ದಾಬಸ್ ಪೇಟೆ, ಸೆ.14- ಹಸುಗಳು ಸಾಮಾನ್ಯವಾಗಿ ಎರಡು ಕರುಗಳಿಗೆ ಜನ ನೀಡುವುದನ್ನು ನೋಡಿದ್ದೇವೆ. ಆದರೆ, ಹೋಬಳಿಯ ಕಂಬಾಳು ಮಠದ ಹಸುವೊಂದು ಮೂರು ಕರುಗಳಿಗೆ ಜನ ನೀಡಿ ಅಚ್ಚರಿ ಮೂಡಿಸಿದೆ.
ಕಪ್ಪು ಮತ್ತು ಬಿಳಿಯ ಮಚ್ಚೆ ಹೊಂದಿರುವ ಹಸುವು ಶ್ರೀಮಠಕ್ಕೆ ಪ್ರೀತಿಪಾತ್ರವಾದ ಲಕ್ಷ್ಮಿ ಹೆಸರಿನ ಗೋವು ಇದಾಗಿದ್ದು, ಒಂದೇ ಬಾರಿಗೆ ಮೂರು ಕರುಗಳನ್ನು ಜನ ನೀಡಿದೆ.
ಮೂರು ಕರುಗಳಿಗೆ ಜನ ನೀಡಿರುವ ವಿಷಯವು ಮಠದ ಆಜುಬಾಜಿನವರಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ವಿಚಾರವನ್ನು ಅರಿತ ಮಠಾಧೀಶರಾದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಿಬ್ಬಂದಿ ಗೋಮಾತೆಯಾದ ಲಕ್ಷ್ಮಿ ಮತ್ತು ಮೂರು ಕರುಗಳ ಆರೈಕೆ ಮಾಡಿದ್ದು ,ತಾಯಿ ಹಸು ಸಹ ತನ್ನ ಮುದ್ದು ಕರುಗಳನ್ನು ಮುದ್ದಿಸುತ್ತಿದ್ದ ದೃಶ್ಯ ನೋಡುಗರಲ್ಲಿ ಮುದವನ್ನುಂಟು ಮಾಡಿತ್ತು.
ತಾಯಿ ಹಸು ಮತ್ತು ಮೂರು ಕರುಗಳು ಆರೋಗ್ಯ ಮತ್ತು ಲವಲವಿಕೆಯಿಂದ ಇದ್ದು, ಶ್ರೀಮಠದಲ್ಲಿ ಸಂತಸವನ್ನುಂಟುಮಾಡಿದೆ.