ಬೆಂಗಳೂರು,ಸೆ.18– ಯೋಗಾಭ್ಯಾಸ ತರಬೇತಿಗಾಗಿ ಯೋಗ ಸೆಂಟರ್‌ಗೆ ಹೋಗುತ್ತಿದ್ದ ಬಾಲಕಿಗೆ ಮೆಡಲ್ ಕೊಡಿಸುತ್ತೇನೆಂದು ನಂಬಿಸಿ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪದಡಿ ಯೋಗ ಗುರು ನಿರಂಜನಮೂರ್ತಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ನಿರಂಜನಮೂರ್ತಿ ಯೋಗ ಕೇಂದ್ರ ನಡೆಸುತ್ತಿದ್ದು, ಈ ಕೇಂದ್ರಕ್ಕೆ ಯೋಗ ಕಲಿಯಲು ಹಲವಾರು ಮಂದಿ ಹೋಗುತ್ತಾರೆ. ತನ್ನ ಯೋಗ ಸೆಂಟರ್‌ಗೆ ಬರುತ್ತಿದ್ದ ಬಾಲಕಿಗೆ ನಿನ್ನನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ, ಮೆಡಲ್ ಕೊಡಿಸುತ್ತೇನೆಂದು ಆಮಿಷವೊಡ್ಡಿ ಆಕೆಯ ಮನ ಪರಿವರ್ತನೆ ಮಾಡಿದ್ದಾನೆ.
ಯೋಗದಲ್ಲಿ ನೀನು ಸಾಧನೆ ಮಾಡಿದರೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ನಂಬಿಸಿದ್ದಾನೆ. ಈ ನಡುವೆ ಯೋಗಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿರಂಜನಮೂರ್ತಿ ಜೊತೆ 2023 ರಲ್ಲಿ ಥಾಯ್ಲಂಡ್ ಗೆ ಬಾಲಕಿ ಹೋಗಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆಕೆ ಯೋಗ ಕೇಂದ್ರಕ್ಕೆ ಹೋಗುವುದನ್ನು ಬಿಟ್ಟಿದ್ದಾಳೆ.
ತದ ನಂತರದಲ್ಲಿ 2024 ರಲ್ಲಿ ಪುನಃ ಯೋಗ ಸ್ಪರ್ಧೆಗೆ ಸನ್ ಶೈನ್ ಇನ್ಸ್ಟಿಟ್ಯೂಟ್‌ಗೆ ಯೋಗ ಕಲಿಯಲು ಬಾಲಕಿ ಸೇರಿಕೊಂಡಿದ್ದಾಳೆ. ದುರಾದೃಷ್ಟವೆಂಬಂತೆ ನಿರಂಜನಮೂರ್ತಿಯೇ ಈ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದು, ಅಲ್ಲಿಯೂ ಸಹ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಈ ಇನ್ಸ್ಟಿಟ್ಯೂಟ್‌ನಲ್ಲೇ ಆಕೆಯ ಜೊತೆ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ಆಗಸ್ಟ್ 22 ರಂದು ರಾಜ್ಯ ಮಟ್ಟದಲ್ಲಿ ಪ್ಲೇಸ್‌ಮೆಂಟ್ ಕೊಡಿಸುತ್ತೇನೆಂದು ದೈಹಿಕ ಸಂಪರ್ಕಕ್ಕೆ ಯತ್ನಿಸಿದ್ದಾನೆ.
ಯೋಗ ಗುರು ನಿರಂಜನಮೂರ್ತಿ ವರ್ತನೆಯಿಂದ ಆತಂಕಗೊಂಡ ಆಕೆ ಪೋಷಕರಿಗೆ ಈ ವಿಷಯ ತಿಳಿಸಿ ನಂತರ ಆರ್‌ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಿರಂಜನಮೂರ್ತಿ ತಲೆ ಮರೆಸಿಕೊಂಡಿದ್ದನು.
ಪೊಲೀಸರು ತನಿಖೆ ಮುಂದುವರೆಸಿ ಯೋಗ ಗುರು ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ವೆಸಗಿರುವುದು ಬಯಲಾಗಿದೆ.ಈ ಯೋಗ ಗುರು ಇನ್ನು ಹಲವು ಯುವತಿಯರ ಮೇಲೆ ಅತ್ಯಾಚಾರ ವೆಸಗಿರುವ ಶಂಕೆ ವ್ಯಕ್ತವಾಗಿವೆ.
ಅತ್ಯಾಚಾರಕ್ಕೆ ಒಳಗಾಗಿದ್ದರೆ ಮಾಹಿತಿ ನೀಡಿ: ಯೋಗ ತರಬೇತಿಗೆಂದು ಈತನ ಯೋಗ ಸೆಂಟರ್‌ಗೆ ಹೋಗುತ್ತಿದ್ದವರು ಈತನಿಂದ ಏನಾದರೂ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗಿದ್ದರೆ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡುವಂತೆ, ದೂರು ನೀಡುವವರ ಹೆಸರು ಹಾಗೂ ಮಾಹಿತಿಯನ್ನು ಗೌಪ್ಯವಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.