Tuesday, September 16, 2025
Homeಬೆಂಗಳೂರುಮಕ್ಕಳಿಗೆ ಜೀವನ ಮೌಲ್ಯದ ಜೊತೆಗೆ ಸಂಪ್ರದಾಯ ಕಲಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ: ಜಯೇಂದ್ರ ಪುರಿ ಮಹಾಸ್ವಾಮೀಜಿ

ಮಕ್ಕಳಿಗೆ ಜೀವನ ಮೌಲ್ಯದ ಜೊತೆಗೆ ಸಂಪ್ರದಾಯ ಕಲಿಸುವ ಜವಾಬ್ದಾರಿಯೂ ಶಿಕ್ಷಕರದ್ದೇ: ಜಯೇಂದ್ರ ಪುರಿ ಮಹಾಸ್ವಾಮೀಜಿ

ಬೆಂಗಳೂರು: ಜ್ಞಾನ ದೀವಿಗೆಯಾಗಿರುವ ಶಿಕ್ಷಕರು, ಮೌಲ್ಯವನ್ನು ಮಕ್ಕಳಲ್ಲಿ ತುಂಬುವುದರ ಜೊತೆಗೆ ಹೊಸ ತಲೆಮಾರುಗಳಿಗೆ ನಮ್ಮ ಸಂಸ್ಕೃತಿಯನ್ನು ಪಸರಿಸುವ ಜವಾಬ್ದಾರಿ ಹೊಂದಿರುತ್ತಾರೆ ಎಂದು ಕೈಲಾಸ ಮಠದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಹೇಳಿದರು. ಸ್ಪರ್ಶ್‌ ಆಸ್ಪತ್ರೆ ವತಿಯಿಂದ ಮಂಗಳವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಆಯ್ದ ಶಿಕ್ಷಕರಿಗೆ ಗೌರವ ಸಲ್ಲಿಸಿ ಮಾತನಾಡಿದರು.

ಮಕ್ಕಳಲ್ಲಿ ಆದರ್ಶ ಹಾಗೂ ಮೌಲ್ಯ ತುಂಬುವವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದರು. ಇಂದು ಶಿಕ್ಷಣದ ಮೌಲ್ಯಗಳ ಜೊತೆಗೆ, ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವತ್ತಲೂ ಶಿಕ್ಷಕರು ಮಕ್ಕಳಿಗೆ ಶಾಲೆಗಳಿಂದಲೇ ಅರಿವು ಮೂಡಿಸಬೇಕು.ಇದರಿಂದ ಮಾತ್ರ ಮಕ್ಕಳು ಉತ್ತಮ ಆಹಾರ ಸೇವನೆಯತ್ತ ಗಮನ ನೀಡುತ್ತಾರೆ ಎಂದರು. ಆರ್‌.ಆರ್‌.ನಗರ ಸ್ಪರ್ಶ್‌ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರದ ಹಿರಿಯ ಸಮಾಲೋಚಕಿ ಡಾ.ಚಂದ್ರಿಕಾ ಆನಂದ್‌ ಮಾತನಾಡಿ, ಶಿಕ್ಷಣವು ಕೇವಲ ಮಕ್ಕಳ ಶೈಕ್ಷಣಿಕ ಪಯಣ ಮಾತ್ರವಲ್ಲ ಜೀವನದ ಪಾಠವನ್ನು ಕಲಿಸಿಕೊಡುತ್ತದೆ. ಈ ಪಾಠ ಅವರ ಜೀವನದುದ್ದಕ್ಕೂ ಜೊತೆಯಾಗಿರುತ್ತದೆ.

ಮಕ್ಕಳ ಮುಗ್ಧ ಮನಸ್ಸುಗಳನ್ನು ಮೌಲ್ಯಯುತವಾಗಿ ರೂಪಿಸುವುದರ ಜೊತೆಗೆ ಅವರಲ್ಲಿ ಸಾಮಾಜಿಕ ಮೌಲ್ಯಗಳನ್ನೂ ತುಂಬುವ ಶಿಕ್ಷಕರನ್ನು ಗೌರವಿಸುವುದರಲ್ಲಿ ನಮ್ಮ ನಂಬಿಕೆಯ ಪ್ರತೀಕವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಸ್ಪರ್ಶ್‌ ಆಸ್ಪತ್ರೆಯು ಸಮುದಾಯ ಮತ್ತು ಸಮಾಜದೊಂದಿಗೆ ಹೊಂದಿರುವ ಆಳವಾದ ಸಂಪರ್ಕ ಮತ್ತು ಕಾಳಜಿಯ ದ್ಯೋತಕವಾಗಿದೆ. ವಿಶ್ವ ದರ್ಜೆಯ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ, ತಾಯಿ ಮತ್ತು ಮಕ್ಕಳ ಚಿಕಿತ್ಸೆ ಹಾಗೂ ಇತರೇ ವಿಶೇಷ ವೈದ್ಯಕೀಯ ಸೌಕರ್ಯಗಳನ್ನು ವೈದ್ಯಕೀಯ ಶಿಬಿರಗಳ ರೂಪದಲ್ಲೂ ಸ್ಪರ್ಶ್‌ ಆಸ್ಪತ್ರೆ ಆಯೋಜಿಸುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಅಪರಿಮಿತ ಅವಕಾಶಗಳ ಮೂಲಕ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ಗೌರವಿಸಲು ಹೆಮ್ಮೆಯೆನಿಸುತ್ತಿದೆ. ಈ ಮೂಲಕ ಶಿಕ್ಷಣ ಮತ್ತು ಆರೋಗ್ಯ ಆರೈಕೆ ಆಧುನಿಕ ಸಮಾಜದ ತಳಹದಿಯಾಗಿದೆ ಎಂಬುದನ್ನು ನೆನಪಿಸುತ್ತದೆ ಎಂದು ಆರ್‌.ಆರ್‌.ನಗರ ಸ್ಪರ್ಶ್‌ ಆಸ್ಪತ್ರೆ ವೃದ್ಧರ ಚಿಕಿತ್ಸಾ ವಿಭಾಗದ ಹಿರಿಯ ಸಮಾಲೋಚಕಿ, ಡಾ.ನಿಶ್ಮಿತಾ ಆರ್‌ ಅಭಿಪ್ರಾಯಪಟ್ಟರು.

ಸ್ಪರ್ಶ್‌ ಆಸ್ಪತ್ರೆ ಆರ್‌.ಆರ್‌.ನಗರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರ್ನಲ್‌ ರಾಹುಲ್‌ ತಿವಾರಿ ಮಾತನಾಡಿ ಸವಾಲುಗಳ ನಡುವೆಯೂ ಶಿಕ್ಷಕರು ಮಕ್ಕಳಲ್ಲಿ ಸ್ಫೂರ್ತಿ ತುಂಬುತ್ತಾರೆ. ಶಿಕ್ಷಕರ ಬದ್ಧತೆಯು ವೈದ್ಯಕೀಯ ಕ್ಷೇತ್ರದಂತೆ ಸೇವೆ ಮತ್ತು ಸಹಾನುಭೂತಿಯ ಪ್ರತೀಕವಾಗಿದೆ. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳ ನಡುವಿನ ಸೇತುವಾಗಿ ಸ್ಪರ್ಶ್‌ ಆಸ್ಪತ್ರೆಯ ಈ ಕಾರ್ಯಕ್ರಮ ಆಯೋಜಿತವಾಗಿದೆ ಎಂದರು.
ಸ್ಪರ್ಶ್‌ ಆಸ್ಪತ್ರೆ ವ್ಯವಹಾರಗಳ ಮುಖ್ಯಸ್ಥ ವಿಶ್ವನಾಥ್‌ ಶೆಟ್ಟಿ, ಸ್ಪರ್ಶ್‌ ಆಸ್ಪತ್ರೆ ಸಮೂಹದ ಹಿರಿಯ ವೈದ್ಯರು ಮತ್ತು ಸ್ಪರ್ಶ್‌ ಆಸ್ಪತ್ರೆ ಸಿಬ್ಬಂದಿ ಮೊದಲಾದವರು ಭಾಗವಹಿಸಿದ್ದರು.

RELATED ARTICLES

Latest News