Sunday, September 14, 2025
Homeರಾಜ್ಯಧರ್ಮಸ್ಥಳ ಪ್ರಕರಣ : ಮತ್ತೆ ಉತ್ಖನನ ನಡೆಸುವ ಕುರಿತು ಎಸ್‌ಐಟಿ ಗಂಭೀರ ಚರ್ಚೆ..?!

ಧರ್ಮಸ್ಥಳ ಪ್ರಕರಣ : ಮತ್ತೆ ಉತ್ಖನನ ನಡೆಸುವ ಕುರಿತು ಎಸ್‌ಐಟಿ ಗಂಭೀರ ಚರ್ಚೆ..?!

Dharmasthala case: SIT serious discussion on conducting excavations again..?!

ಬೆಂಗಳೂರು, ಸೆ.14– ಧರ್ಮಸ್ಥಳದ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದ್ದು, ರಜಾ ದಿನವನ್ನು ಲೆಕ್ಕಿಸದೆ ಎಸ್‌‍ಐಟಿ ಮುಖ್ಯಸ್ಥ ಪ್ರಣಬ್‌ ಮೊಹಾಂತಿ ತನಿಖಾ ತಂಡದ ಜೊತೆ ಇಂದು ಮಹತ್ವದ ಸಭೆ ನಡೆಸಿದ್ದಾರೆ.

ಸಾಮಾನ್ಯವಾಗಿ ಭಾನುವಾರ ತನಿಖೆ ಹಾಗೂ ವಿಚಾರಣೆಗೆ ಎಸ್‌‍ಐಟಿ ತಂಡ ವಿರಾಮ ನೀಡುತ್ತಿತ್ತು. ಆದರೆ ಸೌಜನ್ಯ ಅವರ ಮಾವ ವಿಠಲ್‌ಗೌಡ ಅವರ ಹೇಳಿಕೆ ಗಂಭೀರ ಸ್ವರೂಪಕ್ಕೆ ತಿರುಗಿದ್ದು, ಇದನ್ನು ಆಧರಿಸಿ, ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸಬೇಕೇ? ಬೇಡವೇ? ಎಂಬ ಬಗ್ಗೆ ಸುದೀರ್ಘ ಸಮಾಲೋಚನೆಯಾಗಿದೆ.

ಎಸ್‌‍ಐಟಿ ತಂಡದ ತನಿಖಾಧಿಕಾರಿ ಜಿತೇಂದ್ರಕುಮಾರ್‌ ದಯಾಮ, ಸಿ.ಎ.ಸೈಮನ್‌ ಮತ್ತಿತರರು ಸಭೆಯಲ್ಲಿದ್ದರು.ನೇತ್ರಾವತಿ ದಂಡೆಯಲ್ಲಿರುವ ಬಂಗ್ಲೆಗುಡ್ಡ ಕಾಡಿನಲ್ಲಿ ಮಾನವ ಅವಶೇಷಗಳ ರಾಶಿಯೇ ದೊರೆತಿದೆ ಎಂದು ವಿಠಲ್‌ಗೌಡ ಹೇಳಿಕೆ ನೀಡಿದರು. ತಮನ್ನು ಅಲ್ಲಿಗೆ ಎಸ್‌‍ಐಟಿ ತಂಡ ಕರೆದುಕೊಂಡು ಹೋದಾಗ ಮೊದಲ ದಿನ 5 ಹಾಗೂ ಎರಡನೇ ದಿನ 3 ಅಸ್ಥಿಪಂಜರಗಳನ್ನು ನೋಡಿದ್ದಾಗಿ ವಿಠಲ್‌ಗೌಡ ಹೇಳಿದರು. ಅಸ್ಥಿಪಂಜರಗಳ ಪೈಕಿ ಚಿಕ್ಕ ಮಗುವಿನ ಕಳೇಬರವನ್ನು ತಾವು ಕಂಡಿದ್ದಾಗಿ ತಿಳಿಸಿದರು.

ಇದು ಭಾರೀ ಸಂಚಲನ ಮೂಡಿಸಿತ್ತು. ಈ ಹಿಂದೆ ಚಿನ್ನಯ್ಯ ಇದೇ ರೀತಿಯ ಹೇಳಿಕೆ ನೀಡಿ, ಭಾರೀ ಗೊಂದಲ ಮೂಡಿಸಿದ್ದರು. ಆತ ಗುರುತಿಸಿದ ಜಾಗದಲ್ಲಿ ಎಸ್‌‍ಐಟಿ ಉತ್ಖನನ ನಡೆಸಿದಾಗ ಹೆಚ್ಚಿನ ಅಸ್ಥಿಪಂಜರಗಳು ದೊರೆಯದ ಕಾರಣಕ್ಕೆ ಪ್ರಯತ್ನ ವ್ಯರ್ಥವಾಗಿತ್ತು. ತಪ್ಪ ಮಾಹಿತಿ ನೀಡಿ, ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಕಾರಣವಾಗಿದ್ದ ಚಿನ್ನಯ್ಯನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಈಗ ಸೌಜನ್ಯ ಅವರ ಮಾವ ವಿಠಲ್‌ಗೌಡ ಅದೇ ಮಾದರಿಯಲ್ಲಿ ಹೇಳಿಕೆಗಳನ್ನು ನೀಡಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಬಂಗ್ಲೆಗುಡ್ಡದಲ್ಲಿ ಮಾನವ ಅಸ್ಥಿಪಂಜರಗಳಿವೆೆ ಎಂದು ಹೇಳಿರುವ ವಿಠಲ್‌ಗೌಡ ಅವರ ಹೇಳಿಕೆ ಆಧರಿಸಿಯೇ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಎಸ್‌‍ಐಟಿ ಮುಖ್ಯಸ್ಥರಾದ ಪ್ರಣಬ್‌ ಮೊಹಾಂತಿ ಇಂದು ಬೆಳ್ತಂಗಡಿಗೆ ಭೇಟಿ ನೀಡಿ, ತನಿಖಾ ತಂಡದ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಈ ವರೆಗಿನ ತನಿಖೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅದರ ಜೊತೆಗೆ ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸುವ ಬಗ್ಗೆಯೂ ಚರ್ಚೆಗಳಾಗಿವೆ ಎಂದು ತಿಳಿದು ಬಂದಿದೆ.

ಈ ಮೊದಲು 17 ಸ್ಥಳಗಳಲ್ಲಿ ಉತ್ಖನನವಾಗಿತ್ತು. ಬಂಗ್ಲೆಗುಡ್ಡ ಅರಣ್ಯ ಪ್ರದೇಶವಾಗಿದ್ದು, ಈ ಸ್ಥಳವನ್ನು 11ಎ ಎಂದು ಗುರುತಿಸಲಾಗಿತ್ತು. 17 ಸ್ಥಳಗಳಲ್ಲಿ ಯಾವುದೇ ಗಂಭೀರ ಸ್ವರೂಪದ ಪುರಾವೆಗಳು ದೊರೆಯದೇ ಹಿನ್ನೆಲೆಯಲ್ಲಿ 11ಎ ಪಾಯಿಂಟ್‌ನಲ್ಲಿ ಉತ್ಖನನ ನಡೆಸದೆ ಕೈಬಿಡಲಾಗಿತ್ತು. ಆದರೆ ಅಲ್ಲಿ ದೊರೆತಿದ್ದ ಕೆಲವು ಅಸ್ಥಿಗಳನ್ನು ಎಸ್‌‍ಐಟಿ ತಂಡ ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ವಿಠಲ್‌ಗೌಡ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸುವ ಕುರಿತಂತೆ ಜಿಲ್ಲಾಡಳಿತದ ಜೊತೆಯೂ ಚರ್ಚಿಸುವ ಸಾಧ್ಯತೆಯಿದೆ.
ಅರಣ್ಯ ಪ್ರದೇಶದಲ್ಲಿ ಉತ್ಖನನಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಜೊತೆಗೆ ಅರಣ್ಯ ಇಲಾಖೆ ಪೂರ್ವಾನುಮತಿಯೂ ಅಗತ್ಯವಿದೆ. ಈ ಕಾರಣಕ್ಕೆ ಕಾನೂನಿನ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗಳಾಗಿವೆ.

ಮೂಲಗಳ ಪ್ರಕಾರ ಎಸ್‌‍ಐಟಿ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿ ಉತ್ಖನನ ನಡೆಸಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ವಿಠಲ್‌ಗೌಡ ಅವರ ಹೇಳಿಕೆಯ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಬೇಕಾದರೆ, ಉತ್ಖನನ ಆಗಬೇಕು. ಇಲ್ಲವಾದರೆ, ತಪ್ಪು ಮಾಹಿತಿ ನೀಡಿದ ಅರೋಪದ ಮೇಲೆ ವಿಠಲ್‌ಗೌಡನನ್ನು ಬಂಧಿಸಬೇಕು. ಈ ಎರಡೂ ನಡೆಯದಿದ್ದರೆ ತನಿಖೆ ಅಪೂರ್ಣವಾಗುತ್ತವೆ ಎಂಬ ಚರ್ಚೆಗಳಿವೆ.

ಹೇಳಿಕೆ ನೀಡಿದ್ದ ವಿಠಲ್‌ಗೌಡನನ್ನು ಈವರೆಗೂ ಎಸ್‌‍ಐಟಿ ಬಂಧಿಸಿಲ್ಲ, ಈ ನಡುವೆ ಎಸ್‌‍ಐಟಿಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಿದರೆ, ಪ್ರತಿಭಟನೆ ನಡೆಸುವುದಾಗಿ ಸೌಜನ್ಯ ಪರ ಹೋರಾಟ ನಡೆಸುತ್ತಿರುವ ಮಹೇಶ್‌ಶೆಟ್ಟಿ ತಿಮರೋಡಿ ಎಚ್ಚರಿಕೆ ನೀಡಿದ್ದಾರೆ.

ಧರ್ಮಸ್ಥಳದಲ್ಲಿ ಹೂತಿಡಲಾದ ಶವಗಳ ಪ್ರಕರಣ ತನಿಖೆಗೆ ಆರಂಭದಲ್ಲಿ ಮುಂದಾದ ಎಸ್‌‍ಐಟಿ, ಕ್ರಮೇಣ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ದ ತನಿಖೆ ಮುಂದುವರೆಸಿತ್ತು.
ಸಾವಿರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಹೇಳಿಕೆ ನೀಡಿ, ಅದನ್ನು ಸಾಬೀತುಪಡಿಸಲು ವಿಫಲವಾದ ಚಿನ್ನಯ್ಯನನ್ನು ಬಂಧಿಸಲಾಗಿದೆ. ಹಾಗೆಯೇ ಯೂ ಟ್ಯೂಬ್‌ ಹಾಗೂ ಇತರ ಮಾಧ್ಯಮಗಳ ಮೂಲಕ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದವರನ್ನು ತೀವ್ರ ವಿಚಾರಣೆಗೊಳಪಡಿಸಿದೆ. ಈಗ ಬಂಗ್ಲೆಗುಡ್ಡ ರಹಸ್ಯದ ತನಿಖೆಗೆ ಉತ್ಖನನ ಮುಂದುವರೆಯುವ ಬಗ್ಗೆ ಮತ್ತಷ್ಟು ಚರ್ಚೆಗಳಾಗಿವೆ.

RELATED ARTICLES

Latest News