Saturday, September 13, 2025
Homeರಾಜ್ಯBIG STORY : ಹಾಸನ ಗಣೇಶೋತ್ಸವ ದುರಂತದಲ್ಲಿ ಮೃತಪಟ್ಟ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆ

BIG STORY : ಹಾಸನ ಗಣೇಶೋತ್ಸವ ದುರಂತದಲ್ಲಿ ಮೃತಪಟ್ಟ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆ

Hassan Ganesh festival tragedy: Each deceased has a story of tears

ಹಾಸನ,ಸೆ.13- ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆಯೇ ರಕ್ಕಸನಂತೆ ಟ್ರಕ್‌ ನುಗ್ಗಿದ್ದರಿಂದಾಗಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಉಸಿರು ಚೆಲ್ಲಿದ 9 ಮಂದಿಯ ಕುಟುಂಬಗಳ ಕಣ್ಣೀರ ಕಥೆಗಳೇ ಕರುಣಾಜನಕವಾಗಿವೆ. ಈ ಹೃದಯ ವಿಧ್ರಾವಕ ಘಟನೆಯಿಂದ ಇಡೀ ಜಿಲ್ಲೆಯೇ ಶೋಕ ಸಾಗರದಲ್ಲಿ ಮುಳುಗಿದೆ.

ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿರುವುದು ದುರ್ದೈವ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಮೃತಪಟ್ಟ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆಯಾಗಿದೆ.
ಮೃತಪಟ್ಟವರ ಪೈಕಿ 6 ಮಂದಿ ಸ್ಥಳೀಯ ನಿವಾಸಿಗಳು. ಉಳಿದ ಮೂವರು ಬಳ್ಳಾರಿ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಮೃತ ದೇಹಗಳ ಹಸ್ತಾಂತರ:
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂಬತ್ತು ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇಂದು ಮುಂಜಾನೆ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಕೇಂದ್ರದ ಬಳಿ ಜಮಾಯಿಸಿದ ಮೃತರ ಪೋಷಕರು, ಸಂಬಂಧಿಕರು, ಸ್ನೇಹಿತರ ಗೋಳಾಟ ಕರಳು ಕಿವುಚುವಂತಿತ್ತು.

ಮೃತರ ವಿವರ:
ಬಳ್ಳಾರಿಯ ಪ್ರವೀಣ್‌ ಕುಮಾರ್‌, ಹೊಳೇನರಸೀಪುರ ತಾಲ್ಲೂಕಿನ ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ (17), ಹಳೇ ಕೋಟೆ ಹೋಬಳಿಯ ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ್‌, (25), ಕೆ.ಬಿ.ಪಾಳ್ಯದ ರಾಜೇಶ (17), ಮುತ್ತಿಗೆ ಹೀರಳ್ಳಿ ಗ್ರಾಮದ ಗೋಕುಲ (17), ಹಾಸನದ ಬಂಟರಹಳ್ಳಿಯ ಪ್ರಭಾಕರ್‌ (55), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್‌ (23) ಹಾಗೂ ಚಿಕ್ಕಮಗಳೂರು ಜಿಲ್ಲೆ ಮಣೆನಹಳ್ಳಿ ಮಲ್ಲೆ ಗ್ರಾಮದ ಸುರೇಶ ಮೃತ ದುರ್ದೈವಿಗಳು.

ಮೃತರ ಪೈಕಿ ಐದು ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಐಜಿಪಿ ಬೋರಲಿಂಗಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇನ್ನು ಕೆಲವು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡಿರುವ 19 ಮಂದಿ ಪೈಕಿ ಇಬ್ಬರ ಸ್ಥಿತಿ ಸ್ಥಿರವಾಗಿದೆ. ಇಬ್ಬರು ಗಾಯಾಳುಗಳಿಗೆ ಪಕ್ಕೆಲುಬು ಮೂಳೆ ಮುರಿತವಾಗಿದ್ದರಿಂದ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹುಟ್ಟುಹಬ್ಬ ದಿನವೇ ಯುವಕ ಸಾವು:
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ನಿವಾಸಿ ಮಿಥುನ್‌ ರಾತ್ರಿಯಷ್ಟೇ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ದುರಂತ ಅಂತ್ಯವಾಗಿರುವುದು ವಿಷಾದಕರ.

ಮನೆಗೆ ಆಧಾರವಾಗಬೇಕಾದವರೇ ದುರ್ಮರಣ:
ಈ ಅಪಘಾತದಲ್ಲಿ ಮೃತಪಟ್ಟ ಯುವಕರು 17 ರಿಂದ 25 ವಯೋಮಾನದವರು. ಇದು ಸಾಯುವ ವಯಸ್ಸಂತೂ ಅಲ್ಲವೇ ಅಲ್ಲ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮುಂದೊಂದು ದಿನ ಮನೆಗೆ ಆಧಾರವಾಗುತ್ತಾರೆ ಎಂದು ಪೋಷಕರು ಹಲವು ಕನಸು ಕಂಡಿದ್ದರು. ಈ ಯುವಕರೂ ಸಹ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಳ್ಳುವ ಗುರಿ ಹೊಂದಿದ್ದರು. ಆದರೆ ಈ ಭೀಕರ ದುರಂತ ಯುವಕರ ಬದುಕನ್ನೇ ಅಂತ್ಯಗೊಳಿಸಿದರೆ, ಇನ್ನು ಅವರುಗಳ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅಪಘಾತವಾದದ್ದು ಹೇಗೆ:
ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ಹಬ್ಬದ ವಾತಾವರಣವಿತ್ತು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗ್ರಾಮಸ್ಥರು ಮಧ್ಯಾಹ್ನ ಮೆರವಣಿಗೆ ಆರಂಭಿಸಿದ್ದರು. ಡಿಜೆ ಸಂಗೀತದೊಂದಿಗೆ ನೃತ್ಯ ಮಾಡಿಕೊಂಡು ಮೆರವಣಿಗೆ ತೆರಳುತ್ತಿದ್ದು, ಮೊಸಳೆಹೊಸಳ್ಳಿಯ ಸಂತೆ ಮಾಳದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಗಣೇಶೋತ್ಸವದ ಮೆರವಣಿಗೆ ಇನ್ನು 5 ನಿಮಿಷಗಳ ಕಾಲ ಮುಂದೆ ಹೋಗಿದ್ದರೆ ಸಂತೆಮಾಳ ಸೇರಿಕೊಳ್ಳುತ್ತಿತ್ತು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ರಾತ್ರಿ 8.30ರ ಸುಮಾರಿನಲ್ಲಿ ಈ ಮೆರವಣಿಗೆ ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಸರಕು ಸಾಗಾಣಿಕೆಯ ಕಂಟೈನರ್‌ ಬೈಕ್‌ಗೆ ಗುದ್ದಿ, ಬಲಭಾಗಕ್ಕೆ ತಿರುಗಿ ಡಿವೈಡರ್‌ನ್ನು ಹತ್ತಿ ಪಕ್ಕದ ರಸ್ತೆಯಲ್ಲಿದ್ದ ಮೆರವಣಿಗೆಯ ಮೇಲೆ ಹರಿದಿದೆ. ಇದರಿಂದ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕಂಗಾಲಾದ ಗ್ರಾಮಸ್ಥರು :
ಹಬ್ಬದ ವಾತಾವರಣವಿದ್ದ ಗ್ರಾಮ ಕ್ಷಣಾರ್ಧದಲ್ಲಿ ದುರಂತವಾಗಿ ಪರಿವರ್ತನೆಯಾಗಿರುವುದು ದುರ್ದೈವ. ಇಡೀ ಗ್ರಾಮವೇ ರಾತ್ರಿಯಿಡೀ ಜಾಗರಣೆ ಮಾಡಿದೆ. ಯುವಕರು ದುರಂತ ಅಂತ್ಯ ಕಂಡಿರುವುದಕ್ಕೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ದೇಶಾದ್ಯಂತ ಆಘಾತ :
ಈ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವುದರಿಂದ ದೇಶಾದ್ಯಂತ ತೀವ್ರ ಆಘಾತ ವ್ಯಕ್ತವಾಗಿದೆ.ಘಟನೆಯ ತೀವ್ರತೆ ಹಾಗೂ ಅಪಘಾತದ ವಿಭಿನ್ನ ದೃಶ್ಯಗಳು ಮೈ ಜುಮೆನ್ನುವಂತಿದ್ದು, ಗಾಬರಿ ಹುಟ್ಟಿಸುವಂತಿವೆ. ಅಪಘಾತದ ವಿಡಿಯೋ ದೃಶ್ಯಾವಳಿಗಳನ್ನು ನೋಡಿದ ಜನರು ಘಟನೆಯ ಭೀಕರತೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಗಣ್ಯರು ಸಂತಾಪ :
ಹಾಸನ, ಸೆ.13- ಗಣೇಶೋತ್ಸವದ ಮೇಲೆ ಲಾರಿ ಹರಿದು 9 ಮಂದಿ ಮೃತಪಟ್ಟ ಘಟನೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿದ್ದು, ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಜೆಡಿಎಸ್‌‍ನ ಮುಖಂಡರು ಹಾಗೂ ಹೊಳೆನರಸೀಪುರ ಶಾಸಕರಾದ ಎಚ್‌.ಡಿ.ರೇವಣ್ಣ ಅವರ ಪುತ್ರರು ಆಗಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ, ಜೆಡಿಎಸ್‌‍ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದರು.

ಸಂಸದ ಶ್ರೇಯಸ್‌‍ ಪಟೇಲ್‌ ಕೂಡ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳ ಉಸ್ತುವಾರಿ ನೋಡಿಕೊಂಡರು. ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ, ಎಸ್‌‍ಪಿ ಮೊಹಮದ್‌ ಸುಚೇತಾ, ಸಿಇಓ ಪೂರ್ಣಿಮಾ ಅವರು ರಾತ್ರಿಯೇ ಸ್ಥಳದಲ್ಲೇ ಮೊಕ್ಕಂ ಹೂಡಿದರು.

ಇಂದು ಬೆಳಗ್ಗೆ ಹಾಸನ ಜಿಲ್ಲೆಯ ಉಸ್ತುವಾರಿಯು ಆಗಿರುವ ಕಂದಾಯ ಸಚಿವ ಕೃಷ್ಣಭೈರೇಗೌಡ ಜಿಲ್ಲೆಗೆ ಭೇಟಿ ನೀಡಿ, ಹೆದ್ದಾರಿಯ ಸಮೀಪದಲ್ಲಿರುವ ಸರ್ಕಾರಿ ಶಾಲೆಯಲ್ಲೇ ಸಂಸದರು, ಡಿಸಿ, ಎಸ್‌‍ಪಿ, ಸಿಇಓ ಅವರ ಜೊತೆ ತುರ್ತು ಸಭೆ ನಡೆಸಿದರು. ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿ ಘಟನೆ ವಿವರ ಪಡೆದರು. ಮೃತಪಟ್ಟವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಮೃತಪಟ್ಟ ಕುಟುಂಬಗಳ ಮನೆಗಳಿಗೂ ಭೇಟಿ ನೀಡಿದರು.

RELATED ARTICLES

Latest News