Monday, September 15, 2025
Homeರಾಜ್ಯಹೂವುಗಳ ಬೆಲೆ ಕುಸಿತ, ಸೇವಂತಿ ಬೆಳೆದು ಕಂಗಾಲಾದ ರೈತರು

ಹೂವುಗಳ ಬೆಲೆ ಕುಸಿತ, ಸೇವಂತಿ ಬೆಳೆದು ಕಂಗಾಲಾದ ರೈತರು

Fall in flower prices, farmers upset

ಚಿಕ್ಕಬಳ್ಳಾಪುರ,ಸೆ.15- ಜಿಲ್ಲೆಯ ವಿವಿಧೆಡೆ ರೈತರು ಸೇವಂತಿ ಹೂವು ಬೆಳೆದಿದ್ದು ಶರನ್ನವರಾತ್ರಿ ಸಮೀಪಿಸುತ್ತಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.ರೈತರು ಇರುವ ಅಷ್ಟೋ ಇಷ್ಟೋ ನೀರಿನಲ್ಲಿ ಹೂವು ಬೆಳೆದು ಬೆಳೆದ ಹೂವಿನ ಕಟಾವಿಗೆ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಣೆ ಮಾಡುವ ವೆಚ್ಚವೂ ವಾಪಸ್‌‍ ಬರುತ್ತಿಲ್ಲ. ಹೀಗಾಗಿ ಒಂದಷ್ಟು ಮಂದಿ ರೈತರು, ತೋಟದಲ್ಲೇ ನಾಶಕ್ಕೆ ಮುಂದಾಗಿದ್ದರೆ ಇನ್ನೊಂದಷ್ಟು ಮುಂದೆ ರೈತರು ಹಾಕಿದ ಬಂಡವಾಳವೂ ಬಾರದೆ ತಲೆಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಕಳೆದ ಒಂದೆರಡು ವಾರಗಳ ಇಲ್ಲಿನ ಕ್ಯಾಂಪಸ್‌‍ ಬಳಿಯ ಮಾರುಕಟ್ಟೆಗೆ ತಂದ ಹೂವನ್ನ ರೈತರು ಹೂವಿನ ಮಾರುಕಟ್ಟೆ ಪ್ರಾಂಗಣದಲ್ಲಿ ಸುರಿದು ತಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಳೆದ 1 ತಿಂಗಳ ಹಿಂದೆ ಅದರಲ್ಲೂ ವರಮಹಾಲಕ್ಷೀ ಹಬ್ಬಕ್ಕೆ ಭಾರೀ ಏರಿಕೆ ಕಂಡಿದ್ದ ಹೂವಿನ ದರ ಈಗ ಪಾತಾಳಕ್ಕೆ ಕುಸಿದಿದೆ. ವರಮಹಾಲಕ್ಷೀ ಹಬ್ಬದಂದು 1 ಕೆಜಿ ಚೆಂಡು ಹೂ 90 ರಿಂದ 120 ರೂಪಾಯಿಗೆ ಮಾರಾಟವಾಗಿತ್ತು ಆದ್ರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. 1 ಕೆಜಿ ಚೆಂಡು ಹೂ 1 ರೂಪಾಯಿ, 2 ರೂಪಾಯಿ. ಹೀಗಾಗಿ ರೈತರು ಮಾರಾಟಕ್ಕೆ ತಂದಿದ್ದ ಹೂವನ್ನ ಮಾರುಕಟ್ಟೆಯಲ್ಲೆ ಎಲ್ಲಂದರಲ್ಲಿ ಬಿಸಾಡಿ ಹೋಗುತ್ತಿದ್ದಾರೆ.

ಚೆಂಡು ಹೂ ಕೇಳೋರಿಲ್ಲ. ಇನ್ನೂ ವರಮಹಾಲಕ್ಷೀ ಮತ್ತು ಗೌರಿಗಣೇಶ ಹಬ್ಬದ ಸಮಯದಲ್ಲಿ ಸೇವಂತಿಗೆ ಹೂ 300 ರಿಂದ 600 ರೂಪಾಯಿಗೂ ಮಾರಾಟವಾಗಿದೆ. ಆದರೆ ಈಗ 5 ರೂಪಾಯಿ, 10 ರೂಪಾಯಿಗೆ ಬೆಲೆ ಇಳಿದಿದೆ. ಇನ್ನೂ ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನು ಖರೀದಿ ಮಾಡುವವರೇ ಇಲ್ಲ. ಹೀಗಾಗಿ ಸೇವಂತಿಗೆ ಹೂಗಳನ್ನು ಸಹ ರೈತರು ಎಲ್ಲಂದರಲ್ಲಿ ಬಿಸಾಡಿ ಹೋಗುವಂತಾಗಿದೆ. ಮತ್ತೊಂದೆಡೆ 150 ರೂಪಾಯಿಯಿಂದ 250 ರೂಪಾಯಿಗೆ ಮಾರಾಟವಾಗುತ್ತಿದ್ದ ಗುಲಾಬಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು 10 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ.

ಹೂವು ಕಟಾವಿಗೆ ದಿನಕ್ಕೆ ಒಬ್ಬರಿಗೆ 450 ರೂ. ಕೂಲಿ ಕೊಡಬೇಕಾಗುತ್ತದೆ. ಜೊತೆಗೆ ಸಾಗಣೆ ವೆಚ್ಚ, ಕಮಿಷನ್‌ ಭರಿಸಬೇಕಾಗುತ್ತದೆ. ಈಗ ಒಂದು ಬ್ಯಾಗ್‌ ಹೂ (45 ಕೆ.ಜಿ) ಮಾರಾಟ ಮಾಡಿದರೆ ಕೇವಲ 450 ರೂ. ಸಿಗುತ್ತದೆ. ನಮಗೆ ಏನೂ ಉಳಿಯುವುದಿಲ್ಲ. ಹೀಗಾಗಿ, ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದೇನೆ. ಮುಂದೆ ಲಾಭ ಸಿಗಬಹುದೆಂದು ಹಾಗೆಯೇ ಬಿಟ್ಟರೆ ನಿರ್ವಹಣೆಗೆ ಮತ್ತಷ್ಟು ವೆಚ್ಚ ಮಾಡಬೇಕಾಗುತ್ತದೆ. ಸ್ವಲ್ಪ ದಿನ ನೋಡಿ ಟ್ರ್ಯ್ಟಾಕ್ಟರ್‌ ಹತ್ತಿಸಿ ನಾಶ ಮಾಡಲಾಗುವುದೆಂದು ಹೊಸ ಹುಡ್ಯದ ರೈತರೊಬ್ಬರು ತಮ ಅಳಲು ತೋಡಿಕೊಂಡಿದ್ದಾರೆ.

ಬೆಂಗಳೂರಿನ ಮಾರುಕಟ್ಟೆಗೆ ವಿವಿಧೆಡೆಯಿಂದ ವಿಪರೀತ ಹೂವುಗಳು ಬರುತ್ತಿವೆ. ಹೀಗಾಗಿ, ಅಲ್ಲೂ ಬೇಡಿಕೆ ಇಲ್ಲವಾಗಿದೆ. ಇನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಹೆಚ್ಚು ಹೂವು ಬೆಳೆದಿದ್ದು, ಅಲ್ಲಿನ ವರ್ತಕರಿಂದಲೂ ಬೇಡಿಕೆ ಇಲ್ಲವಾಗಿದೆ. ಪಿತೃ ಪಕ್ಷ ಕಾರಣ ಈಗ ಕಾರ್ಯಕ್ರಮಗಳು ಕಡಿಮೆ. ಹೀಗಾಗಿ, ಹೂವಿಗೆ ಬೇಡಿಕೆ ಕುಸಿದಿದೆ ಎಂದು ಕುರ್ಲಹಳ್ಳಿ ಗ್ರಾಮದ ನಾರಾಯಣಸೂರಿ ಹೇಳಿದ್ದಾರೆ.

ಇನ್ನು ರೈತರು ಬೆಳೆದ ಬೆಳೆಗಳ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತನತ್ತ ತೋಟಗಾರಿಕೆ ಇಲಾಖೆ ಸೇರಿದಂತೆ ಯಾರೂ ಸ್ಪಂದಿಸುತ್ತಿಲ್ಲವೆಂದು ಹೂವು ಬೆಳೆಗಾರರು ದೂರುತ್ತಿದ್ದಾರೆ. ಕೂಡಲೇ ಸರ್ಕಾರ ಹೂವು ಬೆಳೆಗಾರರ ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ. ಮುಂದೆ ಮಹಾಲಯ ಅಮಾವಾಸ್ಯೆ, ದಸರಾ ಆಯಧಪೂಜೆ, ದೀಪಾವಳಿ ಸೇರಿದಂತೆ ಸಾಲುಸಾಲು ಹಬ್ಬ ಬರಲಿದ್ದು, ಆಗ ದರದಲ್ಲಿ ಏರಿಕೆ ಕಾಣುವ ಆಶಾವಾದದಲ್ಲಿ ಇದ್ದಾರೆ.

ಇವೆಲ್ಲದರ ಹಿನ್ನಲೆಯಲ್ಲಿ ಹೂವು ಮಾರಾಟ ಮಾಡಲು ಮಾರುಕಟ್ಟೆಗೆ ಹೂ ತಂದ ರೈತರು ಹೂವಿನ ಬೆಲೆ ಕುಸಿತದಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೂ ಬಿಸಾಡಿ ಬರಿಗೈಯಲ್ಲೇ ಮನೆಗೆ ಹೋಗುವಂತ ಪರಿಸ್ಥಿತಿ ನಿರ್ಮಾಣ ಆಗಿದೆ.

ಬಯಲುಸೀಮೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರದ ಈ ಭಾಗದಲ್ಲಿ ಯಾವುದೇ ನದಿ ನಾಲಾಗಳಿಲ್ಲದ ಜಿಲ್ಲೆ ನಮದು. ನೀರಿಗಾಗಿ ಹೆಂಡತಿ ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಿ, ಸಾಲ ಸೋಲ ಮಾಡಿ ಬೋರ್‌ ವೆಲ್‌ ಹಾಕಿಸಿ, ಸಮೃದ್ಧ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲ. 40 ಕೆಜಿ ಹೂವಿನ ಬ್ಯಾಗ್‌ ಮಾರಿದರೂ ರೂ 200 ರಿಂದ 400 ಬರುತ್ತದೆ. ಹೂ ಕೀಳುವ ಕೂಲಿ ಸಹಾ ಬರುವುದಿಲ್ಲ. ಈಗಲಾದರೂ ಸರ್ಕಾರ ನಮ ನೆರವಿಗೆ ಬರಬೇಕಿದೆ ಪುರದಗಡ್ಡೆ ಮಹಿಳೆ ಗಾಯತ್ರಿಅಂಬರೀಶ್‌ ಆಗ್ರಹಿಸಿದರು. ಒಂದು ಕಡೆ ಮಳೆ ಬಂದರೂ ಕಷ್ಟ, ಮಳೆ ಬರದಿದ್ದರೂ ಕಷ್ಟ ಎನ್ನುವ ಹಾಗೆ ರೈತರಿಗೆ ನಷ್ಟ ಎಂಬಂತಾಗಿದೆ.

RELATED ARTICLES

Latest News