Saturday, September 13, 2025
Homeರಾಜ್ಯಮೊಸಳೆಹೊಸಳ್ಳಿ ಅಪಘಾತ : ಉನ್ನತಮಟ್ಟದ ತನಿಖೆಗೆ ನಿಖಿಲ್‌ ಕುಮಾರಸ್ವಾಮಿ ಆಗ್ರಹ

ಮೊಸಳೆಹೊಸಳ್ಳಿ ಅಪಘಾತ : ಉನ್ನತಮಟ್ಟದ ತನಿಖೆಗೆ ನಿಖಿಲ್‌ ಕುಮಾರಸ್ವಾಮಿ ಆಗ್ರಹ

Mosalehosalli accident: Nikhil Kumaraswamy demands high-level investigation

ಹಾಸನ, ಸೆ.13– ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ದುರಂತ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

ಅಪಘಾತದ ಹಿನ್ನೆಲೆಯಲ್ಲಿ ತಡ ರಾತ್ರಿ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬದರಿಗೆ ಸಾಂತ್ವನ ಹೇಳಿದರು. ನಂತರ ಗಾಯಾಳುಗಳ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಅಪಘಾತದ ದುರಂತದ ವಿಡಿಯೋ ನೋಡಿ ನಾವೆಲ್ಲರೂ ಬೆಚ್ಚಿಬಿದ್ದಿದ್ದೇವೆ. ನಾವು ಜೀರ್ಣ ಮಾಡಿಕೊಳ್ಳಲಾಗದ ದೃಶ್ಯ ಅದು. ತಂದೆ-ತಾಯಿ ತಮ ಮಕ್ಕಳ ಭವಿಷ್ಯ ಬಗ್ಗೆ ದೊಡ್ಡ ಕನಸನ್ನು ಕಟ್ಟಿಕೊಂಡಿರುತ್ತಾರೆ. ಈ ಅಪಘಾತದಿಂದ ಅವರ ಮನಸ್ಸಿನ ಮೇಲೆ ಆಗಿರುವ ನೋವನ್ನು ನಾವು ಯಾರು ಹೋಗಲಾಡಿಸಲು ಆಗುವುದಿಲ್ಲ. ತಾಯಿ ಚಾಮುಂಡೇಶ್ವರಿ ದೇವಿಯು ಈ ನೋವನ್ನು ಭರಿಸುವಂತಹ ಶಕ್ತಿಯನ್ನು ಮೃತರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ದುರ್ಘಟನೆಯಿಂದ ಉಂಟಾಗಿರುವ ಜೀವ ಹಾನಿಗೆ ಯಾರೂ ಬೆಲೆ ಕಟ್ಟಲು ಆಗುವುದಿಲ್ಲ. ಅದರಲ್ಲೂ ಅವರ ತಂದೆ, ತಾಯಿಗಳು ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಕಂಡಿದ್ದ ಕನಸುಗಳು ಇವತ್ತು ಮಣ್ಣುಪಾಲಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಮೃತರಿಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿರುವುದನ್ನು ಸ್ವಾಗತ ಮಾಡುತ್ತೇವೆ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ತಿಳಿದುಕೊಂಡು ಮಾನವೀಯತೆ ದೃಷ್ಟಿಯಿಂದ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ಘೋಷಣೆ ಮಾಡಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಅವರು ಆಗ್ರಹಿಸಿದರು.ಈ ಸಂದರ್ಭದಲ್ಲಿ ಶಾಸಕರಾದ ಸ್ವರೂಪ್‌ ಪ್ರಕಾಶ್‌, ಹೆಚ್‌.ಟಿ ಮಂಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ದೇವೇಗೌಡರ ಸಂತಾಪ
ಬೆಂಗಳೂರು, ಸೆ.13-ಹಾಸನ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಭೀಕರ ಅಪಘಾತದಿಂದ 8 ಜನ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆಯ ಬಗ್ಗೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಂಭವಿಸಿರುವ ಭೀಕರ ಅಪಘಾತದ ಹೃದಯವಿದ್ರಾವಕ ಘಟನೆ ಮನಸ್ಸಿಗೆ ತೀವ್ರ ನೋವುಂಟುಮಾಡಿದೆ. ಮೃತರ ಆತಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಕುಟುಂಬದವರಿಗೆ ಈ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದಿರುವ ದೇವೇಗೌಡರು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಭೀಕರ ಅಪಘಾತ ಸಂಭವಿಸಿ ಹಲವರು ಜೀವ ಕಳೆದುಕೊಂಡು, 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಸುದ್ದಿ ಕೇಳಿ ತೀವ್ರ ಆಘಾತ ಉಂಟಾಯಿತು ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಗಣಪತಿ ಮೆರವಣಿಗೆ ಹೋಗುತ್ತಿದ್ದವರ ಮೇಲೆ ಟ್ರಕ್‌ ಹರಿದು ಭಕ್ತರ ಸಾವುಂಟಾಗಿರುವುದು ನನಗೆ ಅತ್ಯಂತ ದುಃಖ ಉಂಟು ಮಾಡಿದೆ.

ಇದು ಅತೀವ ದುರ್ದೈವದ ಘಟನೆಯಾಗಿದ್ದು, ಮೃತರ ಆತಕ್ಕೆ ಭಗವಂತ ಸದ್ಗತಿ ಕರುಣಿಸಲಿ ಹಾಗೂ ದುಃಖತಪ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಅವರು Xನಲ್ಲಿ ಹೇಳಿದ್ದಾರೆ. ಎಲ್ಲಾ ಗಾಯಾಳುಗಳು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಗಾಯಾಳುಗಳಿಗೆ ಉತ್ತಮ, ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

Latest News