಾರ ಮರೆಯಾಗುತ್ತಿದೆ. ಇದು ಸಾಕಷ್ಟು ನೋವು ತರುತ್ತಿದೆ. ಇಂತಹ ಘಟನೆಗಳಿಗೆ ಪ್ರತಿಷ್ಠಿತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೇಳಿದರು.
ಪಾಶ್ಚಿಮಾತ್ಯ ಸಂಸ್ಕೃತಿಗೆಮಾರು ಹೋಗಿ ಈಗ ಕೆಲವರು ನಮತನವನ್ನೇ ಮರೆಯುತ್ತಿದ್ದಾರೆ. ಕಾಲುಂಗುರ ತೊಡುವುದು, ಹಣೆಗೆ ಸಿಂಧೂರ, ಕೊರಳಿಗೆ ಮಾಂಗಲ್ಯ ಸರ ತೊಡುವುದನ್ನೂ ಸಹ ಕೆಲವರು ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿ ಮುಂದೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದೇ ನನಗೆ ಕಳವಳ ಮೂಡಿಸಿದೆ.
ನಮ ಕುಟುಂಬದಲ್ಲಿ ಯಾರೂ ಕೂಡ ಆಕೆಗೆ ಯಾವುದೇ ಹಿಂಸೆ ನೀಡಿಲ್ಲ. ನಮ ಮನೆಯ ಹೆಣ್ಣುಮಗಳು ಎಂಬಂತೆ ನೋಡಿಕೊಂಡಿದ್ದೆವು. ಆದರೆ ಸುಮಾರು ಒಂದೂವರೆ ವರ್ಷದ ನಂತರ ಈಗ ನಮ ಕುಟುಂಬದ ಮೇಲೆ ದೂರು ನೀಡಿರುವುದರ ಹಿಂದೆ ಯಾವುದೋ ದುರುದ್ದೇಶವಿದ್ದಂತೆ ಕಾಣುತ್ತಿದೆ. ಕಾನೂನಿನ ಮೇಲೆ ನನಗೆ ನಂಬಿಕೆಯಿದ್ದು, ಸತ್ಯ ಹೊರಬರಲಿದೆ ಎಂದು ಹೇಳಿದರು. ಆದರೆ ಇಂತಹ ಘಟನೆಗಳಿಂದ ಕುಟುಂಬದಲ್ಲಿ ಮನಃಶಾಂತಿ ಹಾಳಾಗುತ್ತದೆ. ಇದರ ನೋವು ಏನು ಎಂಬುದು ಅನುಭವಿಸಿದವರಿಗೇ ತಿಳಿದಿರುತ್ತದೆ ಎಂದು ಭಾವುಕರಾದರು.