Sunday, September 14, 2025
Homeರಾಜ್ಯಹಿಂದೂಗಳೇ ಟಾರ್ಗೆಟ್‌ : ಪ್ರತಿಪಕ್ಷಗಳ ಒಗ್ಗಟ್ಟು, ಕಾಂಗ್ರೆಸ್ ಸರ್ಕಾರಕ್ಕೆ ಇಕ್ಕಟ್ಟು

ಹಿಂದೂಗಳೇ ಟಾರ್ಗೆಟ್‌ : ಪ್ರತಿಪಕ್ಷಗಳ ಒಗ್ಗಟ್ಟು, ಕಾಂಗ್ರೆಸ್ ಸರ್ಕಾರಕ್ಕೆ ಇಕ್ಕಟ್ಟು

Hindus are the target

ಬೆಂಗಳೂರು, ಸೆ.14- ರಾಜಕೀಯ ಪಕ್ಷಗಳಲ್ಲಿನ ಆಂತರಿಕ ಪೈಪೋಟಿ ಪ್ರತಿಷ್ಠೆ ಯಿಂದಾಗಿ ದಿನೇ ದಿನೇ ರಾಜ್ಯದಲ್ಲಿ ಕೋಮು ಸೂಕ್ಷ್ಮ ವಿಚಾರಗಳು ಬೃಹತ್‌ ಸಮಸ್ಯೆಗಳಾಗಿ ಪರಿವರ್ತನೆಯಾಗಿದ್ದು ಅದನ್ನು ನಿಭಾಯಿಸಲಾಗದೆ, ರಾಜ್ಯಸರ್ಕಾರ ಪರದಾಡುವಂತಾಗಿದೆ. ಗಣೇಶೋತ್ಸವದ ಗಲಾಟೆಗಳು ಕಾಂಗ್ರೆಸ್‌‍ಗೆ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿಯನ್ನು ಗಟ್ಟಿಗೊಳಿಸುತ್ತಿವೆ.

ವಿಷಯಾಂತರಿಸಲು ಸರ್ಕಾರ ನಡೆಸುತ್ತಿರುವ ನಾನಾ ರೀತಿಯ ಕಸರತ್ತುಗಳು ಪ್ರಯೋಜನವಾಗದೆ ಕಾಂಗ್ರೆಸ್‌‍ ಸರ್ಕಾರ ಹಿಂದೂ ವಿರೋಧಿ ಎಂದು ಬ್ರಾಂಡ್‌ ಆಗುತ್ತಿದೆ.
ಒಂದೆಡೆ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಆರ್ಭಟ ಮಾಡುತ್ತಿದ್ದು, ಅವರ ಮುಂದೆ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಮಂಕಾದಂತೆ ಕಂಡು ಬರುತ್ತಿದ್ದಾರೆ.

ತಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮದ್ದೂರಿನ ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ವಿಜಯೇಂದ್ರ ಮತ್ತು ಅಶೋಕ್‌ ಅವರು ಬೃಹತ್‌ ಪ್ರತಿಭಟನೆ ಆಯೋಜಿಸಿದ್ದರು. ಪ್ರತಿಭಟನೆ ಯಶಸ್ವಿಯಾಗಿ ಮದ್ದೂರಿನ ಗಲಭೆ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಹಂತದಲ್ಲೇ ಸ್ಥಳೀಯ ಕಾರ್ಯಕರ್ತರು, ಬಸನಗೌಡ ಯತ್ನಾಳ್‌ ಸ್ಥಳಕ್ಕಾಗಮಿಸಬೇಕೆಂದು ಘೋಷಣೆ ಕೂಗಿದರು. ಅದನ್ನು ಅನುಸರಿಸಿ ಯತ್ನಾಳ್‌ ಸ್ಥಳಕ್ಕೆ ಬಂದು ಮತ್ತಷ್ಟು ಅಬ್ಬರ ಮಾಡಿದರು. ಅಶೋಕ್‌ ಮತ್ತು ವಿಜಯೇಂದ್ರ ಅವರ ಪ್ರಯತ್ನಗಳು ಯತ್ನಾಳ್‌ ಅವರ ವರ್ಚಸ್ಸು ಹೆಚ್ಚಳಕ್ಕೆ ಬಂಡವಾಳವಾಗಿ ಪರಿವರ್ತನೆಯಾದವು.

ಬಿಜಾಪುರಕ್ಕಷ್ಟೇ ಸೀಮಿತವಾಗಿದ್ದ ಯತ್ನಾಳ್‌ ಉಚ್ಛಾಟನೆ ಬಳಿಕ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ಅವರು ಹೋದ ಕಡೆಯಲೆಲ್ಲಾ ಭಾರಿ ಪ್ರಮಾಣದ ಬೆಂಬಲ ಸಿಗುತ್ತಿದೆ. ಇದಕ್ಕೆ ಕೌಂಟರ್‌ ನೀಡಲು ಬಿಜೆಪಿ ನಾಯಕರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಇತ್ತ ಕಿತ್ತೂರು ಕರ್ನಾಟಕ ಭಾಗಕ್ಕೆ ಸೀಮಿತವಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರು ನಿನ್ನೆ ಪೊಲೀಸ್‌‍ ಅಧಿಕಾರಿಗಳ ಮೇಲೆ ಪ್ರದರ್ಶಿಸಿರುವ ರೋಷಾವೇಷ ಬಿಜೆಪಿಯಲ್ಲಿ ಕುದಿಯುತ್ತಿರುವ ಲಾವರಸದ ಸಂಕೇತವಾಗಿದೆ.

ಧಾರವಾಡದ ನರೇಂದ್ರ ಗ್ರಾಮದಲ್ಲಿ ಗಣೇಶೋತ್ಸವದ ವೇಳೆ ಡಿಜೆ ಹಾಡು ಹಾಕುವ ಸಂಬಂಧ ಪಟ್ಟಂತೆ ಎರಡು ಗುಂಪಿನ ಯುವಕರ ನಡುವೆ ಕಳೆದ ವಾರ ಗಲಾಟೆಯಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಅದನ್ನು ಖಂಡಿಸಿ ಪ್ರತಿಭಟನೆಗಳಾಗುತ್ತಿದ್ದವು. ಈ ಸಂಬಂಧಪಟ್ಟಂತಹ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಹ್ಲಾದ ಜೋಷಿ ಎಸ್‌‍ಪಿ, ಡಿವೈಎಸ್‌‍ಪಿ ಅವರ ಅನುಮತಿ ಇಲ್ಲದೇ ಲಾಠಿ ಚಾರ್ಜ್‌ ಮಾಡಿರುವ ಇನ್ಸ್ ಪೆಕ್ಟರ್‌ ಅವರನ್ನುಅಮಾನತು ಗೊಳಿಸಬೇಕೆಂದು ಪಟ್ಟು ಹಿಡಿದರು.

ಸಾರ್ವಜನಿಕವಾಗಿ ಪೊಲೀಸ್‌‍ ಅಧಿಕಾರಿಗಳ ಮೇಲೆ ಕೂಗಾಡಿದರು. ಇನ್ಸ್ ಪೆಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಎಸ್‌‍ಪಿ ಕಚೇರಿಯ ಮುಂದೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಪಟ್ಟಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗಿದೆ. ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್‌‍ ಸರ್ಕಾರ ಹಿಂದೂ ವಿರೋಧಿ ಎಂದು ಬಿಂಬಿಸುವಲ್ಲಿ ಪರಸ್ಪರ ಪೈಪೋಟಿ ನಡೆಸುತ್ತಿದ್ದರೆ, ಅದಕ್ಕೆ ಪ್ರತ್ಯತ್ತರ ಉತ್ತರ ನೀಡಲಾಗದೇ ಕಾಂಗ್ರೆಸ್‌‍ ಸರ್ಕಾರ ಹೈರಾಣಾಗಿದೆ.

ಕಾಂಗ್ರೆಸ್‌‍ನಲ್ಲಿ ಬಣ ರಾಜಕೀಯ ವಿಪರೀತವಾಗಿದ್ದು, ಬಿಜೆಪಿಯ ಆರೋಪಗಳಿಗೆ ಸರಿಯಾದ ಉತ್ತರ ನೀಡಲು ನಿರ್ಲಕ್ಷ್ಯ ಕಂಡುಬರುತ್ತಿದೆ.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿಧಾನಸಭೆಯಲ್ಲೇ ನಮಸ್ತೇ ಸದಾವತ್ಸಲೇ ಹಾಡಿದ್ದರು. ಗೃಹಸಚಿವ ಡಾ.ಜಿ. ಪರಮೇಶ್ವರ್‌ ಎಬಿವಿಪಿಯ ಕಾರ್ಯಕ್ರಮದಲ್ಲಿ ಅಚಾನಕ್‌ ಆಗಿ ಭಾಗವಹಿಸಿದ್ದರು. ಈ ರೀತಿಯ ನಡವಳಿಕೆಗಳು ಕಾಂಗ್ರೆಸ್‌‍ನ ಮತ್ತೊಂದು ಬಣದಲ್ಲಿ ಅಸಹನೆ ಮೂಡಿಸಿವೆ.

ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಪೈಪೋಟಿಗೆ ಬಿದ್ದವರಂತೆ ತಾವು ಕೂಡ ಹಿಂದೂ ಆಗಿದ್ದು, ತಮ್ಮ ಹೆಸರಿನಲ್ಲಿ ಈಶ್ವರ ಮತ್ತು ವಿಷ್ಣುವಿನ ಅನ್ವರ್ಥ ನಾಮಗಳಿವೆ ಎಂದು ಹೇಳುವ ಮೂಲಕ ಬಿಜೆಪಿಯ ಹಿಂದುತ್ವಕ್ಕೆ ಟಾಂಗ್‌ ನೀಡುವ ಪ್ರಯತ್ನ ಮಾಡಿದ್ದಾರೆ.

ಗಣೇಶೋತ್ಸವದಲ್ಲಿ ವರದಿಯಾದ ಸಣ್ಣ-ಪುಟ್ಟ ಹಾಗೂ ಕೆಲವು ಗಂಭೀರ ಸ್ವರೂಪದ ಗಲಾಟೆಗಳನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಹಿಂದೆಂದೂ ಇಲ್ಲದಷ್ಟು ಗದ್ದಲ ಎಬ್ಬಿಸಿದೆ. ಕಾಂಗ್ರೆಸ್‌‍ ಸರ್ಕಾರವನ್ನು ಹಿಂದೂ ವಿರೋಧಿ ಎಂದು ಬಲವಾಗಿ ಪ್ರತಿಪಾದಿಸುತ್ತಿದೆ. ಇದಕ್ಕೆ ಸರಿಯಾದ ಉತ್ತರ ನೀಡಲಾಗದೆ ಕಾಂಗ್ರೆಸ್‌‍ ಪಕ್ಷ ಹೈರಾಣಾಗಿದೆ.

RELATED ARTICLES

Latest News