ಬೆಂಗಳೂರು, ಫೆ.18- ಕಳೆದ ಎರಡು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ದರ ಇಂದು ಸ್ಥಿರವಾಗಿದ್ದರೆ, ಬೆಳ್ಳಿಯ ನಿರಂತರ ಕುಸಿತ ಮುಂದುವರೆದಿದ್ದು, ಇಂದು ಒಂದು ಕೆ.ಜಿ.ಗೆ ಐದು ಸಾವಿರ ರೂಪಾಯಿ ಕಡಿಮೆಯಾಗಿದೆ.
ಫೆ. 13ರಿಂದಲೂ ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ನಿರಂತರ ಕುಸಿತ ಕಂಡಿದೆ. ಅಂದಿನಿಂದ ಇಂದಿನವರೆಗೆ ಒಂದು ಕೆ,ಜಿ.ಬೆಳ್ಳಿಗೆ ಒಟ್ಟು 40 ಸಾವಿರ ರೂ.ನಷ್ಟು ಕಡಿಮೆಯಾದಂತಾಗಿದೆ. ಫೆ.13ರಂದು 15 ಸಾವಿರ ರೂ., ಫೆ.14ರಂದು 5 ಸಾವಿರ ರೂ., ಫೆ.15ರಂದು 7 ಸಾವಿರ ರೂ., ನಿನ್ನೆ 8 ಸಾವಿರ ರೂ. ಹಾಗೂ ಇಂದು ಐದು ಸಾವಿರ ರೂ.ನಷ್ಟು ಪ್ರತಿ ಕೆ.ಜಿ. ಬೆಳ್ಳಿಯ ಬೆಲೆ ಕಡಿಮೆಯಾಗಿದೆ.
ನಾಗಾಲೋಟದಲ್ಲಿದ್ದ ಬೆಳ್ಳಿ ದರ ಕಳೆದ ಐದು ದಿನಗಳಿಂದ ಇಳಿಮುಖವಾಗಿದೆ, ಫೆ.13ರಂದು 2.80 ಲಕ್ಷ ರೂ.ನಷ್ಟಿದ್ದ ಪ್ರತಿ ಕೆ.ಜಿ. ಬೆಳ್ಳಿ ದರ ಇಂದು 2.55 ಲಕ್ಷ ರೂ.ನಷ್ಟಿದೆ. ಬೆಳ್ಳಿಯಂತೆಯೇ ಏರುಗತಿಯಲ್ಲಿದ್ದ ಚಿನ್ನದ ದರವೂ ಕಳೆದ ಮೂರು ದಿನಗಳಿಂದ ಇಳಿಮುಖವಾಗಿದೆ. ಇಂದು ಏರಿಳಿತವಿಲ್ಲದೆ, ಸ್ಥಿರವಾಗಿದ್ದು, 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 15,420ರೂ., 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 14, 135 ರೂ., 18 ಕ್ಯಾರೆಟ್‌ನ ಚಿನ್ನವು ಪ್ರತಿ ಗ್ರಾಂಗೆ 11,565 ರೂ.ನಷ್ಟಿದೆ.
ನಿನ್ನೆ 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 224ರೂ., ಮೊನ್ನೆ 131ರೂ. ಕಡಿಮೆಯಾಗಿತ್ತು. 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ 205ರೂ., ಮೊನ್ನೆ 120 ರೂ. ನಷ್ಟು ಇಳಿಕೆಯಾಗಿತ್ತು. ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಏರಿಳಿತವಾಗುವುದು ಸಹಜ ಎಂಬುದು ವರ್ತಕರ ಅಭಿಪ್ರಾಯ.
