Wednesday, September 17, 2025
Homeರಾಜ್ಯಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ಪರಿವರ್ತನೆ ಶುರು

ಬಿಪಿಎಲ್‌ನಿಂದ ಎಪಿಎಲ್‌ಗೆ ಪಡಿತರ ಚೀಟಿ ಪರಿವರ್ತನೆ ಶುರು

Conversion of ration cards from BPL to APL begins

ಬೆಂಗಳೂರು, ಸೆ.17- ರಾಜ್ಯದಲ್ಲಿರುವ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗಳನ್ನಾಗಿ ಪರಿವರ್ತಿಸುವ ಕುರಿತಂತೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದ್ದು, ಪರ ವಿರೋಧ ಚರ್ಚೆಗಳು ಮತ್ತೊಮೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ.ಸೂಚಿತ ಮಾನ ದಂಡಕ್ಕಿಂತಲೂ ಹೆಚ್ಚಿನ ಕಾರ್ಡ್‌ಗಳು ರಾಜ್ಯದಲ್ಲಿದ್ದು ಅವುಗಳನ್ನು ಪರಿಷ್ಕರಣೆ ಮಾಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ರವಾನಿಸಿದೆ.

ಕಳೆದ ಮೇ, ಜೂನ್‌ನಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 12,68,097 ಕಾರ್ಡ್‌ಗಳು ಅನರ್ಹರ ಕೈಯಲ್ಲಿವೆೆ ಎಂಬ ಅನುಮಾನ ವ್ಯಕ್ತವಾಗಿದೆ. ಇವುಗಳ ಪೈಕಿ ವಿವಿಧ ಕಂಪನಿಗಳಲ್ಲಿ ಪಾಲುದಾರರು, ನಿರ್ದೇಶಕರಾಗಿರುವ 19600 ಮಂದಿ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದಾರೆ. 25 ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ಆದಾಯ ಹೊಂದಿರುವ 2684 ಮಂದಿ ಇದ್ದಾರೆ.

ಬಿಪಿಎಲ್‌ ವ್ಯಾಪ್ತಿಗೆ ಒಳಪಡಲು ವಾರ್ಷಿಕ 1.20 ಲಕ್ಷ ರೂ.ಗಿಂತಲೂ ಕಡಿಮೆ ಆದಾಯ ಹೊಂದಿರಬೇಕು. ಆದರೆ ನಿಗದಿತ ಮಿತಿ ದಾಟಿದ ಆದಾಯ ಹೊಂದಿರುವ 5,13,613 ಕುಟುಂಬಗಳು ಬಿಪಿಎಲ್‌ ಫಲಾನುಭವಿಗಳಾಗಿದ್ದಾರೆ. 7.5 ಎಕರೆಗಿಂತಲೂ ಹೆಚ್ಚಿನ ಭೂಮಿ ಹೊಂದಿರುವ 33,456 ಮಂದಿ, 6 ತಿಂಗಳಿನಿಂದಲೂ ಪಡಿತರ ಪಡೆಯದ 19,893 ಮಂದಿ, ನಾಲ್ಕು ಚಕ್ರಗಳ ವಾಹನ ಹೊಂದಿರುವ 119 ಮಂದಿ, 24 ಸಾವಿರ ಸರ್ಕಾರಿ ನೌಕರರು ಬಿಪಿಎಲ್‌ ಕಾರ್ಡ್‌ ಪಡೆದಿರುವುದು ಆಹಾರ ಇಲಾಖೆಯ ಪರಿಶೀಲನೆಯಲ್ಲಿ ಕಂಡು ಬಂದಿದೆ.

ಈ ಕಾರ್ಡ್‌ಗಳನ್ನು ಎಪಿಎಲ್‌ ಅನ್ನಾಗಿ ಪರಿವರ್ತಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 1,10,06,964 ಕಾರ್ಡ್‌ಗಳಿವೆ. ಆದರೆ ರಾಜ್ಯಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ 1,52,24,744 ಕಾರ್ಡ್‌ಗಳಿವೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ದತ್ತಾಂಶಗಳ ನಡುವೆಯೇ 42,17,780 ಕಾರ್ಡ್‌ಗಳ ವ್ಯತ್ಯಾಸವಿದೆ. ಎಪಿಎಲ್‌ ವಲಯದಲ್ಲ ಕೇಂದ್ರದ ಅಂದಾಜಿಗಿಂತಲೂ ರಾಜ್ಯದಲ್ಲಿ 598 ಕಾರ್ಡ್‌ಗಳು ಕಡಿಮೆ ಇವೆ.
ರಾಜ್ಯದಲ್ಲಿ 1,17,18,620 ಬಿಪಿಎಲ್‌ ಕಾರ್ಡ್‌ಗಳಿದ್ದು, ಕೇಂದ್ರದ ಮಾಹಿತಿ ಪ್ರಕಾರ 99,31,698 ಕಾರ್ಡ್‌ಗಳಿರುವುದಾಗಿ ತಿಳಿದು ಬಂದಿದೆ. ಇದರಲ್ಲಿಯೂ 17,86,922 ಕಾರ್ಡ್‌ಗಳ ವ್ಯತ್ಯಾಸ ಕಂಡು ಬರುತ್ತಿದೆ.

ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ತಮಲ್ಲಿರುವ ದತ್ತಾಂಶದ ಪ್ರಕಾರವಷ್ಟೇ ಆಹಾರ ಪೂರೈಸುವುದಾಗಿ ಸ್ಪಷ್ಟಪಡಿಸಿದೆ.ಹೆಚ್ಚುವರಿಯಾಗಿರುವ 42ಲಕ್ಷ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರವೇ ವೆಚ್ಚ ಭರಿಸಬೇಕಿದೆ. ಇರುವ ದತ್ತಾಂಶಗಳಲ್ಲೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಪರಿಷ್ಕರಣೆ ಮಾಡಿ ಅನರ್ಹರನ್ನು ಪಟ್ಟಿಯಿಂದ ಕೈಬಿಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಡಲು ಪ್ರಕ್ರಿಯೆಗಳನ್ನು ಆರಂಭಿಸಲಾಗುತ್ತಿದೆ. ಕಳೆದ ವರ್ಷ ಈ ಪ್ರಕ್ರಿಯೆ ಆರಂಭಿಸಿದಾಗ ವಿರೋಧ ಪಕ್ಷಗಳು ಸೇರಿದಂತೆ ಸಂಘಸಂಸ್ಥೆಗಳು ಭಾರೀ ವಿರೋಧ ವ್ಯಕ್ತ ಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಆರಂಭಿಸಿದ್ದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಕೇಂದ್ರದ ಸೂಚನೆ ಆಧರಿಸಿ ಮತ್ತೆ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್‌. ಮುನಿಯಪ್ಪ ಯಾವುದೇ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸುವುದಿಲ್ಲ. ಬದಲಾಗಿ ಎಪಿಎಲ್‌ಗೆ ಪರಿವರ್ತಿಸಲಾಗುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.ಒಂದು ವೇಳೆ ಅರ್ಹರ ಬಿಪಿಎಲ್‌ ಕಾರ್ಡ್‌ಗಳು ರದ್ದುಗೊಂಡರೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಅದನ್ನು ಪರಿಶೀಲಿಸಿ ಬಿಪಿಎಲ್‌ನ್ನು ಊರ್ಜಿತಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಆಹಾರ ಇಲಾಖೆ ಈಗಾಗಲೇ ಶಂಕಿತ ಬಿಪಿಎಲ್‌ ಕಾರ್ಡ್‌ಗಳಿಗೆ ಆಹಾರ ಧಾನ್ಯ ವಿತರಿಸದಂತೆ ಸೂಚನೆ ನೀಡಿದೆ. ಶಂಕಿತ ಅನರ್ಹ ಫಲಾನುಭವಿಗಳಿಗೆ ನೋಟಿಸ್‌‍ ಕೂಡ ನೀಡಲಾಗಿದ್ದು, ನ್ಯಾಯಬೆಲೆ ಅಂಗಡಿಗಳಿಗೂ ಮಾಹಿತಿ ಒದಗಿಸಲಾಗಿದೆ.

RELATED ARTICLES

Latest News