Thursday, September 18, 2025
Homeರಾಜ್ಯಮೈಸೂರು ದಸರಾ : ಪ್ರತಿಭಟನೆ ಮತ್ತು ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಡಿಜಿ ಸೂಚನೆ

ಮೈಸೂರು ದಸರಾ : ಪ್ರತಿಭಟನೆ ಮತ್ತು ಗೊಂದಲ ನಡೆಯದಂತೆ ಕಟ್ಟೆಚ್ಚರ ವಹಿಸಲು ಡಿಜಿ ಸೂಚನೆ

Mysore Dasara: DG instructs to be on high alert to prevent protests and confusion

ಮೈಸೂರು,ಸೆ.18- ದಸರಾ ಮಹೋತ್ಸವ ಉದ್ಘಾಟಕರ ವಿಚಾರದಲ್ಲಿ ವಿವಾದ ಉಂಟಾಗಿರು ವುದರಿಂದ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಉದ್ಘಾಟನೆ ಸಮಾರಂಭದಲ್ಲಿ ಯಾವುದೇ ಪ್ರತಿಭಟನೆ ಮತ್ತು ಗೊಂದಲ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಸೂಚನೆ ನೀಡಿದರು.
ನಗರ ಪೊಲೀಸ್‌‍ ಆಯುಕ್ತರ ಕಚೇರಿ ಸಭಾಂಗಣ ದಲ್ಲಿ ದಸರಾ ಭದ್ರತೆ ಸಂಬಂಧ ನಡೆದ ಪೊಲೀಸ್‌‍ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದರು.

ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪೊಲೀಸ್‌‍ ಪಡೆಯನ್ನು ನಿಯೋಜಿಸಬೇಕು. ಹಂತ ಹಂತವಾಗಿ ಭದ್ರತಾ ಕಾರ್ಯ ಕೈಗೊಳ್ಳಬೇಕು. ದಸರಾ ಉದ್ಘಾಟಕರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಗಣ್ಯರು ಬಂದು ಕಾರ್ಯಕ್ರಮ ಮುಗಿಸಿ ಸುರಕ್ಷಿತವಾಗಿ ತೆರಳುವವರೆಗೆ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಸೆ. 22ರಿಂದ ಅ. 2ರವರೆಗೆ ನಡೆಯಲಿರುವ ದಸರಾ ಉತ್ಸವಕ್ಕೆ ಸ್ಥಳೀಯರು ಸೇರಿದಂತೆ ಲಕ್ಷಾಂತರ ಪ್ರವಾಸಿಗರು ಆಗಮಿಸಲಿದ್ದು, ಹೆಚ್ಚಿನ ಪೊಲೀಸ್‌‍ ಪಡೆ ನಿಯೋಜಿಸಬೇಕು ಎಂದು ಸೂಚಿಸಿದರು.

ಅರಮನೆ ಸೇರಿದಂತೆ ಪಂಜಿನ ಕವಾಯತು ಮೈದಾನ, ಆಹಾರ ಮೇಳ ಮತ್ತು ಯುವ ದಸರಾ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಂತಹ ಪ್ರಕರಣ ನಡೆಯದಂತೆ ಸಾರ್ವಜನಿಕರ ಮೇಲೆ ನಿಗಾವಹಿಸಬೇಕು. ವಿಜಯದಶಮಿ ಮೆರವಣಿಗೆ, ಟಾರ್ಚ್‌ಲೈಟ್‌ ಪರೇಡ್‌ ಮೈದಾನ, ಚಾಮುಂಡಿಬೆಟ್ಟ, ಯುವ ದಸರಾ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ದಸರಾ ವಸ್ತುಪ್ರದರ್ಶನ, ವೈಮಾನಿಕ ಪ್ರದರ್ಶನದಂತಹ ಕಾರ್ಯಕ್ರಮ ನಡೆಯುವ ಸ್ಥಳದಲ್ಲೂ ಮೆಟಲ್‌ ಡಿಟೆಕ್ಟರ್‌ ಅಳವಡಿಸಿ, ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಪ್ರವೇಶಾವಕಾಶ ನೀಡಬೇಕು. ಮೈಸೂರು ನಗರ ಪೊಲೀಸ್‌‍ ಘಟಕವು ಜಿಲ್ಲಾಡಳಿತದೊಂದಿಗೆ ನಿರಂತರ ಚರ್ಚೆ ನಡೆಸಿ ದಸರಾ ಬಂದೋಬಸ್ತ್‌ ಯೋಜನೆಯನ್ನು ಅಂತಿಮಗೊಳಿಸಬೇಕು ಎಂದು ಸೂಚಿಸಿದರು.

ನಗರ ಪೊಲೀಸ್‌‍ ಆಯುಕ್ತೆ ಸೀಮಾ ಲಾಟ್ಕರ್‌, ಡಿಸಿಪಿಗಳಾದ ಆರ್‌.ಎನ್‌.ಬಿಂದು ಮಣಿ, ಕೆ.ಎಸ್‌‍.ಸುಂದರ್‌ ರಾಜ್‌, ಸಿದ್ದನಗೌಡ ಪಾಟೀಲ್‌, ಅಶ್ವಾರೋಹಿ ದಳದ ಪೊಲೀಸ್‌‍ ಕಮಾಂಡೆಂಟ್‌ ಎ.ಮಾರುತಿ, ನಗರ ಸಂಚಾರ ವಿಭಾಗದ ಎಸಿಪಿ ಎಂ.ಶಿವಶಂಕರ್‌, ಅರಮನೆ ಭದ್ರತಾ ವಿಭಾಗದ ಎಸಿಪಿ ಚಂದ್ರಶೇಖರ್‌ ಸೇರಿದಂತೆ ಎಲ್ಲಾ ಉಪ ವಿಭಾಗಗಳ ಎಸಿಪಿಗಳು ಇದ್ದರು.

RELATED ARTICLES

Latest News