ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಣೆ ಮತ್ತು ಸುಮಾರು 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ 2025-30 ನೀತಿ ರೂಪಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ನೂತನ ಜವಳಿ ನೀತಿ ರಚನೆಗೆ ಸಲಹೆ ಪಡೆಯಲು ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ಜನಪ್ರತಿನಿಧಿಗಳು, ಜವಳಿ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಇಂದಿನ ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಪರಿಗಣಿಸಿ ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜವಳಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2020ರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳ ಆಡಿಟ್ ಆಗಿರಲಿಲ್ಲ. ಈಗ ಆಡಿಟ್ ನಡೆದಿದ್ದು, ನಷ್ಟದ ಕಾರಣ ಎರಡನ್ನೂ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ಕೈಮಗ್ಗ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಖರೀದಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಶಾಸಕರೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವ ಉದ್ದೇಶವಿದೆ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಖರೀದಿ ಮಾಡಿದರೆ ಕೈಮಗ್ಗ ನೇಕಾರರಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಶೂನ್ಯ ಬಡ್ಡಿ ದರದ ಸಾಲದ ಮೇಲೂ ಜಿಎಸ್ಟಿ ವಿಧಿಸುತ್ತಿರುವುದಿಂದ ನೇಕಾರರಿಗೆ ಬಡ್ಡಿ ರಹಿತ ಸಾಲ ಸಿಕ್ಕರೂ ಉಪಯೋಗ ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಸಹಕಾರದೊಂದಿಗೆ ಜಿಎಸ್ಟಿ ತೆರವಿಗೆ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಜವಳಿ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು. ಚರ್ಮಹೊರತುಪಡಿಸಿ ತಯಾರಾಗುವ ಚಪ್ಪಲಿ ಮತ್ತು ಶೂ ಉದ್ಯಮದ ಅಭಿವೃದ್ಧಿ ಬಗ್ಗೆಯೂ ನೀತಿ ರೂಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಣ್ಣ ಕೈಗಾರಿಕೆ ಕ್ಷೇತ್ರದ ಅಡಿಯಲ್ಲಿ ಬರುವ ಈ ಉದ್ಯಮವನ್ನು ಜವಳಿ ನೀತಿಯಲ್ಲಿ ಪರಿಗಣಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಆದಾಯದ ಮೂಲ ಕಂಡುಕೊಳ್ಳಲು ಇಲಾಖೆ ಆಸ್ತಿ ಇರುವ ಕಡೆ ಪೆಟ್ರೋಲ್ ಪಂಪ್ಗಳನ್ನು ಸ್ಥಾಪನೆ ಮಾಡುವ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಹಾಗೂ ನಷ್ಟದಲ್ಲಿರುವ ಸಹಕಾರ ಕ್ಷೇತ್ರದ ಜವಳಿ ಉದ್ಯಮದ ಆಸ್ತಿ ಮಾರಾಟಕ್ಕೆ ಅವಕಾಶ ನೀಡದೆ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುವುದು. ನೇಕಾರ ಸಮ್ಮಾನ ಯೋಜನೆಯ ನೆರವನ್ನು ಐದು ಸಾವಿರ ರೂ.ಗಳಿಂದ ಹತ್ತು ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವ ಬೇಡಿಕೆ ಸೂಕ್ತವಾಗಿದ್ದು, ಪರಿಗಣಿಸಲಾಗುವುದು ಹಾಗೂ ಕುಟುಂಬದಲ್ಲಿ ಒಬ್ಬರನ್ನು ಮಾತ್ರ ಪರಿಗಣಿಸುವ ಬದಲಿಗೆ ಎಲ್ಲ ಸದಸ್ಯರನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಜವಳಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟೇ ಯೋಜನೆ ರೂಪಿಸಿದರೂ ಬಜೆಟ್ನಲ್ಲಿ ಅಗತ್ಯ ಅನುದಾನ ಒದಗಿಸದಿದ್ದರೆ ಪ್ರಯೋಜನ ಆಗದು. ಆದ್ದರಿಂದ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಅನುದಾನ ಪ್ರಮಾಣ ಹೆಚ್ಚಳ ಮಾಡಲು ಮನವಿ ಮಾಡಬೇಕು ಎಂದು ಮಾಜಿ ಶಾಸಕ, ಕೆಎಚ್ಡಿಸಿ ಮಾಜಿ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಸಲಹೆ ಮಾಡಿದರು.
ನೇಕಾರರಿಗೆ ವರ್ಷವಿಡೀ ಉದ್ಯೋಗ ಒದಗಿಸಬೇಕು. ಪರಿವರ್ತನಾ ನಿಧಿ ಹೆಚ್ಚಳ ಮಾಡಬೇಕು. ನಿಗಮವನ್ನು ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯಲು ಆದಾಯದ ಮೂಲಗಳನ್ನು ಸೃಷ್ಟಿಸಬೇಕು. ನಿಗಮದಿಂದ ಹಂಚಿಕೆ ಮಾಡಿರುವ ಮನೆಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಶಾಸಕ ಸಿದ್ದು ಸವದಿ ಮನವಿ ಮಾಡಿದರು.
ಕೈಮಗ್ಗ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು. ಉತ್ಪನ್ನಗಳನ್ನು ಬ್ರಾಂಡಿಂಗ್ ಮಾಡಿ ಇ – ಕಾಮರ್ಸ್ ಫ್ಲಾಟ್ಫಾರಂನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ನೇಕಾರರ ಕುಟುಂಬದ ಯುವಕರು ಕುಲಕಸುಬಿನಿಂದ ವಿಮುಖರಾಗುತ್ತಿದ್ದು, ಅವರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ನವೀನ್ ಹೇಳಿದರು.
ಹತ್ತು ಕೋಟಿ ಬಂಡವಾಳ ಹೂಡಿದರೆ ಎಷ್ಟು ಉದ್ಯೋಗಾವಕಾಶ, ನೂರು ಕೋಟಿ ಬಂಡವಾಳ ಹೂಡಿದರೆ ಎಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟ ನೀತಿ ಬೇಕು. ಎಲ್ಲವನ್ನೂ ಯಾಂತ್ರೀಕರಣಗೊಳಿಸಿದರೆ ಉದ್ದೇಶ ಈಡೇರದು. ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಶಾಸಕ ಕೇಶವಪ್ರಸಾದ್ ಹೇಳಿದರು. ಅನವತಿಯಲ್ಲಿರುವ ಅಣ್ಣಿಗೇರಿ ಜವಳಿ ಪಾರ್ಕ್ ಪುನಶ್ಚೇತನಗೊಳಿಸಬೇಕು. ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನಾ ಕೇಂದ್ರ ಆರಂಭಿಸುವ ಅಗತ್ಯವಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಕಾವೇರಿ ಹ್ಯಾಂಡ್ಲೂಮ್ ಅಧ್ಯಕ್ಷ ಜೆ.ಬಿ. ಗಣೇಶ್, ಕೆಎಚ್ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲಾ, ಯೋಜನಾ ಇಲಾಖೆ ಕಾರ್ಯದರ್ಶಿ ರಮ್ದೀಪ್ ಚೌಧರಿ, ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಚ್ಡಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವಾರ್ ಸೇರಿದಂತೆ ಜವಳಿ ಇಲಾಖೆ ಹಲವು ಅಧಿಕಾರಿಗಳು, ಜವಳಿ ಉದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು.