Saturday, September 13, 2025
Homeರಾಜ್ಯಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ : ರೇವಣ್ಣ ಆಕ್ರೋಶ

ಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ : ರೇವಣ್ಣ ಆಕ್ರೋಶ

Police failure is the reason for the tragedy: Revanna's outcry

ಹಾಸನ, ಸೆ.13- ಗಣೇಶೋತ್ಸವದ ಮೇಲೆ ಲಾರಿ ಹರಿದು 9 ಮಂದಿ ಮೃತಪಟ್ಟ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ ಎಂದು ಜೆಡಿಎಸ್‌‍ ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾತ್ರಿಯೇ ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಾರು ಎರಡು ಸಾವಿರ ಮಂದಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬ್ಯಾರಿಕೇಡ್‌ಗಳನ್ನು ಹಾಕಿ ಸೂಕ್ತ ಭದ್ರತೆ ಒದಗಿಸಬೇಕಾಗಿತ್ತು. ಆದರೆ ಪೊಲೀಸರು ಆ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರೇವಣ್ಣ ಆರೋಪಿಸಿದ್ದಾರೆ.

ಒಂದು ಕಡೆ ವಾಹನ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಮತ್ತೊಂದು ಕಡೆ ಗಣೇಶೋತ್ಸವ ಮೆರವಣಿಗೆ ಸಾಗಿದೆ. ಚಾಲಕ ಕುಡಿದು ವಾಹನ ಚಲಾಯಿಸಿದ್ದಾನೆ. ಅತಿಯಾದ ವೇಗದಲ್ಲಿ ಬಂದಿದ್ದರಿಂದ ಲಾರಿ ನಿಯಂತ್ರಣಕ್ಕೆ ಸಿಗದೆ ದುರಂತ ಸಂಭವಿಸಿದೆ ಎಂದು ಹೇಳಿದರು. ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸೂರಜ್‌ ರೇವಣ್ಣ ಮಾತನಾಡಿ, ಒಂದೂವರೆ ಗಂಟೆಗೂ ಮೊದಲು ನಾನು ಮೊಸಳೆಹೊಸಹಳ್ಳಿಯ ಗಣೇಶೋತ್ಸವಕ್ಕೆ ಬಂದು ಯುವಕರನ್ನು ಮಾತನಾಡಿಸಿ, ಬೇರೆ ಕಾರ್ಯಕ್ರಮ ಇದ್ದುದ್ದಕ್ಕಾಗಿ ಹೋಗಿದ್ದೆ. ಈಗ ನೋಡಿದರೆ ಇಲ್ಲಿ ಹೆಣಗಳು ಚೆಲ್ಲಾಪಿಲ್ಲಾಗಿ ಬಿದ್ದಿವೆ. ಕಣ್ಣಿಂದ ನೋಡಲಾಗುತ್ತಿಲ್ಲ, ದುಃಖ ತಡೆಯಲಾಗುತ್ತಿಲ್ಲ ಎಂದು ಶೋಕಿಸಿದರು.

ನಾನು ಒಂದೂವರೆ ಗಂಟೆಯ ಹಿಂದೆ ಇಲ್ಲಿಗೆ ಬಂದಾಗ ಒಬ್ಬ ಪೊಲೀಸ್‌‍ ಸಿಬ್ಬಂದಿ ಇರಲಿಲ್ಲ, ಪೊಲೀಸ್‌‍ ವಾಹನಗಳು ಇರಲಿಲ್ಲ. ಇದು ಸಂಪೂರ್ಣವಾಗಿ ಪೊಲೀಸ್‌‍ ವೈಫಲ್ಯದಿಂದಾದ ದುರ್ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Latest News