ಬೆಂಗಳೂರು, ಸೆ.16- ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕುರುಬ ಸಮುದಾಯದ ಪರಿಶಿಷ್ಟ ಪಂಗಡ ಮೀಸಲು ಪಟ್ಟಿಗೆ ಸೇರ್ಪಡೆ ಕುರಿತ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಇದೇ ವಿಚಾರ ಚರ್ಚೆಗೆ ಬಂದಾಗ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಯಾವುದೇ ಬೆಂಬಲ ನೀಡದೇ ನಿರಾಸಕ್ತರಾಗಿದ್ದರು. ಆಗ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಮೀಸಲು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಈಶ್ವರಪ್ಪ ಸಂಪುಟದಿಂದ ನಿರ್ಗಮಿಸಿದ ಬಳಿಕ ವಿಷಯ ತಣ್ಣಗಾಗಿತ್ತು.
ಈಗ ಮತ್ತೇ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಸಾಮಾಜಿಕ ವಲಯದಲ್ಲಿ ಕೇಳಿ ಬಂದಿರುವ ಬೇಡಿಕೆಗಳಿಗೆ ಪುಷ್ಠಿ ನೀಡುವಂತೆ ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಚರ್ಚೆ ನಿಗದಿಯಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿಂದು ಬೆಂಗಳೂರಿನ ಬಹುಮಹಡಿಗಳ ಕಟ್ಟಡದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಲು ಪರಿಶಿಷ್ಟ ಪಂಗಡಗಳ ಇಲಾಖೆಯ ನಿರ್ದೇಶಕರಿಗೆ, ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು, ಸಂಶೋಧನಾ ಸಂಸ್ಥೆ ನಿರ್ದೇಶಕರಿಗೆ, ಸಮಾಜ ಕಲ್ಯಾಣ ಇಲಾಖೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ನೋಡಲ್ ಏಜನ್ಸಿಯ ಸಲಹೆಗಾರರನ್ನು ಸಭೆಗೆ ಆಹ್ವಾನಿಸಲಾಗಿತ್ತು.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ಹಾಗೂ ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗೊಂಡಾ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ಹಾಗೂ ದಾಖಲಾತಿಗಳೊಂದಿಗೆ ಸಭೆಗೆ ಹಾಜರಾಗಲು ಸೂಚಿಸಲಾಗಿತ್ತು.ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಜನಗಣತಿ ನಡೆಯುತ್ತಿರುವ ಹೊತ್ತಿನಲ್ಲೇ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಲು ತಯಾರಿಯಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಎಸ್‌ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಹೋರಾಟ ನಡೆಸಿದಾಗ ಪರ-ವಿರೋಧ ಚರ್ಚೆಗಳಾಗಿದ್ದವು. ಹಿಂದುಳಿದ ವರ್ಗಗಳಲ್ಲಿ ಪ್ರಬಲ ಜಾತಿಯಾಗಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಿದರೆ, ಅಲ್ಲಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ನಿಜವಾದ ಸಂತ್ರಸ್ತರು ತೊಂದರೆಗೊಳಗಾಗುತ್ತಾರೆ ಎಂಬ ಆತಂಕಗಳು ಕೇಳಿ ಬಂದವು.
ಈಶ್ವರಪ್ಪ ಸಚಿವರಾಗುವವರೆಗೂ ಎಸ್‌ಟಿ ಮೀಸಲಿನ ಚರ್ಚೆ ತೀವ್ರ ಸ್ವರೂಪದಲ್ಲಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರವೇ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡಿರುವುದರಿಂದ ಮತ್ತೇ ಹೋರಾಟಗಳು ಭುಗಿಲೇಳುವ ಸಾಧ್ಯತೆಗಳಿವೆ. ಕುರುಬ ಸಮುದಾಯದಲ್ಲಿ ಸಾಕಷ್ಟು ಸಂಖ್ಯೆಯ ಬಡವರಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ದೊರೆಯಬೇಕಾದರೆ, ಎಸ್‌ಟಿ ಮೀಸಲು ಪಟ್ಟಿಗೆ ಸೇರಿಸುವುದು ಅತ್ಯಗತ್ಯವೆಂಬ ವಾದಗಳಿವೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಕಾಲಘಟ್ಟದಲ್ಲಿ ಈ ಚರ್ಚೆ ಆರಂಭವಾಗಿರುವುದು ಮತ್ತಷ್ಟೂ ಕುತೂಹಲ ಕೆರಳಿಸಿದೆ. ಈ ಹಿಂದೆಲ್ಲಾ ಕುರುಬರ ಎಸ್‌ಟಿ ಮೀಸಲಾತಿಗೆ ವಿಷಯವಾಗಿ ಹೆಚ್ಚು ತಲೆ ಕೆಡಸಿಕೊಳ್ಳದ ಸಿದ್ದರಾಮಯ್ಯ ಈಗ ಏಕಾಏಕಿ ಚರ್ಚೆಯನ್ನು ಮುನ್ನೆಲೆಗೆ ತಂದಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಪಕ್ಷದಲ್ಲಿ ಬಹಳಷ್ಟು ಮಂದಿ ಕುರುಬ ಸಮುದಾಯದ ಶಾಸಕರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಬಹಿರಂಗವಾಗಿ ಹೇಳಲಾರಂಭಿಸಿದ್ದಾರೆ. ಇದಕ್ಕಾಗಿ ಜನಾಂಗದ ಬೆಂಬಲ ಪಡೆಯಲು ಸಿದ್ದರಾಮಯ್ಯ ಅವರು ಎಸ್‌ಟಿ ಮೀಸಲು ಪಟ್ಟಿ ಎಂಬ ಅಸ್ತ್ರ ಹೂಡಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಮೈಸೂರಿನಲ್ಲಿಂದು ಆರೋಪಿಸಿದ್ದಾರೆ.
ಈ ಮೊದಲು ಬಸವರಾಜ ಬೊಮಾಯಿ ಸರ್ಕಾರದಲ್ಲಿ ನಾನು ಸೇರಿದಂತೆ ಅನೇಕರು ಕುರುಬ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿದಾಗ ಸಿದ್ದರಾಮಯ್ಯ ಬೆಂಬಲ ನೀಡಲಿಲ್ಲ. ಈಗ ತಮ ಸ್ಥಾನಕ್ಕೆ ಕುತ್ತು ಬಂದಿರುವುದಕ್ಕಾಗಿ ಎಲ್ಲರನ್ನೂ ಕರೆಯುತ್ತಿದ್ದು, ಬೆಂಬಲ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ತಮ ಸ್ಥಾನ ಉಳಿಸಿಕೊಳ್ಳಲಿಕ್ಕಾಗಿಯೇ ಎಸ್‌ಟಿ ಮೀಸಲಾತಿಯೆಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಚರ್ಚೆಗಳು ಏನೇ ಇದ್ದರೂ ಕೆಲವು ದಿನಗಳ ಕಾಲ ಶೈತ್ಯಾವಸ್ಥೆಯಲ್ಲಿದ್ದ ಬೇಡಿಕೆ ಮತ್ತೇ ಮುನ್ನೆಲೆಗೆ ಬಂದಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.ಸಂಪುಟದಲ್ಲಿ ಎಸ್‌ಟಿ ಸಮುದಾಯದಿಂದ ಸಚಿವರಾಗಿದ್ದ ಬಿ. ನಾಗೇಂದ್ರ, ವಾಲಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರು.
ಕೆ.ಎನ್.ರಾಜಣ್ಣ ಮತಗಳ್ಳತನ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್‌ಗಾಂಧಿ ಅವರ ಅಭಿಪ್ರಾಯಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡರು. ಉಳಿದಂತೆ ಸತೀಶ್ ಜಾರಕಿಹೊಳಿ ಮಾತ್ರ ಪರಿಶಿಷ್ಟ ಪಂಗಡದ ಸಚಿವರಾಗಿ ಸಂಪುಟದಲ್ಲಿ ಮುಂದುವರೆದಿದ್ದಾರೆ. ಈ ಹಂತದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಟ್ಟದ ಚರ್ಚೆಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿವೆ.