ಬೆಂಗಳೂರು,ಸೆ.16- ಹಿಂದೂ ಸಮುದಾಯದ ಕೆಲವು ಉಪಪಂಗಡಗಳನ್ನು ಕ್ರಿಶ್ಚಿಯನ್ ಸಮುದಾಯದ ಜೊತೆ ಸೇರ್ಪಡೆ ಮಾಡಲು ಅನುಮತಿ ನೀಡಿರುವ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಿದೆ.
ಮೈಸೂರು-ಕೊಡುಗು ಸಂಸದ ಯದುವೀರ್ ಒಡೆಯರ್ ಹಾಗೂ ಶಾಸಕ ಸುನೀಲ್‌ಕುಮಾರ್ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರಕ್ಕೆ ಸರಿಯಾದ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಿದ್ದಾರೆ. ಇದೇ ತಿಂಗಳ 22ರಿಂದ ಆರಂಭವಾಗಲಿರುವ ಜಾತಿ ಜನಗಣತಿ ವೇಳೆ ಹಿಂದೂ ಸಮುದಾಯದ ಸುಮಾರು 47 ಉಪಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಜೊತೆ ಸೇರಿಸಲು ಅವಕಾಶ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಪ್ರತಿಪಕ್ಷ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಇದು ಹಿಂದೂ ಧರ್ಮದವರನ್ನು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡುವ ಹುನ್ನಾರ ಎಂದು ಆರೋಪಿಸಿದೆ. ಹೀಗಾಗಿ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕೆಂಬುದು ದೂರಿನಲ್ಲಿ ಮನವಿ ಮಾಡಲಾಗುತ್ತದೆ. ಒಟ್ಟು 47 ಉಪಜಾತಿಗಳನ್ನು ಕ್ರಿಶ್ಚಿಯನ್ ಸಮುದಾಯದ ಜೊತೆ ಸೇರ್ಪಡೆಗೆ ಅವಕಾಶ ಕಲ್ಪಿಸಿರುವುದು ಪ್ರತಿಪಕ್ಷದ ಕಣ್ಣು ಕೆಂಪಾಗುವಂತೆ ಮಾಡಿದೆ.