ಬೆಂಗಳೂರು,ಸೆ.15-ಬೆಳ್ಳಂಬೆಳಗ್ಗೆಯೇ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಇಂದು ಬೆಳಗಿನ ಜಾವ 5.10ರ ಸುಮಾರಿನಲ್ಲಿ ಮೆಜೆಸ್ಟಿಕ್‌ನಿಂದ ಕಾಡುಗೋಡಿಗೆ ಹೋಗುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.ಈ ಬಸ್ ನಗರದ ಹೆಚ್‌ಎಎಲ್ ಮುಖ್ಯದ್ವಾರದ ಬಳಿ ಬರುತ್ತಿದ್ದಂತೆ ಬಸ್ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ಬಸ್‌ನ್ನು ರಸ್ತೆ ಬದಿ ನಿಲ್ಲಿಸಿದ್ದು, ನಿರ್ವಾಹಕರು ಪ್ರಯಾಣಿಕರನ್ನು ಕೆಳಗೆ ಇಳಿಸುವ ಮೂಲಕ ಭಾರೀ ದುರಂತವನ್ನು ತಪ್ಪಿಸಿದ್ದಾರೆ.
ನೋಡ ನೋಡುತ್ತಿದ್ದಂತೆ ಬೆಂಕಿ ಆವರಿಸಿಕೊಂಡು ಈ ಬಸ್ ಪೂರ್ತಿ ಹೊತ್ತಿ ಉರಿದಿದ್ದು, ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಬಸ್ ಸುಟ್ಟು ಕರಕಲಾಗಿದೆ.
ಈ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಅಧಿಕಾರಿಗಳು, ಬೆಂಕಿ ಕಾಣಿಸಿಕೊಳ್ಳಲು ಕಾರಣವೇನೆಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.