ಬೆಂಗಳೂರು, ಸೆ.15-ಜುಲೈ, ಆಗಸ್ಟ್ ತಿಂಗಳಲ್ಲಿ ಉತ್ತಮವಾಗಿದ್ದ ನೈಋತ್ಯ ಮುಂಗಾರು ಮಳೆ ಸೆಪ್ಟೆಂಬರ್‌ನಲ್ಲಿ ದುರ್ಬಲಗೊಂಡ ಪರಿಣಾಮ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ಕಳೆದ ಎರಡು ವಾರಗಳಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.23ರಷ್ಟು ಮಳೆ ಕೊರತೆ ಕಂಡುಬಂದಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಒಟ್ಟಾರೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸೆಪ್ಟೆಂಬರ್ ಒಂದರಿಂದ ನಿನ್ನೆಯವರೆಗೆ ರಾಜ್ಯದ ವಾಡಿಕೆ ಮಳೆ ಪ್ರಮಾಣ 65 ಮಿ.ಮೀ.ನಷ್ಟಿದ್ದು, 50 ಮಿ.ಮೀ.ನಷ್ಟು ಮಳೆಯಾಗಿದೆ. ಒಟ್ಟಾರೆ ಶೇ.23ರಷ್ಟು ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ.
ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಶೇ.41ರಷ್ಟು, ಮಲೆನಾಡು,ಉತ್ತರ ಒಳನಾಡಿನಲ್ಲಿ ಶೇ.15ರಷ್ಟು, ಕರಾವಳಿ ಭಾಗದಲ್ಲಿ ಶೇ.24ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಕೆಲವೆಡೆ ಮುಂಗಾರು ಹಂಗಾಮಿನ ಬೆಳೆಗಳಿಗೆ ತೇವಾಂಶದ ಕೊರತೆ ಕಂಡುಬಂದಿದೆ. ಒಳನಾಡಿನ ಬಹುತೇಕ ಸಣ್ಣ-ಪುಟ್ಟ ಕರೆ, ಕಟ್ಟೆಗಳಿಗೆ ಸಾಕಷ್ಟು ನೀರು ಬಂದಿಲ್ಲ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಒಂದು ವಾರದಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ವಾಡಿಕೆಗಿಂತ ತೀವ್ರ ಕೊರತೆ ಕಂಡುಬಂದಿದೆ. ಅದರಲ್ಲೂ ಬೆಂಗಳೂರು ಹೊರತುಪಡಿಸಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದ ಮಳೆ ಅಭಾವ ಕಂಡುಬಂದಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.33ರಷ್ಟು ಮಳೆ ಕಡಿಮೆಯಾಗಿದೆ.
ಆದರೆ. ಜೂನ ಒಂದರಿಂದ ಸೆ.14ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ ವಾಡಿಕೆ ಪ್ರಮಾಣದ ಮಳೆಯಾಗಿದೆ. ಈ ಅವಧಿಯಲ್ಲಿ ರಾಜ್ಯದ ವಾಡಿಕೆಯ ಮಳೆ ಪ್ರಮಾಣ 756 ಮಿ.ಮೀ. ಆಗಿದ್ದು. 775 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ.3ರಷ್ಟು ವಾಡಿಕೆಗಿಂತ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಮಾತ್ರ ವಾಡಿಕೆಗಿಂತ ಶೇ.7ರಷ್ಟು ಕಡಿಮೆಯಾಗಿದೆ.
ಕಳೆದ ಮೂರುವರೆ ತಿಂಗಳಲ್ಲಿ ಪ್ರಮುಖ ನದಿಗಳ ಜಲಾನಯನ ಭಾಗದಲ್ಲಿ ಒಳ್ಳೆಯ ಮಳೆಯಾದ ಹಿನ್ನೆಲೆಯಲ್ಲಿ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಮುಂಗಾರಿನ ಅಂತಿಮ ಅವಧಿಯಲ್ಲಿದ್ದೂ, ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗದಿದ್ದರೆ, ಅಂರ್ತಜಲದ ಪ್ರಮಾಣ ತೀವ್ರ ಕುಸಿತವಾಗಲಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ.
ಜನವರಿ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ 1063 ಮಿ.ಮೀ.ನಷ್ಟು ಮಳೆಯಾಗಿದ್ದು, ವಾಡಿಕೆಗಿಂತ ಶೇ.21ರಷ್ಟು ಹೆಚ್ಚು ಮಳೆಯಾಗಿದೆ. ಸದ್ಯಕ್ಕೆ ಹವಾಮಾನ ಮುನ್ಸೂಚನೆ ಪ್ರಕಾರ ಚದುರಿದಂತೆ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಆದರೆ, ಭಾರಿ ಮಳೆಯಾಗುವ ಸಾಧ್ಯತೆಗಳಿಲ್ಲ.