ಬೆಂಗಳೂರು, ಸೆ.12– ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದ್ದು ಸಾಫ್ಟ್ ವೇರ್ ಎಂಜಿನಿಯರ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಸಚಿನ್ ಎಂಬುವವರು ಕಾರಿನಲ್ಲಿ ಕೋರಮಂಗಲದಿಂದ ಗಂಗಾನಗರದಲ್ಲಿರುವ ಸಬ್‌ರಿಜಿಸ್ಟ್ರರ್ ಕಚೇರಿಗೆ ಆಸ್ತಿ ನೋಂದಣಿಗಾಗಿ ಬೆಳಗ್ಗೆ ತೆರಳುತ್ತಿದ್ದರು. ಸುಮಾರು 11.30ರ ಸಂದರ್ಭದಲ್ಲಿ ಸಿಎಂ ಮನೆ ಸಮೀಪದ ಅರಮನೆ ರಸ್ತೆಯ ವಿಲ್ಸನ್ ಮ್ಯಾನರ್ ಸೇತುವೆಯ ಸರ್ವೀಸ್ ರಸ್ತೆಯಲ್ಲಿ ಕಾರಿನ ಮುಂಭಾಗದ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ತಕ್ಷಣ ಚಾಲಕ ಅಪಾಯ ಅರಿತು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಸಚಿನ್ ಕೂಡ ಕಾರಿನಿಂದ ಹೊರಗೆ ಇಳಿದು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಚಾಲಕ ಕಾರಿನ ಮುಂದಿನ ಬಾನೆಟ್ ತೆಗೆಯುತ್ತಿದ್ದಂತೆಯೇ ಬೆಂಕಿ ಆವರಿಸಿದ್ದರಿಂದ ಅವರು ಹಿಂದೆ ಸರಿದಿದ್ದಾರೆ. ಸಚಿನ್ ಅವರು ಎಚ್ಚೆತ್ತುಕೊಂಡು ತಮ ಬಳಿ ಇದ್ದ ದಾಖಲೆ ಮತ್ತು ಕೆಲ ವಸ್ತುಗಳನ್ನು ಕಾರಿನಿಂದ ಹೊರಗೆ ತೆಗೆದುಕೊಂಡಿದ್ದಾರೆ.
ನೋಡ ನೋಡುತ್ತಿದ್ದಂತೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟೋತ್ತಿಗೆ ಕಾರು ಶೇ. 75ರಷ್ಟು ಭಾಗ ಸುಟ್ಟು ಕರಕಲಾಗಿದೆ. ಘಟನೆಯಿಂದ ಸಾಫ್ಟ್ ವೇರ್ ಎಂಜಿನಿಯರ್ ದಿಗ್ಭ್ರಮೆ ಗೊಂಡಿದ್ದಾರೆ. ಸ್ಥಳೀಯರು ರಸ್ತೆ ಮಧ್ಯೆಯೇ ಕಾರು ಹೊತ್ತು ಉರಿಯುತ್ತಿದ್ದಿದ್ದನ್ನು ನೋಡಿ ಗಾಬರಿಗೊಂಡಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ಸುಟ್ಟು ಹೋದ ಕಾರನ್ನು ಅಲ್ಲಿಂದ ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.