ಬೆಂಗಳೂರು : ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧು ಎಂದು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ನಾಲ್ಕು ವಾರದೊಳಗೆ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ. ಅರ್ಜಿದಾರರ ಕೋರಿಕೆಯಂತೆ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ತಾನೇ ನೀಡಿದ್ದ ತೀರ್ಪಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡಿದೆ.
ಅಭ್ಯರ್ಥಿಗಳು ಪಡೆದಿದ್ದ ಮತಗಳ ವಿವರ
ಕೆ.ವೈ, ನಂಜೇಗೌಡ ( ಕಾಂಗ್ರೆಸ್)- 50,955
ಮಂಜುನಾಥ್ ಗೌಡ( ಬಿಜೆಪಿ)- 50707
ಹೂಡಿ ವಿಜಯ್ ಕುಮಾರ್( ಪಕ್ಷೇತರ)- 49362
ಜಿ,ಇ ರಾಮೇಗೌಡ( ಜೆಡಿಎಸ್)- 17.627
ಗೆಲುವಿನ ಅಂತರ 248
ಹೈಕೋರ್ಟ್ ಆದೇಶವನ್ನು ಪ್ರಶ್ನೆಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿಲು ಅವಕಾಶ ನೀಡಬೇಕು. ಹೀಗಾಗಿ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ನಂಜೇಗೌಡ ಪರ ವಕೀಲರಾದ ನಳೀನ ಮಾಯಾಗೌಡ ಅವರು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು. ಇದನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.
ಕೆವೈ ನಂಜೇಗೌಡ ಆಯ್ಕೆ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಕೆಎಸ್ ಮಂಜುನಾಥಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮತಎಣಿಕೆಯಲ್ಲಿ ಲೋಪವಾಗಿದ್ದು, ಮತ್ತೊಮ್ಮೆ ಮರು ಮತಎಣಿಕೆಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು.ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್,ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್ ದೇವದಾಸ್ ಅವರು, ಮಂಗಳವಾರ ತೀರ್ಪು ಪ್ರಕಟಿಸಿದರು.
ಹೊಸದಾಗಿ ಮರು ಮತಎಣಿಕೆ ನಡೆಸಲು ಹೈಕೋರ್ಟ್ ಆದೇಶ ನೀಡಿದ್ದು, ನಾಲ್ಕು ವಾರದಲ್ಲಿ ಮರು ಮತ ಎಣಿಕೆ ಮಾಡುವಂತೆ ಸೂಚಿಸಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ. ಹೀಗಾಗಿ .ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ನಂಜೇಗೌಡ ಅವರ ಮತ ಎಣಿಕೆ ಕಾನೂನು ಪ್ರಕರವಾಗಿ ನಡೆದಿಲ್ಲ ಎಂದು ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಅವರು ಕಾನೂನು ಹೋರಾಟ ನಡೆಸಿದ್ದರು.
ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಪ್ರತಿವಾದಿಗಳಿಗೆ ಹ್ಯಾಂಡ್ ಸಮನ್ಸ್ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿಸಿತ್ತು.
ಬೆಂಗಳೂರು: `ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ವೇಳೆ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಚಿತ್ರೀಕರಣದ ದೃಶ್ಯಾವಳಿಯನ್ನು ಕೋರ್ಟ್‍ಗೆ ಸಲ್ಲಿಸಿ’ ಎಂದು ಹೈಕೋರ್ಟ್, ಕೋಲಾರ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು.
ವಿಚಾರಣೆ ವೇಳೆ ಕೇಂದ್ರ ಚುನಾವಣಾ ಆಯೋಗದ ಪರವಾಗಿ ವಕೀಲ ಶರತ್ ಆರ್.ದೊಡವಾಡ ಅವರು ಹಾಜರಾಗಿ, `ಮತ ಎಣಿಕೆ ವೇಳೆ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಕಾರ್ಯದ ಚಿತ್ರೀಕರಣ ಮಾಡಲಾಗಿತ್ತು. ಆ ದೃಶ್ಯಾವಳಿಯನ್ನು ಒಳಗೊಂಡ ಒಂದು ಸಿ.ಡಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದರು.
`ನ್ಯಾಯಾಲಯದ ಅನುಮತಿ ಮೇರೆಗೆ ಇವಿಎಂ ಇರಿಸಲಾಗಿದ್ದ ಸ್ಟ್ರಾಂಗ್ ರೂಂ ಅನ್ನು ತೆರೆದು ಪರಿಶೀಲಿಸಲಾಗಿದೆ. ಅಲ್ಲಿ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಮತ್ತು ಇವಿಎಂ ಯಂತ್ರ ಹೊಂದಾಣಿಕೆ ಕಾರ್ಯದ ಚಿತ್ರೀಕರಣ ನಡೆಸಿದ ದೃಶ್ಯಾವಳಿಗಳನ್ನು ಒಳಗೊಂಡ ಮೂರು ಸಿ.ಡಿಗಳು ಲಭ್ಯವಾಗಿವೆ. ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರಂ ನಂ.17(ಸಿ) ನಕಲು ಪ್ರತಿಯೂ ಲಭ್ಯವಾಗಿದೆ. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇನ್ನಷ್ಟು ಸಮಯ ನೀಡಬೇಕು’ ಎಂದು ಕೋರಿದ್ದರು.
ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲರು, ಅರ್ಜಿಯಲ್ಲಿ ಶಾಸಕ ಕೆ ವೈ ನಂಜೇಗೌಡ ಮತ್ತು ಚುನಾವಣೆಗೆ ಸ್ಪರ್ಧಿಸಿದ್ದ ಇತರೆ 13 ಮಂದಿ ಪ್ರತಿವಾದಿಗಳಿದ್ದಾರೆ. ಆ ಪೈಕಿ ಅನೇಕ ಪ್ರತಿವಾದಿಗಳಿಗೆ ಅರ್ಜಿ ಸಂಬಂಧ ಈ ಹಿಂದೆ ಹೈಕೋರ್ಟ್ ಜಾರಿ ಮಾಡಿದ್ದ ನೋಟಿಸ್/ಸಮನ್ಸ್ ತಲುಪಿಲ್ಲ. ಅದರಂತೆ ಪ್ರತಿವಾದಿಗಳಿಗೆ ನೋಟಿಸ್/ಹ್ಯಾಂಡ್ ಸಮನ್ಸ್ ಜಾರಿ ನೀಡಲು ಅನುಮತಿಸಬೇಕು ಎಂದು ಮನವಿ ಮಾಡಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಕೆ ವೈ ನಂಜೇಗೌಡ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಮಂದಿ ಸ್ಪರ್ಧಿಗಳ ಏಜೆಂಟ್‍ಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಒಂದೇ ಕೊಠಡಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಬೇಕಿದ್ದು, ಎರಡು ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ಮಾಡಲಾಗಿದೆ. ಆ ಮೂಲಕ ಜನಪ್ರತಿನಿಧಿಗಳ ಕಾಯಿದೆಯ ನಿಯಮಗಳು ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ನಂಜೇಗೌಡ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮ ರದ್ದುಪಡಿಸಬೇಕು. ಮತಗಳ ಮರು ಎಣಿಕೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅಗತ್ಯ ದಾಖಲಾತಿ ನೀಡುವಂತೆ ಕೇಳಿತ್ತು. ಜಿಲ್ಲಾಧಿಕಾರಿಗಳು ಸ್ಟ್ರಾಂಗ್ ರೂಮ್‍ನಲ್ಲಿದ್ದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಕಳೆದ 2 ವರ್ಷದಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು.