ಬೆಂಗಳೂರು,ಸೆ.19- ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ 331 ಹೊಸ ಜಾತಿಗಳನ್ನು ಸೃಷ್ಟಿ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಪಾದಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ಜಾತಿಗಳು ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ. ಆದರೂ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಹೊಸ ಜಾತಿಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ದನಿ ಇಲ್ಲದವರಿಗೆ ದನಿ ನೀಡಲು ಜಾತಿಗಣತಿ ಆಗಬೇಕೇ ಹೊರತು ರಾಜಕೀಯ ಭವಿಷ್ಯಕ್ಕಾಗಿ ಅಲ್ಲ ಎಂದು ಯಾರ ಹೆಸರನ್ನೂ ಹೇಳದೆ ಆರೋಪ ಮಾಡಿದರು.ಕೇಂದ್ರ ಸರ್ಕಾರವೇ ಜಾತಿಗಣತಿಯನ್ನು ಮಾಡುತ್ತಿದೆ. ಆದರೂ ರಾಜ್ಯಸರ್ಕಾರ 420 ಕೋಟಿ ರೂ. ಖರ್ಚು ಮಾಡಿ ಸೆ.22 ರಿಂದ 15 ದಿನದಲ್ಲಿ 2 ಕೋಟಿ ಮನೆಗಳ ಸಮೀಕ್ಷೆ ನಡೆಸಲಿದೆಯಂತೆ. 10 ವರ್ಷಗಳಲ್ಲಿ ಸಾಧಿಸಲಾಗದ್ದನ್ನು 15 ದಿನಗಳಲ್ಲಿ ಮಾಡಲಾಗುತ್ತದೆಯೇ?, ಇದು ವಾಸ್ತವಿಕವಾಗಿ ಸಾಧ್ಯವಿದೆಯೇ?, ಈ ಸಮೀಕ್ಷೆಯಿಂದ ನಿಮಗೆ ಲಾಭ ಆಗಬಹುದು?, ಜನರಿಗೆ ಏನು ಲಾಭವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಜನರ ತೆರಿಗೆ ಹಣವನ್ನು ಏಕೆ ವ್ಯಯ ಮಾಡಬೇಕು ಎಂದು ಪ್ರಶ್ನಿಸಿದ ಅವರು, 2015 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾಂತರಾಜು ನೇಮಕಗೊಂಡು ಅವರ ಅವಧಿಯಲ್ಲಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿತ್ತು. 2018 ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ಆಯೋಗದ ಸಹ ಕಾರ್ಯದರ್ಶಿಯವರ ಸಹಿ ಇಲ್ಲ ಎಂಬ ಕಾರಣಕ್ಕೆ ವರದಿಯನ್ನು ಸ್ವೀಕರಿಸಲಿಲ್ಲ. ಈ ವರದಿ ಸಿದ್ಧಪಡಿಸಲು 180 ಕೋಟಿ ರೂ. ಹಣವನ್ನು ವ್ಯಯ ಮಾಡಲಾಗಿತ್ತು. ಅಲ್ಲದೆ ಅದನ್ನು ವೈಜ್ಞಾನಿಕವಾಗಿ ಕೂಡ ಮಾಡಿರಲಿಲ್ಲ ಎಂದು ಆರೋಪಿಸಿದರು.
ಜಾತಿಗಣತಿಗೆ ಸಂಬಂಧಿಸಿದಂತೆ ಆಯಾ ಸಮುದಾಯದ ಮಠಾಧೀಶರು, ನಾಯಕರು ಚರ್ಚೆ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಮಠಾಧೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನಾಳೆ ಈ ಬಗ್ಗೆ ಸಭೆ ಕರೆದಿದ್ದು, ಮಾಜಿ ಪ್ರಧಾನಿ ಎಚ್.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸಮುದಾಯದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಜಾತಿಗಣತಿ ವಿಚಾರದಲ್ಲಿ ರಾಜ್ಯಸರ್ಕಾರದ ನಡೆ ಆತಂಕಕ್ಕೆ ಎಡೆ ಮಾಡಿದೆ. ಸಂಶಯಾತಕ ನಡೆಗಳು ಕಂಡುಬರುತ್ತಿದ್ದು, ಈ ಬಗ್ಗೆ ಎಲ್ಲರೂ ಚರ್ಚಿಸಬೇಕಿದೆ ಎಂದರು.