ಬೆಂಗಳೂರು, ಸೆ.17– ಅನರ್ಹ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆಯಾದ ಬಳಿಕ ಮುಂದಿನ ವರ್ಷ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸುವುದಾಗಿ ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವುದು ಕರ್ನಾಟಕ ರಾಜ್ಯ. ಶೇ. 75 ರಷ್ಟು ಮಂದಿ ಬಿಪಿಎಲ್ ಪಟ್ಟಿಯಲ್ಲಿದ್ದಾರೆ. ಇದನ್ನು ಪರಿಷ್ಕರಣೆ ಮಾಡಲೇಬೇಕು ಎಂದು ಹೇಳಿದರು.
ಬಿಪಿಎಲ್ ಹೊಂದಿರುವ ಅನರ್ಹರನ್ನು ಎಪಿಎಲ್ ಪಟ್ಟಿಗೆ ಸೇರಿಸುತ್ತೇವೆ. ಯಾವುದೇ ಕಾರಣಕ್ಕೂ ಪಡಿತರ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಒಂದು ವೇಳೆ ಪರಿಷ್ಕರಣೆಯ ವೇಳೆ ಅರ್ಹರು ತಪ್ಪಿ ಹೋಗಿದ್ದರೆ ಅರ್ಜಿಕೊಡಬಹುದು. 24 ಗಂಟೆಯಲ್ಲೇ ಮತ್ತೆ ಬಿಪಿಎಲ್ ಕಾರ್ಡ್ ಕೊಟ್ಟು ಪಡಿತರ ನೀಡಲು ಆರಂಭಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಮಾನದಂಡ ನೀಡಿದೆ. ಜೊತೆಗೆ ಕೇಂದ್ರವೇ ಪರಿಷ್ಕರಣೆ ಮಾಡಿ, 7 ಲಕ್ಷ ಕಾರ್ಡ್‌ಗಳನ್ನು ಬಿಪಿಎಲ್ ಪಟ್ಟಿಗಳಿಂದ ರದ್ದುಗೊಳಿಸುವಂತೆ ಆದೇಶ ನೀಡಿದೆ.
ನಿನ್ನೆ ಈ ಬಗ್ಗೆ ನಮ ರಾಜ್ಯದ ಅಧಿಕಾರಿಗಳು ಸಭೆ ನಡೆಸಿ ಚರ್ಚೆಮಾಡಿದ್ದಾರೆ. ಕೇಂದ್ರ ಸರ್ಕಾರ ಪರಿಷ್ಕರಣೆ ಮಾಡಿರುವುದರಲ್ಲಿ ಯಾವ ಕಾರ್ಡ್‌ಗಳನ್ನು ರದ್ದುಗೊಳಿಸಬೇಕೆಂಬುದನ್ನು ಪರಿಶೀಲನೆ ನಡೆಸಲಾಗಿದೆ ಎಂದರು.