ಬೆಂಗಳೂರು, ಸೆ.19- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುವ ಸಾಮಾಜಿಕ ಹಾಗೂ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಗೊಂದಲ ನಿವಾರಣೆಗೆ ಸಮಾರೋಪಾದಿಯ ಚರ್ಚೆಗಳು ನಡೆಯುತ್ತಿದ್ದು ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಸಚಿವರ ಜೊತೆ ಖಾಸಗಿ ಸಮಾಲೋಚನೆ ನಡೆಸಿದರೆ, ಮತ್ತೊಂದೆಡೆ ಹೈಕಮಾಂಡ್ ಕೂಡ ಮಧ್ಯ ಪ್ರವೇಶಿಸಿರುವುದು ಕುತೂಹಲ ಕೆರಳಿಸಿದೆ.
ಸಮೀಕ್ಷೆಯಲ್ಲಿನ ತಾಂತ್ರಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ಇಂದು ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಮತ್ತೊಂದು ಸುತ್ತಿನ ಜಟಾಪಟಿಯಾಗಿದೆ.ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಕಾರ್ಮಿಕ ಸಚಿವ ಸಂತೋಷಲಾಡ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ತಂಗಡಗಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್, ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ದಯಾನಂದ್, ಹಿಂದುಳಿದ ವರ್ಗಗಳ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು, ಹಾಗೂ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಕ್ರಿಶ್ಚಿಯನ್ ಉಪಜಾತಿಗಳ ಗೊಂದಲ ನಿವಾರಣೆಗಾಗಿ ಸದರಿ ಕಾಲಂಗಳನ್ನು ತೆಗೆದು ಹಾಕಲು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸಭೆಯಲ್ಲಿ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಕ್ರಿಶ್ಚಿಯನ್ ಉಪಜಾತಿಯ ಕಾಲಂಗಳನ್ನು ತೆಗೆದು ಹಾಕಲು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ರೀತಿ ಗೊಂದಲಗಳಾದರೆ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು, ನೀವು ರಾಜೀನಾಮೆ ನೀಡುವುದಾದರೆ ನೀಡಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಧುಸೂದನ್ ನಾಯಕ್ ಅವರನ್ನು ಮುಖ್ಯಮಂತ್ರಿ ಹಾಗೂ ಸಚಿವ ಎಚ್.ಕೆ. ಪಾಟೀಲ್ ಸಮಾಧಾನ ಪಡಿದ್ದಾರೆ ಎಂದು ತಿಳಿದು ಬಂದಿದೆ. ಸಮೀಕ್ಷೆಯ ನಮೂನೆಯಲ್ಲಿ ಕ್ರಿಶ್ಚಿಯನ್ ಧರ್ಮದೊಂದಿಗೆ ಉಪ ಜಾತಿಗಳ ಕಾಲಂಗಳನ್ನು ತೆಗೆದು ಹಾಕಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿರುವುದಾಗಿ ಹಾಗೂ ನಿಗದಿತ ಸಮಯದಂತೆ ಸೆ.22 ರಿಂದಲೇ ಸಮೀಕ್ಷೆ ಆರಂಭಿಸುವಂತೆ ಆದೇಶಿಸಿರುವುದಾಗಿ ತಿಳಿದು ಬಂದಿದೆ.
ಜೊತೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವ ಕೆ.ಜೆ. ಜಾರ್ಜ್ ಅವರ ಜೊತೆ ಚರ್ಚೆ ನಡೆಸಿ ಸಮೀಕ್ಷೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಈ ಹಿಂದೆ ಕಾಂತರಾಜು ಆಯೋಗ ನಡೆಸಿದ್ದ ಸಮೀಕ್ಷೆಯನ್ನು ಸ್ವೀಕರಿಸದಿರಲು ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಯವರಿಗೆ ಆದೇಶ ನೀಡಿತ್ತು. ಮರು ಸಮೀಕ್ಷೆಗೂ ಸಲಹೆ ನೀಡಿತ್ತು. ಅದರಂತೆ ಹೊಸ ಸಮೀಕ್ಷೆಗೆ ಪ್ರಕ್ರಿಯೆಗಳು ಶುರುವಾಗಬೇಕು ಎನ್ನುವ ಹಂತದಲ್ಲೇ ಮತ್ತಷ್ಟು ಗೊಂದಲಗಳು ಕಂಡು ಬರುತ್ತಿವೆ.ಈ ಹಿನ್ನೆಲೆಯಲ್ಲಿ ರಣದೀಪ್‌ಸಿಂಗ್ ಸುರ್ಜೇವಾಲ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡಿ ಹೈಕಮಾಂಡ್ ಸದೇಶವನ್ನು ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮತ್ತು ಅರ್ಥಾತ್ ಜಾತಿಗಣತಿಯ ಬಗ್ಗೆ ಗಂಭೀರ ಚರ್ಚೆಗಳು ನಡೆದಿದ್ದವು. ಕೆಲವು ಸಚಿವರ ಏರಿದ ಧ್ವನಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕ್ರಿಶ್ಚಿಯನ್ ಉಪಜಾತಿಯ ಮಾಹಿತಿ ಸಂಗ್ರಹಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲ ಸಚಿವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಗತ್ಯವನ್ನೇ ಪ್ರಶ್ನಿಸಿದರು.ಸಮೀಕ್ಷೆಯ ನಮೂನೆಯಲ್ಲಿ ಹೆಚ್ಚುವರಿಯಾಗಿ 331 ಹೊಸ ಜಾತಿಗಳು ಸೇರ್ಪಡೆಯಾಗಿದ್ದು, ಅವುಗಳ ಸಿಂಧುತ್ವದ ಬಗ್ಗೆ ಸಭೆಯಲ್ಲಿ ಸಮಾಲೋಚನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಸರ್ಕಾರ ಮೂಲೆಗುಂಪು ಮಾಡಿದೆ. ಮರು ಸಮೀಕ್ಷೆಗೆ ಮುಂದಾಗುತ್ತಿದ್ದಂತೆ ನಾನಾ ರೀತಿಯ ವಿವಾದಗಳು ತಲೆ ಎತ್ತಿವೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಸಚಿವರು ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿರುವುದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆ ಬಿಸಿಯಾಗಿದೆ.ಸಮೀಕ್ಷೆಯಲ್ಲಿ ಲಿಂಗಾಯತ ವೀರಶೈವರು ಯಾವ ರೀತಿ ನಮೂದು ಮಾಡಬೇಕೆಂಬುದು ಸ್ಪಷ್ಟವಾಗದೆ ಗೊಂದಲದಲ್ಲಿದ್ದಾರೆ. ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಬೇಕೆಂದು ಕೆಲವರು ವಾದಿಸುತ್ತಿದ್ದಾರೆ.
ಇನ್ನೂ ಕೆಲವರು ಹಿಂದೂ ಎಂದೇ ನಮೂದಿಸಿ, ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸುವಂತೆ ಚರ್ಚೆ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯಿತ ಎಂದು ನಮೂದಿಸಿದರೆ, ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುತ್ತದೆ.ಸಮುದಾಯದಲ್ಲಿ ಹಲವಾರು ಉಪಜಾತಿಗಳು ತಮ ಜಾತಿಯ ಹೆಸರಿನಲ್ಲಿ ಹಿಂದುಳಿ ವರ್ಗಗಳ ಪ್ರವರ್ಗ ಪ್ರಮಾಣ ಪತ್ರ ಪಡೆದಿದ್ದು ಮೀಸಲಾತಿಗೆ ಅರ್ಹವಾಗಿವೆ. ವೀರಶೈವ ಲಿಂಗಾಯಿತ ಎಂದು ನಮೂದಿಸಿದರೆ, ಮೀಸಲಾತಿ ಪಟ್ಟಿಯಿಂದ ಹೊರಗುಳಿಯಬೇಕಾದ ಸಂಕಷ್ಟ ಎದುರಾಗುತ್ತದೆ.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಆಧಾರ್ ಮತ್ತು ಪಾನ್‌ಕಾರ್ಡ್ ಸಂಖ್ಯೆ ಜೋಡಣೆಯಾಗುವುದರಿಂದ ಮುಂದಿನ ದಿನಗಳಲ್ಲಿ ಪ್ರಮಾಣ ಪತ್ರಗಳನ್ನು ಪಡೆಯಲು ಸಮಸ್ಯೆಯಾಗಬಹುದು ಎಂಬ ಆತಂಕ ಅನೇಕರಲ್ಲಿದೆ. ಈಗಾಗಿ ಸಮೀಕ್ಷೆಯ ಅಗತ್ಯವೇ ಇಲ್ಲವೆಂಬ ವಾದಗಳು ಕೇಳಿ ಬರುತ್ತಿವೆ.