ಬೆಂಗಳೂರು,ಸೆ.18- ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಅರ್ಜಿ ವಿಚಾರಣೆಯು ಶುಕ್ರವಾರ ನಡೆಯಲಿದ್ದು ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮತಿಸಿದೆ. ಕರ್ನಾಟಕ ಹೈ ಕೋರ್ಟ್ ಈ ಹಿಂದೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಪಿಐಎಲ್‌ಗಳನ್ನು ವಜಾಗೊಳಿಸಿತ್ತು. ಗೌರವ್ ಎಂಬ ವಕೀಲರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆಹೋಗಿದ್ದಾರೆ.
ನಾಡ ಹಬ್ಬ ದಸರಾ ದಸರಾ ಉದ್ಘಾಟನೆಗೆ ಹಿಂದೂಯೇತರ ವ್ಯಕ್ತಿಯನ್ನು ಸರ್ಕಾರ ಆಹ್ವಾನಿಸಿದೆ. ನಮ ಧಾರ್ಮಿಕ ನಂಬಿಕೆಗಳ ಪ್ರಕಾರ ದಸರಾ ಉದ್ಘಾಟನೆಯನ್ನು ಹಿಂದೂ ಧರ್ಮೀಯರೇ ಉದ್ಘಾಟಿಸಬೇಕು ಇದು ನಂಬಿಕೆಯ ಪ್ರಶ್ನೆಯಾಗಿದ್ದು ನಾಡ ದೇವತೆ ಒಪ್ಪದೆ ಇರುವವರು ಹಾಗೂ ಸಂಪ್ರದಾಯವನ್ನು ಪಾಲನೆ ಮಾಡದಿರುವವರು ಉದ್ಘಾಟನೆ ಮಾಡುವುದು ಸರಿಯಲ್ಲ. ಹೀಗಾಗಿ ತಕ್ಷಣವೇ ತುರ್ತು ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡರು.
ಇದಕ್ಕೆ ಸಮತಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ ನಾಳೆ ಅರ್ಜಿ ವಿಚಾರಣೆ ನಡೆಸುವುದಾಗಿ ಒಪ್ಪಿಗೆ ನೀಡಿತು.
ಪ್ರಕರಣದ ಹಿನ್ನೆಲೆ :
ಪ್ರಸಕ್ತ ವರ್ಷದ ದಸರಾ ಹಬ್ಬ ಉದ್ಘಾಟನೆಗೆ ಬಾನು ಮುಷ್ತಾಕ್ ರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರ ಈ ಆಹ್ವಾನವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಹಾಕಿದ್ದರು. ದಸರಾ ಹಿಂದೂ ಧಾರ್ಮಿಕ ಹಬ್ಬ, ವೇದ, ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿರುವುದರಿಂದ ಅವರಿಗೆ ಆಹ್ವಾನ ನೀಡಿರುವುದು ಸಾಂವಿಧಾನಿಕ ಹಕ್ಕುಗಳು ಹಾಗೂ ಧಾರ್ಮಿಕ ಭಾವನೆಗಳ ಉಲ್ಲಂಘನೆಯಾಗಿದ್ದು, ಧಾರ್ಮಿಕ ಸಂಪ್ರದಾಯದ ಪಾವಿತ್ರ್ಯ ಕಾಪಾಡಬೇಕೆಂದು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ ಆದೇಶ ನೀಡಿತ್ತು.
ಯಾವುದೇ ಹಕ್ಕು ಉಲ್ಲಂಘನೆ ಮಾಡಿಲ್ಲ. ಸಂವಿಧಾನದ ಯಾವ ವಿಧಿ ಕೂಡಾ ಉಲ್ಲಂಘನೆ ಆಗಿಲ್ಲ. ದೇವಸ್ಥಾನಕ್ಕೆ ಹಿಂದೂಯೇತರರು ಬರಬಾರದು ಎಂಬ ನಿಯಮವೂ ಇಲ್ಲ. ಮುಜರಾಯಿ ಇಲಾಖೆ ಕೂಡಾ ಇದಕ್ಕೆ ಸಂಬಂಧಿಸಿದ ಸುತ್ತೋಲೆಯನ್ನು ಕೋರ್ಟ್ ಮುಂದೆ ಕೊಟ್ಟಿತ್ತು.
ಸರಕಾರ ಜಾತ್ಯತೀತವಾಗಿ ಕಾರ್ಯಕ್ರಮ ನಡೆಸುತ್ತಿದೆ. ಈ ಹಿಂದೆ ನಿಸಾರ್ ಅಹದ್ ಕೂಡಾ ಉದ್ಘಾಟಿಸಿದ್ದರು. ವಿರೋಧ ವ್ಯಕ್ತಪಡಿಸಿರುವ ಅರ್ಜಿದಾರರಿಗೆ ದಂಡ ವಿಧಿಸಬೇಕು ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದರು. ಚಾಮುಂಡಿ ತೇರಿಗೆ ನಾನು ಹೋಗಬೇಕೆಂದಿದ್ದೆ ಎಂದು ಸ್ವತಃ ಬಾನು ಮುಷ್ತಾಕ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ದೇವಿಯೇ ನನ್ನನ್ನ ಕರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದನ್ನೂ ಅಡ್ವೊಕೇಟ್ ಜನರಲ್ ಹೇಳಿದ್ದರು.
ತಮ ಹಕ್ಕು ಯಾವುದಾದರೂ ಉಲ್ಲಂಘನೆಯಾಗಿದೆಯೇ ಎಂದು ಅರ್ಜಿದಾರರಾದ ಪ್ರತಾಪ್ ಸಿಂಹ ಅವರನ್ನು ಕೋರ್ಟ್ ಪ್ರಶ್ನಿಸಿತ್ತು.ಹೀಗಾಗಿ ಸುಮನೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿ, ಅರ್ಜಿದಾರರ ವಿರುದ್ಧ ದಂಡ ಹಾಕುವುದಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಅಭಿಪ್ರಾಯ ಹೇಳುವಂಥಾದ್ದು ಎಲ್ಲರ ಹಕ್ಕು, ಆದರೆ ನಿಮ ಸಾಂವಿಧಾನಿಕ ಹಕ್ಕು ಏನು ಕಸಿಯಲಾಗಿದೆ? ಪೂಜಾರಿಯ ಹಕ್ಕನ್ನು ಕಸಿದರೆ, ವ್ಯಕ್ತಿಯ ಆಸ್ತಿ ಕಸಿದರೆ ಪ್ರಶ್ನೆ ಮಾಡಬಹುದು, ಆದರೆ ಇಲ್ಲಿ ನಿಮ ಯಾವ ಹಕ್ಕು ಕಸಿಯಲಾಗಿದೆ ಎಂದು ಹೈಕೋರ್ಟ್ ಪ್ರಶ್ನಿಸಿತ್ತು.
ಇದಕ್ಕೆ ಪ್ರತಾಪ್ ಸಿಂಹ ಪರ ವಕೀಲರು ಅವರಿಗೆ ಮೂರ್ತಿ ಪೂಜೆ ಬಗ್ಗೆ ನಂಬಿಕೆ ಇಲ್ಲ, ಅರಿಶಿನ ಕುಂಕುಮದ ಬಗ್ಗೆ ನಂಬಿಕೆ ಇಲ್ಲ, ಸಂಪ್ರದಾಯ ವಿರೋಧಿಯಾಗಿದ್ದಾರೆ ಎಂಬುದನ್ನೂ ಉಲ್ಲೇಖ ಮಾಡುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸನಾತನ ಧರ್ಮ ಎಲ್ಲಾ ವಿಧದ ನಂಬಿಕೆಯನ್ನು ಒಳಗೊಂಡಿದೆ ಎಂದು ಪ್ರತಿವಾದ ಮಾಡಿದರು.
ಹೀಗಾಗಿ ದೇವಾಲಯ ಯಾರಿಗೋ ಒಬ್ಬರಿಗೆ ಸೇರಿದ್ದಲ್ಲ, ಎಲ್ಲರೂ ಹೋಗಿ ಬರಬಹುದು ಎಂದು ಸಮರ್ಥನೆ ಮಾಡಿಕೊಂಡಿದ್ದರಿಂದ ಮೂರೂ ಪಿಐಎಲ್‌ಗಳನ್ನು ವಜಾಗೊಳಿಸಲಾಗಿತ್ತು.