ಬೆಂಗಳೂರು,ಸೆ.19- ಪೌರ ಕಾರ್ಮಿಕರಂತೆ ನಮನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಕಸದ ವಾಹನಗಳ ಚಾಲಕರು ಮುಷ್ಕರ ಆರಂಭಿಸಿರುವುದರಿಂದ ಸಿಲಿಕಾನ್ ಸಿಟಿ ಬೆಂಗಳೂರು ಇಂದಿನಿಂದ ಗಬ್ಬೆದ್ದು ಹೋಗುವ ಸಾಧ್ಯತೆಗಳಿವೆ.
ಇಂದಿನಿಂದ ಮನೆ..ಮನೆ ಕಸ ಸಂಗ್ರಹ ಮಾಡದಿರಲು ಕಸದ ಲಾರಿ ಮತ್ತು ಆಟೋ ಚಾಲಕರು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಸಂಪೂರ್ಣ ಬಂದ್ ಆಗಲಿದೆ.ತಮ ಬಹುದಿನಗಳ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಸದ ಲಾರಿ.ಅಟೋ ಚಾಲಕರು ನಗರದ ಫ್ರೀಡಂ ಪಾರ್ಕಿನಲ್ಲಿ ಜಿಬಿಎ ಅಸ್ಥಿತ್ವಕ್ಕೆ ಬಂದ ನಂತರ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಚಾಲಕರನ್ನು ಹಾಗೂ ಸಹಾಯಕರನ್ನು ಖಾಯಂ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಮಾತು ತಪ್ಪಿರುವುದರಿಂದ ಚಾಲಕರು ಸರ್ಕಾರದ ವಿರುದ್ಧ ನೇರಾನೇರ ತೊಡೆ ತಟ್ಟಿದ್ದಾರೆ.
ನಮನ್ನು ಖಾಯಂ ಮಾಡುವವರೆಗೆ ನಾವು ಯಾವುದೇ ಕಾರಣಕ್ಕೂ ಕಸದ ವಾಹನಗಳನ್ನು ಚಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಮನೆ ಬಾಗಿಲಿಗೆ ವಾಹನ ಬಂದರೂ ಕಸ ಹಾಕಲು ಮೀನಾಮೇಷ ಎಣಿಸುವ ನಮ ಸಿಲಿಕಾನ್ ಸಿಟಿ ಜನ ವಾಹನ ಬರಲಿಲ್ಲ ಅಂದರೆ ಸುಮನಿರುತ್ತಾರಾ.. ಉದ್ಯಾನವನ, ಕೆರೆಗಳು ಹಾಗೂ ರಸ್ತೆ ಬದಿಗಳಲ್ಲಿ ಎಲ್ಲೇಂದರಲ್ಲಿ ಕಸ ಎಸೆದು ಏನು ತಿಳಿಯದವರಂತೆ ಮನೆಗೆ ಹೋಗುತ್ತಾರೆ. ಹೀಗಾಗಿ ಇಡಿ ನಗರ ಒಂದೇರಡು ದಿನಗಳಲ್ಲಿ ಗಬ್ಬೆದುಹೋಗುವ ಸಾಧ್ಯತೆಗಳಿವೆ.
ನೇರ ವೇತನ ಕೊಡ್ತಿವಿ ಅಂತ ಭರವಸೆ ನೀಡಿದ್ದ ಸರ್ಕಾರ ಈಗ ಮಾತು ತಪ್ಪಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ನಗರದಲ್ಲಿ ಕಸದ ಲಾರಿಗಳ ಸಂಚಾರ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ನೇರ ನೇಮಕಾತಿ ಬೇಡ. ನೇರವಾಗಿ ವೇತನ ನೀಡಿ ಅನ್ನೋ ಸಾಧಾರಣ ಬೇಡಿಕೆಯನ್ನು ಈಡೇರಿಸದ ಕಾಂಗ್ರೆಸ್ ಸರ್ಕಾರ ಇದೀಗ ಚಾಲಕರ ಕೆಂಗಣ್ಣಿಗೆ ಗುರಿಯಾಗಿದೆ.ನಗರದಲ್ಲಿ ಸುಮಾರು 10 ಸಾವಿರ ಲಾರಿ ಹಾಗೂ ಟೆಪ್ಪರ್ ಡ್ರೈವರ್ಗಳು, ಸಹಾಯಕರು ಕೆಲಸ ಮಾಡುತ್ತಿದ್ದಾರೆ. 750 ಕಸದ ಲಾರಿಗಳು ಹಾಗೂ 3500 ಕಸದ ಅಟೋಗಳ ಸಂಚಾರ ಬಂದ್ ಆಗಲಿದೆ.
ಮುಷ್ಕರಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ. ರಸ್ತೆ ಗುಂಡಿ ಮುಚ್ಚದಿದ್ದರೆ ನಗರ ಖಾಲಿ ಮಾಡುತ್ತೇವೆ ಎನ್ನುತ್ತಿರುವ ಕಾರ್ಪೋರೇಟ್ ಸಂಸ್ಥೆಗಳು ಇನ್ನು ಕಸದ ಸಮಸ್ಯೆ ಎದುರಾದರೆ ಏನು ಮಾಡುತ್ತಾರೋ ಕಾದು ನೋಡಬೇಕು.