Friday, September 19, 2025
Homeರಾಜ್ಯಬಾನು ಮುಸ್ತಾಕ್‌ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ

ಬಾನು ಮುಸ್ತಾಕ್‌ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ

Supreme Court dismisses petition challenging Dasara inauguration by Banu Mushtaq

ನವದೆಹಲಿ,ಸೆ.19– ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್‌ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ.ಇದರಿಂದ ಬಾನು ಮುಸ್ತಾಕ್‌ ಅವರು ದಸರಾ ಉದ್ಘಾಟನೆಗೆ ಅಡ್ಡಿಯಾಗಿದ್ದ ಕಾನೂನು ತೊಡಕು ಬಹುತೇಕ ನಿವಾರಣೆಯಾದಂತಾಗಿದೆ. ಈಗಾಗಲೇ ಹೈಕೋರ್ಟ್‌ನಲ್ಲೂ ಅರ್ಜಿ ವಜಾಗೊಂಡಿರುವುದು ಉಲ್ಲೇಖನೀಯ.

ಮೈಸೂರು-ಕೊಡುಗು ಮಾಜಿ ಸಂಸದ ಪ್ರತಾಪ್‌ ಸಿಂಹ ಪರವಾಗಿ ಬೆಂಗಳೂರಿನ ಗೌರವ್‌ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್‌ ಹಾಗೂ ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಆರಂಭದಲ್ಲೇ ವಜಾಗೊಳಿಸಿ ಹೆಚ್ಚಿನ ವಿಚಾರಣೆ ಅಗತ್ಯವಿಲ್ಲ ಎಂದು ಸೂಚ್ಯವಾಗಿ ಹೇಳಿದರು.

ಒಂದು ಹಂತದಲ್ಲಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಸಂವಿಧಾನದ ಪ್ರಸ್ತಾವನೆ ಏನು ಹೇಳುತ್ತದೆ? ನಾವು ಜಾತ್ಯತೀತತೆ ಒಪ್ಪಿಕೊಂಡ ಮೇಲೆ ಈ ಅರ್ಜಿಯನ್ನು ಪರಿಗಣಿಸುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು. ಅರ್ಜಿ ವಿಚಾರಣೆಯನ್ನು ತುರ್ತು ವಿಚಾರಣಾ ಪಟ್ಟಿಗೆ ಸೇರಿಸಬೇಕೆಂಬ ಮನವಿಗೆ ಆಶ್ಚರ್ಯ ವ್ಯಕ್ತಪಡಿಸಿದ ಪೀಠ, ಅಷ್ಟೊಂದು ತುರ್ತಿನ ಅಗತ್ಯವಾದರೂ ಏನಿದೆ? ಇದು ಸಾರ್ವಜನಿಕ ಮಹತ್ವದ ಅರ್ಜಿಯೇ ಎಂದು ಪ್ರಶ್ನೆ ಮಾಡಿದರು.

ಇದು ರಿಬ್ಬನ್‌ ಕಟ್‌ ಮಾಡುವ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮವೂ ಅಲ್ಲ. ಸಂಪೂರ್ಣವಾಗಿ ಧಾರ್ಮಿಕ ಹಬ್ಬ. ಈವರೆಗೂ ದಸರಾವನ್ನು ಹಿಂದೂ ಧರ್ಮಕ್ಕೆ ಸೇರಿದ ವ್ಯಕ್ತಿಗಳೇ ಉದ್ಘಾಟನೆ ಮಾಡಿದ್ದಾರೆ ಎಂದು ಅರ್ಜಿದಾರ ಪರ ವಕೀಲರು ಸಮರ್ಥನೆ ಮಾಡಿಕೊಳ್ಳಲು ಮುಂದಾದರು.

ಇದಕ್ಕೆ ಸಿಡಿಮಿಡಿಗೊಂಡ ನ್ಯಾಯಾಧೀಶರು ನೀವು ಸಂವಿಧಾನದ ಪ್ರಸ್ತಾವನೆಯನ್ನು ಓದಿದ್ದೀರೋ ಇಲ್ಲವೋ? ಅಲ್ಲದೆ ನಿಮಗೆ ಇದು ಅರ್ಥವಾದಂತೆ ಕಾಣುತ್ತಿಲ್ಲ. ನಾವು ಅದನ್ನು ಹೇಳಬೇಕೆ? ಈ ಅರ್ಜಿಯನ್ನು ಯಾವ ಆಧಾರದ ಮೇಲೆ ಸಲ್ಲಿಕೆ ಮಾಡಿದ್ದೀರಿ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು.

ಆಗಲೂ ವಕೀಲರು ಸಮರ್ಥನೆ ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ ಇದು ವಿಚಾರಣೆಗೆ ಯೋಗ್ಯವಲ್ಲ. ಹಾಗಾಗಿ ನಿಮ ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ ಎಂದು ಆದೇಶ ಮಾಡಿದರು.
ಇದೇ ದಸರಾ ಹಬ್ಬವನ್ನು ಈ ಹಿಂದೆ ಸಾಹಿತಿ ನಿಸಾರ್‌ ಅಹಮದ್‌ ಉದ್ಘಾಟನೆ ಮಾಡಿದ್ದಾರೆ. ಆಗ ಇಲ್ಲದ ವಿರೋಧ ಈಗೇಕೆ? ಧರ್ಮದ ಆಧಾರದ ಮೇಲೆ ನಾವು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಆದೇಶಿ ಅರ್ಜಿ ವಜಾ ಮಾಡಿದರು.

ಈ ಹಿಂದೆ ಹೈಕೋರ್ಟ್‌ನಲ್ಲಿ ಮೇಲನವಿಯಲ್ಲಿ ಅರ್ಜಿದಾರರ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಹಕ್ಕನ್ನು ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್‌ ತಪ್ಪಾಗಿ ತೀರ್ಪು ನೀಡಿದೆ ಬಾನು ಮುಸ್ತಾಕ್‌ ಹಿಂದೂ ವಿರೋಧಿ ಹೇಳಿಕೆ ನೀಡಿರುವುದರಿಂದ ಅವರ ಭಾಗವಹಿಸುವಿಕೆಯು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದರೆ ಸುಪ್ರೀಂಕೋರ್ಟ್‌ ಈ ಯಾವುದೇ ಅಂಶಗಳನ್ನು ಪರಿಗಣಿಸದೆ ವಜಾಗೊಳಿಸಿತು.

ಈ ವರ್ಷದ ದಸರಾ ಉದ್ಘಾಟನೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಲಿದ್ದು, ಬಾನು ಮುಷ್ತಾಕ್‌ ಅವರು ಅಗ್ರ ಪೂಜೆ ನೆರವೇರಿಸುವ ನಿರ್ಧಾರಕ್ಕೆ ವಿರೋಧವಾಗಿ ಬಿಜೆಪಿ ನಾಯಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ನಲ್ಲಿ ಇದು ರಾಷ್ಟ್ರೀಯ ಹಬ್ಬ ಎಂದು ಹೇಳಲಾಗಿದ್ದು, ಅರ್ಜಿ ವಜಾಗೊಂಡಿತ್ತು. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲನವಿ ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್‌ನಲ್ಲಿ ಪ್ರತಾಪ್‌ ಸಿಂಹ ಅರ್ಜಿ ವಜಾ!
ಈ ವಿವಾದಕ್ಕೆ ಮೊದಲು ಪ್ರತಾಪ್‌ ಸಿಂಹ ಅವರು ಹೈಕೋಟ್ರ್ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯಲ್ಲಿ ಬಾನು ಮುಷ್ತಾಕ್‌ ಅವರು 2023ರಲ್ಲಿ ಒಂದು ಸಾಹಿತ್ಯ ಸಮೇಳನದಲ್ಲಿ ೞಹಿಂದೂ ವಿರೋಧಿೞ ಮತ್ತು ಕನ್ನಡ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಲ್ಲದೆ, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯುವ ಉದ್ಘಾಟನೆಯಲ್ಲಿ ಹಿಂದೂಯೇತರ ವ್ಯಕ್ತಿಯು ಪೂಜೆ ನೆರವೇರಿಸುವುದು ಆಗಮ ಶಾಸ್ತ್ರದ ನಿಯಮಗಳ ವಿರುದ್ಧವಾಗಿದ್ದು, ಹಿಂದೂ ಭಾವನೆಗಳನ್ನು ದೌರ್ಜನ್ಯ ಮಾಡುತ್ತದೆ ಎಂದು ವಾದಿಸಲಾಗಿತ್ತು. ಮೈಸೂರು ರಾಜವಂಶದ ಪ್ರತಿನಿಧಿಗಳನ್ನು ಸಮಾಲೋಚಿಸದೆ ಆಹ್ವಾನ ನೀಡಿರುವುದು ಸಹ ತಪ್ಪು ಎಂದು ಹೇಳಲಾಗಿತ್ತು. ಅದರೆ ಈ ಅರ್ಜಿ ವಜಾಗೊಂಡಿತ್ತು.

ಹೈಕೋರ್ಟ್‌ ಮುಖ್ಯಪೀಠದಲ್ಲಿ ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭೂ ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಿ ಸೆಪ್ಟೆಂಬರ್‌ 15ರಂದು ಹೈಕೋರ್ಟ್‌ ಈ ಅರ್ಜಿಯನ್ನು ವಜಾ ಮಾಡಿತ್ತು.

ನ್ಯಾಯಾಲಯವು ತೀರ್ಪಿನಲ್ಲಿ, ದಸರಾ ಉತ್ಸವವು ರಾಜ್ಯ ಸರ್ಕಾರದಿಂದ ಆಶ್ರಯಿಸುವ ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು, ಇದರಲ್ಲಿ ಹಿಂದೂಯೇತರ ವ್ಯಕ್ತಿಯ ಭಾಗವಹಿಸುವುದರಿಂದ ಯಾವುದೇ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಬಾನು ಮುಷ್ತಾಕ್‌ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗೌರವಾನ್ವಿತರಾಗಿದ್ದು, ಆಹ್ವಾನ ನೀಡುವ ಸಮಿತಿಯಲ್ಲಿ ವಿವಿಧ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆಂದು ಹೇಳಿ, ಇದು ಸಾಂಸ್ಕೃತಿಕ ಮೌಲ್ಯಗಳನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ದೃಢಪಡಿಸಿತ್ತು.

RELATED ARTICLES

Latest News