ಬೆಂಗಳೂರು,ಸೆ.19-ನಿನ್ನೆ ಮಧ್ಯಾಹ್ನದಿಂದ ರಾಜ್ಯದ ದಕ್ಷಿಣ ಒಳನಾಡಿನ ಹಲವೆಡೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ಜನರ ದೈನಂದಿನ ಕೆಲಸಕಾರ್ಯಗಳಿಗೆ ತೊಂದರೆಯಾಗಿತ್ತು. ಇಂದು ಬೆಳಗ್ಗೆ ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಹಗುರ ಮಳೆ ಮುಂದುವರೆದಿತ್ತು. ಬಂಗಾಳಕೊಲ್ಲಿ ಹಾಗೂ ಒಳನಾಡಿನಲ್ಲಿ ಮೇಲೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಸೆ.27ರವರೆಗೂ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.
ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಚದುರಿದಂತೆ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ಕರಾವಳಿ, ಮಲೆನಾಡು, ಕಲ್ಯಾಣ ಕರ್ನಾಟಕ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆ.24ರವರೆಗೆ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ. ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆನಂತರ ಮಳೆ ದುರ್ಬಲಗೊಳ್ಳಲಿದ್ದು ಮತ್ತೆ ಸೆ.26ರ ನಂತರ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.
ನಿನ್ನೆ ಬೆಂಗಳೂರು, ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ರಾಮನಗರ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ತುಮಕೂರು, ಗದಗ, ಕೊಪ್ಪಳ, ಕಲಬುರಗಿ ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಬಾಗೇಪಲ್ಲಿ ತಾಲ್ಲೂಕಿನ ಕನಗಮಕಲಪಲ್ಲಿಯಲ್ಲಿ 130.5 ಮಿ.ಮೀನಷ್ಟು ಅತಿಹೆಚ್ಚು ಮಳೆಯಾಗಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದ್ದು, 3 ಜಿಲ್ಲೆಗಳಲ್ಲಿ ಸಾಧಾರಣ ಹಾಗೂ 9 ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಣಹವೆ ಕಂಡುಬಂದಿದ್ದು, 10 ಜಿಲ್ಲೆಗಳಲ್ಲಿ ಅತ್ಯಲ್ಪ ಮಳೆಯಾಗಿದೆ.