Saturday, September 13, 2025
Homeಇದೀಗ ಬಂದ ಸುದ್ದಿರಕ್ಕಸನಂತೆ ಬಂದು 9 ಜೀವಗಳನ್ನು ಬಲಿಪಡೆದ ಟ್ರಕ್, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ರಕ್ಕಸನಂತೆ ಬಂದು 9 ಜೀವಗಳನ್ನು ಬಲಿಪಡೆದ ಟ್ರಕ್, ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

9 Dead, 18 Injured as Truck Rams Into Ganesh Immersion Crowd in Hassan

ಹಾಸನ,ಸೆ.13- ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆಯೇ ರಕ್ಕಸನಂತೆ ಟ್ರಕ್‌ ನುಗ್ಗಿದ್ದರಿಂದಾಗಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಉಸಿರು ಚೆಲ್ಲಿದ 9 ಮಂದಿಯ ಕುಟುಂಬಗಳ ಕಣ್ಣೀರ ಕಥೆಗಳೇ ಕರುಣಾಜನಕವಾಗಿವೆ.ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಜಿಲ್ಲೆಯೇ ಶೋಕ ಸಾಗರದಲ್ಲಿ ಮುಳುಗಿದೆ.

ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿರುವುದು ದುರ್ದೈವ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಮೃತಪಟ್ಟ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆಯಾಗಿದೆ. ಮೃತಪಟ್ಟವರ ಪೈಕಿ 6 ಮಂದಿ ಸ್ಥಳೀಯ ನಿವಾಸಿಗಳು. ಉಳಿದ ಮೂವರು ಬಳ್ಳಾರಿ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಮೃತ ದೇಹಗಳ ಹಸ್ತಾಂತರ:
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂಬತ್ತು ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇಂದು ಮುಂಜಾನೆ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಕೇಂದ್ರದ ಬಳಿ ಜಮಾಯಿಸಿದ ಮೃತರ ಪೋಷಕರು, ಸಂಬಂಧಿಕರು, ಸ್ನೇಹಿತರ ಗೋಳಾಟ ಕರಳು ಕಿವುಚುವಂತಿತ್ತು.

ಮೃತರ ವಿವರ:
ಬಳ್ಳಾರಿಯ ಪ್ರವೀಣ್‌ ಕುಮಾರ್‌, ಹೊಳೇನರಸೀಪುರ ತಾಲ್ಲೂಕಿನ ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ (17), ಹಳೇ ಕೋಟೆ ಹೋಬಳಿಯ ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ್‌, (25), ಕೆ.ಬಿ.ಪಾಳ್ಯದ ರಾಜೇಶ (17), ಮುತ್ತಿಗೆ ಹೀರಳ್ಳಿ ಗ್ರಾಮದ ಗೋಕುಲ (17), ಹಾಸನದ ಬಂಟರಹಳ್ಳಿಯ ಪ್ರಭಾಕರ್‌ (55), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್‌ (23) ಹಾಗೂ ಚಿಕ್ಕಮಗಳೂರು ಜಿಲ್ಲೆ ಮಣೆನಹಳ್ಳಿ ಮಲ್ಲೆ ಗ್ರಾಮದ ಸುರೇಶ ಮೃತ ದುರ್ದೈವಿಗಳು.

ಮೃತರ ಪೈಕಿ ಐದು ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಐಜಿಪಿ ಬೋರಲಿಂಗಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇನ್ನು ಕೆಲವು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡಿರುವ 20 ಮಂದಿ ಪೈಕಿ ಇಬ್ಬರ ಸ್ಥಿತಿ ಸ್ಥಿರವಾಗಿದೆ. ಇಬ್ಬರು ಗಾಯಾಳುಗಳಿಗೆ ಪಕ್ಕೆಲುಬು ಮೂಳೆ ಮುರಿತವಾಗಿದ್ದರಿಂದ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಹುಟ್ಟುಹಬ್ಬ ದಿನವೇ ಯುವಕ ಸಾವು:
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ನಿವಾಸಿ ಮಿಥುನ್‌ ರಾತ್ರಿಯಷ್ಟೇ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ದುರಂತ ಅಂತ್ಯವಾಗಿರುವುದು ವಿಷಾದಕರ.

ಮನೆಗೆ ಆಧಾರವಾಗಬೇಕಾದವರೇ ದುರ್ಮರಣ:
ಈ ಅಪಘಾತದಲ್ಲಿ ಮೃತಪಟ್ಟ ಯುವಕರು 17 ರಿಂದ 25 ವಯೋಮಾನದವರು. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮುಂದೊಂದು ದಿನ ಮನೆಗೆ ಆಧಾರವಾಗುತ್ತಾರೆ ಎಂದು ಪೋಷಕರು ಹಲವು ಕನಸು ಕಂಡಿದ್ದರು. ಈ ಯುವಕರೂ ಸಹ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಳ್ಳುವ ಗುರಿ ಹೊಂದಿದ್ದರು. ಆದರೆ ಈ ಭೀಕರ ದುರಂತ ಯುವಕರ ಬದುಕನ್ನೇ ಅಂತ್ಯಗೊಳಿಸಿದರೆ, ಇನ್ನು ಅವರುಗಳ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಅಪಘಾತವಾದದ್ದು ಹೇಗೆ:
ಹಾಸನ ಜಿಲ್ಲೆಯ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ನಿನ್ನೆ ಹಬ್ಬದ ವಾತಾವರಣವಿತ್ತು. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗ್ರಾಮಸ್ಥರು ಮಧ್ಯಾಹ್ನದ ನಂತರ ಮೆರವಣಿಗೆ ಆರಂಭಿಸಿದ್ದರು. ಡಿಜೆ ಸಂಗೀತದೊಂದಿಗೆ ನೃತ್ಯ ಮಾಡಿಕೊಂಡು ಮೆರವಣಿಗೆ ತೆರಳುತ್ತಿದ್ದು, ಮೊಸಳೆಹೊಸಳ್ಳಿಯ ಸಂತೆ ಮಾಳದಲ್ಲಿ ಸಂಗೀತ ರಸಸಂಜೆ ಆಯೋಜಿಸಲಾಗಿತ್ತು. ಗಣೇಶೋತ್ಸವದ ಮೆರವಣಿಗೆ ಇನ್ನು 5 ನಿಮಿಷಗಳ ಕಾಲ ಮುಂದೆ ಹೋಗಿದ್ದರೆ ಸಂತೆಮಾಳ ಸೇರಿಕೊಳ್ಳುತ್ತಿತ್ತು. ಅಷ್ಟರಲ್ಲಿ ದುರ್ಘಟನೆ ಸಂಭವಿಸಿದೆ.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮಸ್ಥರು ಮೆರವಣಿಗೆಯಲ್ಲಿ ಭಕ್ತಿಭಾವದಿಂದ ಪಾಲ್ಗೊಂಡಿದ್ದರು. ರಾತ್ರಿ 8.30ರ ಸುಮಾರಿನಲ್ಲಿ ಈ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ 373ರಲ್ಲಿ ಸಾಗುತ್ತಿದ್ದಾಗ ಸರಕು ಸಾಗಾಣಿಕೆಯ ಕಂಟೈನರ್‌ ವಾಹನ ಮುಂದೆ ಹೋಗುತ್ತಿದ್ದ ಬೈಕ್‌ಗೆ ಗುದ್ದಿ, ಬಲಭಾಗಕ್ಕೆ ತಿರುಗಿ ಡಿವೈಡರ್‌ಅನ್ನು ಹತ್ತಿ ಪಕ್ಕದ ರಸ್ತೆಯಲ್ಲಿದ್ದ ಈ ಮೆರವಣಿಗೆಯ ಮೇಲೆ ಹರಿದಿದೆ. ಇದರಿಂದ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 20 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕಂಗಾಲಾದ ಗ್ರಾಮಸ್ಥರು :
ಹಬ್ಬದ ವಾತಾವರಣವಿದ್ದ ಗ್ರಾಮ ಕ್ಷಣಾರ್ಧದಲ್ಲಿ ಶೋಕದಲ್ಲಿ ಮುಳುಗಿರುವುದು ದುರ್ದೈವ. ಇಡೀ ಗ್ರಾಮವೇ ರಾತ್ರಿಯಿಡೀ ಜಾಗರಣೆ ಮಾಡಿದೆ. ಯುವಕರು ದುರಂತ ಅಂತ್ಯ ಕಂಡಿರುವುದಕ್ಕೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ದೇಶಾದ್ಯಂತ ಆಘಾತ :
ಈ ಭೀಕರ ಅಪಘಾತದ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವುದರಿಂದ ದೇಶಾದ್ಯಂತ ತೀವ್ರ ಆಘಾತ ವ್ಯಕ್ತವಾಗಿದೆ.ಘಟನೆಯ ತೀವ್ರತೆ ಹಾಗೂ ಅಪಘಾತದ ವಿಭಿನ್ನ ದೃಶ್ಯಗಳು ಮೈ ಜುಮೆನ್ನುವಂತಿದ್ದು, ಗಾಬರಿ ಹುಟ್ಟಿಸುವಂತಿವೆ. ಅಪಘಾತದ ವಿಡಿಯೋ ದೃಶ್ಯಾವಳಿಗಳನ್ನು ನೋಡಿದ ಜನರು ಘಟನೆಯ ಭೀಕರತೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್‌..
ಹಾಸನ,ಸೆ.13- ಗಣೇಶ ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಏಕಾಏಕಿ ಟ್ರಕ್‌ ಹರಿದು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಮೊಸಳೆಹೊಸಳ್ಳಿ ಗ್ರಾಮದ ವರ್ತಕರು ಇಂದು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ್ದಾರೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಸ್‌‍ಆರ್‌ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ.ವರ್ತಕರು ಕೂಡ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ.ಮೊಸಳೆಹೊಸಳ್ಳಿ ಗ್ರಾಮಸ್ಥರು 25 ವರ್ಷಗಳಿಂದ ಗ್ರಾಮದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ನಿನ್ನೆ ಆರ್ಕೇಸ್ಟ್ರಾ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಆರ್ಕೇಸ್ಟ್ರಾ ನೋಡಲು ನೂರಾರು ಮಂದಿ ಬರುತ್ತಿದ್ದರು. ಈ ವೇಳೆ ಮೆರವಣಿಗೆಯಲ್ಲಿ ತೆರಳುತ್ತಿದ್ದ ಅವರ ಮೇಲೆ ಯಮರೂಪಿ ಟ್ರಕ್‌ ಹರಿದು ದುರಂತ ಸಂಭವಿಸಿದೆ.

ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ :
ಹಾಸನ,ಸೆ.13- ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ.ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ
ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ನಿನ್ನೆ ಮಧ್ಯಾಹ್ನ 3.30ರ ಸುಮಾರಿನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಸ್ಥಳದಿಂದ ಡೆಕೋರೆಟೆಡ್‌ ರಥದಲ್ಲಿ ಕೂರಿಸಿಕೊಂಡು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿಕೊಂಡು ಹೋಗಲಾಗುತ್ತಿತ್ತು.
ರಾತ್ರಿ 8.45ರ ಸುಮಾರಿನಲ್ಲಿ ಈ ವಾಹನ ರಾಷ್ಟ್ರೀಯ ಹೆದ್ದಾರಿ-373ರ ಹೊಳೆನರಸೀಪುರ ಕಡೆಯಿಂದ ಹಾಸನ ಕಡೆಗೆ ಹೋಗುವ ರಸ್ತೆಯಲ್ಲಿ ಮೊಸಳೆಹೊಸಳ್ಳಿ ಗ್ರಾಮದ ಬಾಬು ಟ್ರೇಡರ್ಸ್‌ ಮುಂಭಾಗ ಮೆರವಣಿಗೆ ಸಾಗುತ್ತಿತ್ತು.

ಅದೇ ಸಮಯಕ್ಕೆ ಕಂಟೈನರ್‌ ಲಾರಿಯನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದ ಚಾಲಕ ಹಾಸನ ಕಡೆಯಿಂದ ಹೊಳೆನರಸೀಪುರದ ಕಡೆಗೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಅದು ಸಾಧ್ಯವಾಗದೇ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಮಧ್ಯದ ಡಿವೈಡರ್‌ ದಾಟಿ ಮೆರವಣಿಗೆಯಲ್ಲಿದ್ದ ಸಾರ್ವಜನಿಕರ ಮೇಲೆ ಹರಿಸಿದ ಪರಿಣಾಮ 8 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಈಶ್ವರ್‌, ರಾಜೇಶ್‌, ಗೋಕುಲ್‌, ಕುಮಾರ್‌, ಪ್ರವೀಣ್‌ಕುಮಾರ್‌, ಮಿಥುನ್‌, ಪ್ರವೀಣ್‌ ಮತ್ತು ಸುರೇಶ್‌ ಎಂದು ಗುರುತಿಸಲಾಗಿದೆ.ಅಲ್ಲದೆ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟರಹಳ್ಳಿಯ ಪ್ರಭಾಕರ್‌ ಎಂಬುವರು ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದು, ಮೃತರ ಸಂಖ್ಯೆ 9 ಕ್ಕೆ ಏರಿದಂತಾಗಿದೆ.

ಮೆರವಣಿಗೆಯಲ್ಲಿದ್ದ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರೆಲ್ಲರನ್ನೂ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಗೊರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟ್ರಕ್‌ ಚಾಲಕನಿಂದ ಮತ್ತೊಂದು ಅಪಘಾತ! :
ಟ್ರಕ್‌ ಚಾಲಕ ಭುವನೇಶ್‌ ಈ ಅಪಘಾತಕ್ಕೂ ಮುನ್ನ ಹಾಸನ ಜಿಲ್ಲೆ ಚನ್ನಪಟ್ಟಣದ ಬೈಪಾಸ್‌‍ನಲ್ಲಿ ಆಟೋ ಮತ್ತು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಈ ಮಾರ್ಗಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿ ಭುವನೇಶ್‌ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಟ್ರಕ್‌ ಚಾಲಕನ ವೈಫಲ್ಯವೇ ಅಪಘಾತಕ್ಕೆಕಾರಣ
ಬೆಂಗಳೂರು,ಸೆ.13- ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆ ಸಂಭವಿಸಿದ ಭೀಕರ ಅಪಘಾತಕ್ಕೆ ಟ್ರಕ್‌ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ದಕ್ಷಿಣ ವಲಯದ ಐಜಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಟ್ರಕ್‌ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.ಈ ಮಾರ್ಗದಲ್ಲಿ ಟ್ರಕ್‌ ಬರುತ್ತಿದ್ದಾಗ ಮುಂದೆ ಹೋಗುತ್ತಿದ್ದ ಬೈಕ್‌ ಸವಾರನನ್ನು ಗಮನಿಸಿ ತಕ್ಷಣ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ವಾಹನವನ್ನು ಏಕಾಏಕಿ ಪಕ್ಕಕ್ಕೆ ತೆಗೆದುಕೊಂಡ ಪರಿಣಾಮ ನಿಯಂತ್ರಣ ತಪ್ಪಿ ಬೈಕ್‌ಗೆ ಅಪ್ಪಳಿಸಿ ನಂತರ ರಸ್ತೆ ವಿಭಜಕ ಹತ್ತಿ ಮೆರವಣಿಗೆಯಲ್ಲಿ ಹೋಗುತ್ತಿದ್ದ ಜನರ ಮೇಲೆ ನುಗ್ಗಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯಲ್ಲಿ ಟ್ರಕ್‌ ಚಾಲಕ ಗಾಯಗೊಂಡಿದ್ದು, ಆತನೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಎಸ್ಪಿ ಮಹಮದ್‌ ಸುಜೇತಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಟ್ರಕ್‌ ಹಾಸನದಿಂದ ಹೊಳೆನರಸೀಪುರದ ಕಡೆಗೆ ಹೊರಟಿದ್ದ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಸೊಕೋ ತಂಡ ಪರಿಶೀಲನೆ ನಡೆಸುತ್ತಿದ್ದು, ಅಪಘಾತದ ನಿಖರ ಕಾರಣದ ಬಗ್ಗೆ ತನಿಖೆ ಆರಂಭಿಸಿದೆ. ತಜ್ಞರ ತಂಡ ಘಟನಾ ಸ್ಥಳವನ್ನು ಇಂಚಿಂಚೂ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಹೇಳಿದರು.

ಈ ಹೆದ್ದಾರಿಯ ಒಂದು ಬದಿ ಬಂದ್‌ ಮಾಡಿದ್ದರಿಂದ ಮತ್ತೊಂದು ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ರಸ್ತೆ ಮಧ್ಯೆ ವಾಹನಗಳು ನುಗ್ಗದಂತೆ ಬ್ಯಾರಿಕೇಡ್‌ಗಳನ್ನೂ ಹಾಕಲಾಗಿತ್ತು.
ಇದೇ ವೇಳೆಗೆ ಹಾಸನದಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ಟ್ರಕ್‌ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ಗಣೇಶ ಮೆರವಣಿಗೆಯತ್ತ ನುಗ್ಗಿದೆ.ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದವರಿಗೆ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಟ್ರಕ್‌ ಅವರ ಮೇಲೆಯೇ ಯಮನಂತೆ ಎರಗಿತ್ತು.ಆ ವೇಳೆ ಮೆರವಣಿಗೆಯಲ್ಲಿದ್ದವರು ಎಲ್ಲೆಂದರಲ್ಲಿ ಓಡಿ ಕೆಲವರು ಪ್ರಾಣ ಉಳಿಸಿಕೊಂಡಿದ್ದಾರೆ.

ಮೃತರ ಮನೆಗಳಿಗೆ ಕೃಷ್ಣಭೈರೇಗೌಡ ಭೇಟಿ :
ಹಾಸನ, ಸೆ.13- ಹಾಸನ-ಮೈಸೂರು ರಾಷ್ಟ್ರೀಯ ಹೆದ್ದಾರಿ 373ರ ಮೊಸಳೆ ಹೊಸಳ್ಳಿ ಗ್ರಾಮದ ಬಳಿ ನಿನ್ನೆ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಟ್ರಕ್‌ ಹರಿದು 9 ಜನ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮೃತರ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದರು.

ಹಾಸನ ಟೋಲ್‌ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಶಾಲೆಯಲ್ಲಿ
ಜಿಲ್ಲಾಧಿಕಾರಿ ಲತಾಕುಮಾರಿ, ಎಸ್ಪಿ ಮಹಮದ್‌ ಸಚಿತ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ನಂತರ ಸಚಿವರು ಅಪಘಾತದಲ್ಲಿ ಮೃತಪಟ್ಟ ಪ್ರಭಾಕರ್‌, ಗಣನಾಯಕನಹಳ್ಳಿಯ ಈಶ್ವರ್‌ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಪತಿ ಮೂರ್ತಿ ಮೆರವಣಿಗೆ ವೇಳೆ ಅಪಘಾತಕ್ಕೆ ಕಾರಣವಾದ ಟ್ರಕ್‌ ಚಾಲಕ ಭುವನ್‌ ವಿರುದ್ಧ ಗೋರೂರು ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕೆಎಸ್‌‍ಆರ್‌ಪಿ ತುಕಡಿ ನಿಯೋಜಿಸಲಾಗಿದೆ .ಇಂಥ ದುರಂತ ಸಂಭವಿಸಿರುವುದು ದುರದೃಷ್ಟಕರ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ ಎಂದರು.

ಮೃತರ ಮನೆಗಳಿಗೆ ತೆರಳಿ ಕುಟುಂಬದವರ ನೋವಿನಲ್ಲಿ ಭಾಗಿಯಾಗಬೇಕಾದದ್ದು, ನನ್ನ ಜವಾಬ್ದಾರಿಯಾಗಿದೆ. ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಅವರು ಹೇಳಿದರು.ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಸಚಿವರು ವಿಚಾರಿಸಿದರು. ಗಾಯಾಳುಗಳ ಚಿಕಿತ್ಸಾವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.

ಮನೆಕೆಲಸ ಮಾಡಿ ಮಗನನ್ನು ಓದಿಸುತ್ತಿದ್ದೆ, ನಮ ಆಸೆಗೆ ತಣ್ಣೀರೆರಚಿದ ಜವರಾಯ
ಹಾಸನ, ಸೆ.13- ಮನೆಕೆಲಸ ಮಾಡಿ ಮಗನನ್ನು ಓದಿಸಿದ್ದಕ್ಕೂ ಸಾರ್ಥಕವಾಗುತ್ತಿದೆ. ಇನ್ನೇನು ಮಗ ಕೆಲಸಕ್ಕೆ ಸೇರಿದರೆ ನಮ ಕಷ್ಟ-ಕಾರ್ಪಣ್ಯಗಳೆಲ್ಲ ದೂರವಾಗುತ್ತವೆ ಎಂದು ಹತ್ತು-ಹಲವು ಆಶಾಗೋಪುರ ಕಟ್ಟಿಕೊಂಡಿದ್ದ ತಾಯಿಯ ಕನಸಿಗೆ ಜವರಾಯ ತಣ್ಣೀರೆರಚಿಸಿದ್ದಾನೆ.

ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ಟ್ರಕ್‌ ಹರಿದು ಮೃತಪಟ್ಟ ಬಳ್ಳಾರಿಯ ಎಂಜಿನಿಯರಿಂಗ್‌ ವಿದ್ಯಾರ್ಥಿ ಪ್ರವೀಣ್‌ ಅವರ ತಾಯಿಯ ಆಕ್ರಂಧನದ ಮಾತುಗಳಿವು. ಬಳ್ಳಾರಿಯ ನಾಗಲಕೆರೆಯ ಪ್ರವೀಣ್‌ ಗಣೇಶ ವಿಸರ್ಜನೆ ವೇಳೆ ಸಂಭವಿಸಿದ ಘೋರ ದುರಂತದಲ್ಲಿ ಉಸಿರು ಚೆಲ್ಲಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಪ್ರವೀಣ್‌ನನ್ನು ತಾಯಿ ಕಷ್ಟಪಟ್ಟು ಮನೆಕೆಲಸ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಎಂಜಿನಿಯರಿಂಗ್‌ ಓದಿಸುತ್ತಿದ್ದರು.

ಬಳ್ಳಾರಿಯಲ್ಲಿ ಡಿಪ್ಲಮೋ ಮುಗಿಸಿ ಹಾಸನದಲ್ಲಿ ಎಂಜಿನಿಯರಿಂಗ್‌ ಮಾಡಲು ತೆರಳಿ ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಅಂತಿಮ ಸೆಮಿಸ್ಟರ್‌ ಓದುತ್ತಿದ್ದ ಪ್ರವೀಣ್‌, ಇನ್ನೇನು ಪರೀಕ್ಷೆ ಮುಗಿಸಿಕೊಂಡು ಕೆಲಸಕ್ಕೆ ಸೇರಿ ನಮ ಕಷ್ಟಗಳನ್ನೆಲ್ಲ ದೂರ ಮಾಡುತ್ತಾನೆ ಎಂದು ಪ್ರವೀಣ್‌ ತಾಯಿ ಕನಸನ್ನು ಹೊತ್ತು ಹೆಮೆಯಿಂದ ತಮ ಸಂಬಂಧಿಕರು ಹಾಗೂ ಕುಟುಂಬದವರೊಂದಿಗೆ ಹೇಳಿಕೊಳ್ಳುತ್ತಿದ್ದರು.

ಆದರೆ, ಜವರಾಯನಿಗೆ ನಮ ಬಡವರ ಸಂಭ್ರಮ ನೋಡಿ ಸಹಿಸಲಾಗಲಿಲ್ಲವೇನೋ… ಕುಟುಂಬಕ್ಕೆ ಆಧಾರವಾಗಬೇಕಿದ್ದ ಮಗನನ್ನು ಎಳೆ ವಯಸ್ಸಿನಲ್ಲೇ ಕಿತ್ತುಕೊಂಡಿದ್ದಾನೆ. ಇಂತಹ ನೋವು ಯಾವ ತಾಯಂದಿರಿಗೂ ಬರುವುದು ಬೇಡ ಎಂದು ಪುತ್ರಶೋಕದಲ್ಲಿ ಮಮಲ ಮರುಗಿಸಿದ್ದಾರೆ.
ಪ್ರವೀಣ್‌ನ ಮೃತದೇಹ ಬಳ್ಳಾರಿಗೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ತಾಯಿ ಇನೇಲೆ ನನಗೆ ಯಾರು ದಿಕ್ಕು ಎಂದು ಎದೆ ಬಡಿದುಕೊಂಡು ಕುಸಿದುಬಿದ್ದಿದ್ದಾರೆ. ತಾಯಿಯ ಗೋಳಾಟ ಕಂಡ ಇಡೀ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

ಬಾಳಿ ಬದುಕಬೇಕಾದ ಮಕ್ಕಳು ಈ ರೀತಿ ದುರಂತದಲ್ಲಿ ಸಾವಿಗೀಡಾದರೆ ಪೋಷಕರ ಗತಿ ಏನಾಗಬೇಕು. ಹೊಟ್ಟೆಬಟ್ಟೆ ಕಟ್ಟಿ, ಸಾಲ ಸೋಲ ಮಾಡಿ ಕಷ್ಟ ಪಟ್ಟು ಮಕ್ಕಳನ್ನು ಬೆಳೆಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಸುಂದರ ಕನಸು ಕಟ್ಟಿಕೊಳ್ಳುವ ಕುಟುಂಬಸ್ಥರಿಗೆ ಇಂತಹ ದುರಂತಗಳು ನುಂಗಲಾರದ ತುತ್ತಾಗಿ ಪರಿಣಮಿಸುತ್ತಿವೆ.

ಈ ಸಾವು ನ್ಯಾಯವೇ..?
ಹಾಸನ, ಸೆ.13- ನಿನ್ನೆಯೆಲ್ಲಾ ಪೋಷಕರು, ಬಂಧು-ಬಳಗ, ಸ್ನೇಹಿತರೆಲ್ಲ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಆದರೆ, ಇಂದು ಸಂತಾಪ ಸೂಚಿಸುವಂತಾಗಿದೆ ಎಂದು ಮೊಸಳೆಹೊಸಳ್ಳಿ ದುರಂತದಲ್ಲಿ ಮೃತಪಟ್ಟ ವಿದ್ಯಾರ್ಥಿ ಮಿಥುನ್‌ ಕುಟುಂಬದ ಕಣ್ಣೀರಿನ ಮಾತು. ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರ ಗ್ರಾಮದ ಮಿಥುನ್‌ (22) ಹುಟ್ಟುಹಬ್ಬದ ದಿನವೇ ದುರಂತ ಅಂತ್ಯ ಕಂಡಿದ್ದಾನೆ. ಮಿಥುನ್‌ ಹಲವು ಗುರಿಗಳನ್ನು ಕಟ್ಟಿಕೊಂಡು ಮಿಥುನ್‌ ಓದುತ್ತಿದ್ದ. ಆದರೆ, ಗುರಿ ತಲುಪಲು ಭಗವಂತ ಬಿಡಲಿಲ್ಲ. ಮಧ್ಯದಲ್ಲೇ ಜೀವ ಕಸಿದುಕೊಂಡಿದ್ದು, ಬಾಳಿ ಬದುಕಬೇಕಾದ ಮಿಥುನ್‌ ದುರಂತ ಅಂತ್ಯ ಕಂಡಿರುವುದು ವಿಷಾದಕರ. ಸ್ನೇಹಿತರು ಹಾಗೂ ಕುಟುಂಬದವರು ಈತನ ಸಾವನ್ನು ಅರಗಿಸಿಕೊಳ್ಳಲಾಗದೆ ಕಣ್ಣೀರಿನ ಕಟ್ಟೆಯೊಡೆದಿದೆ.

ಮೊಸಳೆಹೊಸಳ್ಳಿ ಅಪಘಾತ: ಪಾರದರ್ಶಕ ತನಿಖೆ
ಹಾಸನ, ಸೆ.13- ಮೊಸಳೆಹೊಸಳ್ಳಿ ಗಣೇಶೋತ್ಸವದ ಮೆರವಣಿಗೆ ವೇಳೆ ಲಾರಿ ಹರಿದ ಘಟನೆಯ ಬಗ್ಗೆ ಪಾರದರ್ಶಕ ತನಿಖೆ ನಡೆಸಲಾಗುವುದು ಎಂದು ಸಂಸದ ಶ್ರೇಯಸ್‌‍ ಪಟೇಲ್‌ ಹೇಳಿದ್ದಾರೆ.
ರಾತ್ರಿಯೇ ಸ್ಥಳಕ್ಕೆ ಭೇಟಿ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ನಡೆಯಬಾರದ ದುರ್ಘಟನೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ಲಾರಿ ಗಣೇಶೋತ್ಸವದ ಮೆರವಣಿಗೆಯ ವೇಳೆ ಹರಿದಿರುವುದು ಆಘಾತವನ್ನುಂಟು ಮಾಡಿದೆ ಎಂದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೂಕ್ತ ತನಿಖೆಯ ಮೂಲಕ ಯಾರ ಲೋಪವಿದೆ ಎಂದು ಪತ್ತೆ ಹಚ್ಚಲಾಗುವುದು. ಸದ್ಯಕ್ಕೆ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುವುದು, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದಿದ್ದಾರೆ.

ಉಸ್ತುವಾರಿ ಸಚಿವರ ತೀವ್ರ ನಿಗಾ
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದ ಹಿನ್ನೆಲೆಯಲ್ಲಿ ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿಯಿಡೀ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ.ಮೃತರ ಕುಟುಂಬಗಳ ಜೊತೆ ಸತತ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮೃತರ ಮರಣೋತ್ತರ ಪರೀಕ್ಷೆ ರಾತ್ರಿಯೇ ನಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಂಡರು. ವೈದ್ಯರ ತಂಡ ಬೆಳಗಾಗುವವರೆಗೂ ಕಾಯದೇ ರಾತ್ರಿಯೇ ಮರಣೋತ್ತರ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

ಗಾಯಾಳುಗಳ ಚಿಕಿತ್ಸೆಗೆ ಖುದ್ದಾಗಿ ಜಿಲ್ಲಾ ವೈದ್ಯಾಧಿಕಾರಿಗಳೇ ಉಸ್ತುವಾರಿ ವಹಿಸಿದ್ದು, ಅಗತ್ಯ ವೈದ್ಯರ ತಂಡವನ್ನು ರಚಿಸಿದ್ದಾರೆ. ಅಗತ್ಯವಾದ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಯವರ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ಉಸ್ತುವಾರಿ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಮೃತರ ಕುಟುಂಬದವರ ಜೊತೆಗೂ ಮಾತನಾಡುತ್ತಿದ್ದಾರೆ.

RELATED ARTICLES

Latest News