Sunday, September 14, 2025
Homeಬೆಂಗಳೂರುಬೆಂಗಳೂರಿಗರೇ ಗಮನಿಸಿ, ನಾಳೆಯಿಂದ 3 ದಿನ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ, ನಾಳೆಯಿಂದ 3 ದಿನ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

disruption in Cauvery water supply for 3 days from tomorrow

ಬೆಂಗಳೂರು,ಸೆ.14- ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ನಾಳೆಯಿಂದ ಸೆ.17ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ತಿಳಿಸಿದ್ದಾರೆ.

ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ನಾಳೆಯಿಂದ ಮೂರು ದಿನಗಳ ಕಾಲ ಸಂಚಾರಿ ಕಾವೇರಿ ಯೋಜನೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಈ ಟ್ಯಾಂಕರ್‌ಗಳನ್ನು ತುರ್ತು ನೀರು ಸರಬರಾಜಿಗೆ ಮಾತ್ರ ಬಳಸಿಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಗ್ರೇಟರ್‌ ಬೆಂಗಳೂರು ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಸರಬರಾಜು ಮಾಡಲು, ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಾಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯು ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂದಿದ್ದಾರೆ.

ಕಾವೇರಿ 5ನೇ ಹಂತದ ಜಲರೇಚಕ ಯಂತ್ರಾಗಾರಗಳು(ಪಂಪಿಂಗ್‌ ಸ್ಟೇಷನ್‌) ನಾಳೆ ಬೆಳಗಿನ ಜಾವ ಒಂದು ಗಂಟೆಯಿಂದ ಸೆ.17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ ಸ್ಥಗಿತಗೊಳ್ಳಲಿವೆ. ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1,ಹಂತ-02,ಹಂತ-3, ಹಂತ-4ರ 1ನೇ ಘಟ್ಟ ಮತ್ತು 2ನೇ ಘಟ್ಟಗಳ ಜಲರೇಚಕ ಯಂತ್ರಾಗಾರಗಳನ್ನು ಸೆ.16ರ ಬೆಳಿಗ್ಗೆ 6ರಿಂದ ಸೆ.17ರ ಬೆಳಿಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಂಚಾರಿ ಕಾವೇರಿ ಯೋಜನೆ ಮೂರು ದಿನ ಸ್ಥಗಿತ: ಸಂಚಾರಿ ಕಾವೇರಿ ಯೋಜನೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಿ, ತುರ್ತು ನೀರು ಸರಬರಾಜಿಗಾಗಿ ಬಳಸಿಕೊಳ್ಳಲಾಗುವುದು. ಇದರಿಂದ ಸಂಚಾರಿ ಕಾವೇರಿ ಯೋಜನೆಯ ಸೇವೆಯಲ್ಲಿ ಈ ಮೂರು ದಿನಗಳ ಕಾಲ ವ್ಯತ್ಯಯವಾಗಲಿದೆ . ಕಾವೇರಿ ನೀರು ಸರಬರಾಜಾಗುವ ಪ್ರದೇಶಗಳ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹಣೆ ಮಾಡಿಕೊಳ್ಳಲು ಅವರು ಕೋರಿದ್ದಾರೆ.

RELATED ARTICLES

Latest News