Wednesday, September 17, 2025
Homeರಾಜ್ಯಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ : ಕನ್ನಡ ಸಂಘಟನೆಗಳ ಆಕ್ರೋಶ

ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ : ಕನ್ನಡ ಸಂಘಟನೆಗಳ ಆಕ್ರೋಶ

Students fined for speaking Kannada in Sindhi school: Kannada organizations outrage

ಬೆಂಗಳೂರು, ಸೆ.17- ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ ಶಿಕ್ಷೆ ನೀಡಿರುವುದಕ್ಕೆ ಕನ್ನಡ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. ಇಂತಹ ಶಾಲೆಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಂಘಟನೆಯ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕನ್ನಡ ವಿರೋಧಿ ಹಾಗೂ ಕನ್ನಡಕ್ಕೆ ದ್ರೋಹ ಬಗೆಯುವ ಶಾಲೆಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳ ಬೇಕಾದ ಅಗತ್ಯವಿದ್ದು, ಯಾವುದೇ ಮುಲಾಜಿಲ್ಲದೆ ಕನ್ನಡಕ್ಕೆ ಅವಮಾನ ಮಾಡುವವರಿಗೆ ಬುದ್ಧಿ ಕಲಿಸುವ ಕಾಲ ಬಂದಿದೆ ಎಂದು ಮುಖಂಡರು ಎಚ್ಚರಿಸಿದ್ದಾರೆ.

ಇಂತಹ ಶಾಲೆಯಲ್ಲಿ ಮಕ್ಕಳು ಪಾಠ ಕಲೀಬೇಕಾ.!
ಇರೋದು ಕರ್ನಾಟಕದಲ್ಲಿ ಆದರೂ ಇಲ್ಲಿನ ವಿದ್ಯಾರ್ಥಿಗಳು ಕನ್ನಡ ಮಾತನಾಡಬಾರದಂತೆ. ಮಾತನಾಡಿದರೆ ದಂಡ ವಿಧಿಸುತ್ತಾರಂತೆ… ಅದ್ಯಾವುದಪ್ಪ ಅಂತಹ ಶಾಲೆ ಅನ್ಕೊಂಡ್ರಾ… ಅದೇ ಸಿಂಧಿ ಶಾಲೆ.ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಈ ಶಾಲೆಗೆ ಕಾರಣ ಕೇಳಿ ಶಿಕ್ಷಣ ಇಲಾಖೆ ಅಧಿಕಾರಿಗಳು ನೋಟೀಸ್‌‍ ಜಾರಿ ಮಾಡಿದ್ದಾರೆ.

ನಗರದ ಕುಮಾರ ಪಾರ್ಕ್‌ನಲ್ಲಿರುವ ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾ ಗುತ್ತಿದೆ ಎಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದವು.ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಕನ್ನಡ ವಿರೋಧಿ ಶಾಲೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಪ್ರಾಧಿಕಾರದ ದೂರಿನ ಮೇರೆಗೆ ಬೆಂಗಳೂರು ಉತ್ತರ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಿಂಧಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಾಲೆಗೆ ಕಾರಣ ಕೇಳಿ ನೋಟೀಸ್‌‍ ಜಾರಿ ಮಾಡಿದ್ದಾರೆ. ಶಾಲೆಯವರು ಕಾರಣ ನೀಡಿದ ನಂತರ ಕನ್ನಡ ವಿರೋಧಿ ಶಾಲೆ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಕ್ರೋಶ; ತಿನ್ನುವ ಆಹಾರ, ಕುಡಿಯುವ ನೀರು ಇಲ್ಲಿನದು ಆದರೆ ಅವರಿಗೆ ಇಲ್ಲಿನ ಭಾಷೆ ಬೇಡ ಎಂದರೆ ಏನರ್ಥ. ಅಂತಹ ಶಾಲೆಗಳಲ್ಲಿ ನಮ ಮಕ್ಕಳು ಪಾಠ ಕಲಿಯುವುದು ಬೇಡ ಕನ್ನಡ ವಿರೋಧಿ ಶಾಲೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಾವೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಸಿದ್ದಾರೆ.

ಕನ್ನಡ ದ್ರೋಹಿಗಳಿಗೆ ಪಾಠ ಕಲಿಸಿ
ಕನ್ನಡದ ನೆಲದಲ್ಲಿದ್ದು, ಎಲ್ಲ ಸೌಲಭ್ಯಗಳನ್ನು ಪಡೆದು ಕನ್ನಡ ಬೇಡ ಎನ್ನುವ ದ್ರೋಹಿಗಳಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು ಎಂದು ಸಾ.ರಾ.ಗೋವಿಂದು ಒತ್ತಾಯಿಸಿದ್ದಾರೆ.
ರಾಜಧಾನಿಯಲ್ಲೇ ಇಂತಹ ಶಾಲೆಗಳು ಇರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಶಾಲೆ ಕೊಠಡಿಯೊಳಗೆ ಇದ್ದ ಇಂತಹ ಆದೇಶ ಈಗ ಶಾಲೆ ಆವರಣ ಮತ್ತು ರಸ್ತೆಗೂ ಬಂದಿದೆ ಎಂದು ಕಿಡಿಕಾರಿದ್ದಾರೆ. ಸಿಂಧಿ ಶಾಲೆ ಸರ್ಕಾರ ನೀಡಿದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಪ್ರಮುಖ ತಾಣದಲ್ಲೇ ಇದೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ಪಡೆದು ಕನ್ನಡಿಗ ಮಕ್ಕಳಿಂದ ದುಬಾರಿ ಫೀಜ್‌ ಕಟ್ಟಿಸಿಕೊಂಡು ಆಳುತ್ತಿರುವ ಇವರು ಕನ್ನಡ ಮಾತನಾಡಿದರೆ ದಂಡ ವಿಧಿಸುವುದು ದುರಂಹಕಾರದ ಪರಮಾವಧಿ ಎಂದು ಹೇಳಿದ್ದಾರೆ.ಇಂತಹ ಘಟನೆಗಳು ಮುಂದೆ ನಡೆಯದಂತೆ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ
ಶಾಲೆಯಲ್ಲಿ ಶಿಸ್ತು, ಸಂಯಮ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿ. ಆದರೆ ಕನ್ನಡದಲ್ಲಿ ಮಾತನಾಡುವುದು ತಪ್ಪು ಎಂದು ಶಿಕ್ಷೆ ನೀಡಿ ದಂಡ ವಿಧಿಸುವವರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.

ಸಿಂಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಬೈದಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಅನೇಕ ಶಾಲೆಗಳಲ್ಲಿ ಈಗಲೂ ಕನ್ನಡ ದಲ್ಲಿ ಮಾತನಾಡಿದರೆ ತಪ್ಪು ಎಂದೇ ಅವರನ್ನು ಶಿಕ್ಷಿಸಿ ದಂಡ ಹಾಕುವ ಪ್ರವೃತ್ತಿ ನಡೆಯುತ್ತಿದೆ. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತದೆ ಎಂದು ಹೇಳಿದ್ದಾರೆ.
ಕನ್ನಡ ರಾಜ್ಯದ ಆಡಳಿತ ಭಾಷೆ ಎಂದು ಸರ್ಕಾರ ಘೋಷಿಸಿದೆ. ಅದನ್ನು ಪಾಲನೆ ಮಾಡಬೇಕಾದುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಆದರೆ ನಮದೇ ಕಾನೂನು, ನಮದೇ ನಡೆ ಎಂಬಂತೆ ಕೆಲ ಶಿಕ್ಷಣ ಸಂಸ್ಥೆಗಳು ವರ್ತಿಸುವುದು ಅವರ ದುರಹಂಕಾರದ ಪರಮಾವಧಿ ಎಂದಿದ್ದಾರೆ.

ಮುತ್ತಿಗೆ ಹಾಕುವ ಎಚ್ಚರಿಕೆ
ರಾಜಧಾನಿ ಬೆಂಗಳೂರಿನ ಸಿಂಧಿ ಶಾಲೆಯ ಕನ್ನಡ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿರುವ ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಮಕ್ಕಳಿಗೆ ದಂಡ ವಿಧಿಸಿರುವ ಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಆ ಶಾಲೆಗೆ ನೋಟೀಸ್‌‍ ನೀಡಿದರೆ ಸಾಲದು, ಕೂಡಲೇ ಆ ಶಾಲೆಯನ್ನು ಮುಚ್ಚಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.

ಇಂಗ್ಲಿಷ್‌ ಬದುಕಿಗೆ ಬೇಕಾಗುತ್ತದೆ, ಇಂಗ್ಲಿಷ್‌ ಭಾಷೆಯನ್ನು ಕಲಿಸಬಾರದು ಎಂದು ನಾವೇನು ಹೇಳಿಲ್ಲ. ಆದರೆ ಕನ್ನಡ ಮಾತನಾಡಿದರೆ ದಂಡ ವಿಧಿಸಿ ಕನ್ನಡ ಭಾಷೆಗೆ ಮಾಡುವ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿಯಬೇಕು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಮತ್ತು ಭಾಷೆ ಉಳಿವಿಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ರೂಪಿಸುವುದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದಂತಿದೆ ಎಂದು ಕಿಡಿ ಕಾರಿದರು.

ಇದು ಸಿಂಧಿ ಶಾಲೆಯೊಂದರಲ್ಲಿ ಮಾತ್ರ ಅಲ್ಲ. ಬಹುತೇಕ ಭಾಷೆಗಳಲ್ಲಿ ಇಂತಹ ವರ್ತನೆಗಳು ನಡೆಯುತ್ತಿವೆ. ಕನ್ನಡ ಮಾತನಾಡಿದರೆ ಅವಮಾನ ಎಂಬ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಕನ್ನಡ ಉಳಿವಿಗೆ ಮುಂದಾಗಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಅವರು ಹೇಳಿದರು.

RELATED ARTICLES

Latest News