Wednesday, September 17, 2025
Homeರಾಜ್ಯಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ : ದರೋಡೆಕೋರರ ಪತ್ತೆಗೆ 7 ತಂಡ ರಚನೆ

ಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ : ದರೋಡೆಕೋರರ ಪತ್ತೆಗೆ 7 ತಂಡ ರಚನೆ

SBI Bank Robbery: 7 teams formed to track down robbers

ವಿಜಯಪುರ,ಸೆ.17-ಏಕಾಏಕಿ ಬ್ಯಾಂಕಿಗೆ ನುಗ್ಗಿ ಪಿಸ್ತೂಲ್‌ ತೋರಿಸಿ, ಸಿಬ್ಬಂದಿಗಳ ಕೈಕಾಲು ಕಟ್ಟಿ ಸಿನಿಮಾ ಶೈಲಿಯಲ್ಲಿ 23 ಕೋಟಿ ರೂ.ಮೌಲ್ಯದ ಚಿನ್ನಾಭರಣ ಹಾಗೂ 1.4 ಕೋಟಿ ರೂ.ನಗದು ದೋಚಿ ಪರಾರಿಯಾಗಿರುವ ಮುಸುಕುಧಾರಿ ದರೋಡೆಕೋರರ ಬಂಧನಕ್ಕೆ ಏಳು ವಿಶೇಷ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ.

ಪೊಲೀಸ್‌‍ ಮೂಲಗಳ ಪ್ರಕಾರ ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಬ್ಯಾಂಕ್‌ ಮುಚ್ಚುವ ವೇಳೆಗೆ ಠೇವಣಿ ಫಾರಂ ಕೇಳುವ ನೆಪ ಮಾಡಿಕೊಂಡು ಬ್ಯಾಂಕಿಗೆ ಒಬ್ಬ ದರೋಡೆಕೋರ ಕರಿಬಣ್ಣದ ಕೋವಿಡ್‌ ಮಾಸ್ಕ್‌, ಬಿಳಿ ಬಣ್ಣದ ಟೋಪಿ ಹಾಗೂ ಕನ್ನಡಕ ಹಾಕಿಕೊಂಡು ಒಳನುಗ್ಗಿದ ನಂತರ ಒಬ್ಬೊಬ್ಬರಾಗಿ ಒಳನುಸುಳಿದ ಮೂವರು ಮುಸುಕುಧಾರಿ ದರೋಡೆಕೋರರ ತಂಡ
ಏಕಾಏಕಿ ಪಿಸ್ತೂಲ್‌ ಹೊರ ತೆಗೆದು ಬ್ಯಾಂಕ್‌ ಸಿಬ್ಬಂದಿಗಳನ್ನು ಬೆದರಿಸಿದರು.

ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಸಿಬ್ಬಂದಿ ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ದರೋಡೆಕೋರರು ಅವರ ಪ್ಲಾಸ್ಟಿಕ್‌ ಟ್ಯಾಗ್‌ನಿಂದ ಕೈಕಾಲು ಕಟ್ಟಿಹಾಕಿ ತಿಜೋರಿಯಲ್ಲಿದ್ದ ಸುಮಾರು 23,61,78,460 ರೂ.ಮೌಲ್ಯದ 20 ಕೆಜಿ ಚಿನ್ನಾಭರಣ ಹಾಗೂ 1.4 ಕೋಟಿ ಹಣವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಬ್ಯಾಂಕ್‌ ದರೋಡೆ ಮಾಡಿ ಪರಾರಿಯಾಗಿರುವ ದರೋಡೆಕೋರರ ಹೆಡೆಮುರಿ ಕಟ್ಟಲು ವಿಶೇಷ ಪೊಲೀಸ್‌‍ ತಂಡಗಳನ್ನು ರಚನೆ ಮಾಡಲಾಗಿದೆ.
ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದಿರುವ ಈ ಏಳು ವಿಶೇಷ ಪೊಲೀಸರ ತಂಡಗಳು ಈಗಾಗಲೇ ಮಹಾರಾಷ್ಟ್ರ ಹಾಗೂ ಮತ್ತಿತರ ರಾಜ್ಯಗಳಿಗೆ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿವೆೆ.

ದರೋಡೆಕೋರರು ಬ್ಯಾಂಕ್‌ ದರೋಡೆಗೆ ಬಳಸಿದ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಪತ್ತೆಯಾಗಿದ್ದು, ಅವರು ಕಾರಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಮಂಗಳವೆಡೆ ತಾಲ್ಲೂಕಿನ ಹುಲಜಂತಿ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದರಿಂದ ತಮ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದು ಗೊತ್ತಾಗಿದೆ.

ಈ ಜಾಡು ಹಿಡಿದಿರುವ ವಿಶೇಷ ಪೊಲೀಸ್‌‍ ತಂಡಗಳು ನಾಲ್ಕು ದಿಕ್ಕುಗಳಿಗೂ ಸಂಚರಿಸಿ ದರೋಡೆಕೋರರ ಬಂಧನಕ್ಕೆ ಜಾಲ ಬೀಸಿದ್ದಾರೆ. ದರೋಡೆಕೋರರ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದೆಂದು ಉತ್ತರ ವಲಯ ಐಜಿಪಿ ಚೇತನ್‌ಸಿಂಗ್‌ ರಾಥೋಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News