ಲಂಡನ್,ಸೆ.19- ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಸುಧಾರಿಸುತ್ತಿ ರುವುದರ ನಡುವೆ, ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಯವರನ್ನು ಹೊಗಳಿದ್ದಾರೆ. ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಭಾರತ ಹಾಗೂ ಭಾರತದ ಪ್ರಧಾನಿ ಮೋದಿ ನನಗೆ ಬಹಳ ಆಪ್ತ. ಅವರ ಹುಟ್ಟುಹಬ್ಬಕ್ಕೆ ನಾನು ಕರೆ ಮಾಡಿ ವಿಷ್ ಮಾಡಿದ್ದೆ.
ನಿನ್ನೆಯಷ್ಟೇ ಅವರ ಜೊತೆ ಮಾತನಾಡಿದ್ದೆ. ನಾವು ಬಹಳ ಒಳ್ಳೆಯ ಒಡನಾಟ ಹೊಂದಿದ್ದೇವೆ. ನಾನು ಭಾರತಕ್ಕೆ ತುಂಬಾ ಹತ್ತಿರವಾಗಿದ್ದೇನೆ, ನಾನು ಭಾರತೀಯ ಪ್ರಧಾನಿಗೆ ತುಂಬಾ ಹತ್ತಿರವಾಗಿದ್ದೇನೆ. ನಾನು ನಿನ್ನೆ ಅವರೊಂದಿಗೆ ಮಾತನಾಡಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ನಮಗೆ ತುಂಬಾ ಉತ್ತಮ ಸಂಬಂಧವಿದೆ ಎಂದು ಹೇಳಿದರು.
ಗಾಜಾದಲ್ಲಿ ನಡೆಯುತ್ತಿರುವ ಹಿಂಸಾಚಾರ, ನಗರಗಳ ನಾಶ ಮತ್ತು ನಾಗರಿಕರ ಸಾವಿನ ಕುರಿತು ಮಾತನಾಡಿದ ಟ್ರಂಪ್, ನೀವು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮನವೊಲಿಸಿ ಗಾಜಾದ ಕ್ರಮಗಳನ್ನು ನಿಲ್ಲಿಸುವಂತೆ ಕೇಳುತ್ತೀರಾ? ಎಂದು ಪ್ರಶ್ನಿಸಲಾಯಿತು.
ಇದಕ್ಕೆ ಟ್ರಂಪ್ ಅಕ್ಟೋಬರ್ 7ರ ಘಟನೆಗಳು ಮಾನವ ಇತಿಹಾಸದ ಅತ್ಯಂತ ಕೆಟ್ಟ ದಿನಗಳಲ್ಲಿ ಒಂದಾಗಿದೆ. ಅದನ್ನು ಮರೆಯಲು ಸಾಧ್ಯವಿಲ್ಲ. ಯುದ್ಧವನ್ನು ಕೊನೆಗೊಳಿಸಲು ನಾವು ಬಯಸುತ್ತೇವೆ, ಆದರೆ ಮೊದಲು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದರು.
ಯುರೋಪಿಯನ್ ರಾಷ್ಟ್ರಗಳು ಇನ್ನೂ ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ಟೀಕಿಸುತ್ತಾ, ಇಂತಹ ಕ್ರಮಗಳು ಯುದ್ಧದಲ್ಲಿ ಮಾಸ್ಕೋವನ್ನು ಏಕಾಂಗಿಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತವೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ರಷ್ಯಾದ ತೈಲ ವ್ಯವಹಾರದ ಬಗ್ಗೆ ಹಿಂದೆ ಹಲವು ಬಾರಿ ಕಠಿಣ ಟೀಕೆ ಮಾಡಿದರೂ, ಈ ಬಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮಗೆ ಇರುವ ಆಪ್ತ ಸಂಬಂಧವನ್ನು ಒತ್ತಿ ಹೇಳಿದರು. ಜಾಗತಿಕ ತೈಲ ಬೆಲೆಗಳನ್ನು ನಿಯಂತ್ರಿಸುವುದೇ ರಷ್ಯಾವನ್ನು ನೆಲೆಗೊಳ್ಳುವಂತೆ ಮಾಡುವ ಪ್ರಮುಖ ಮಾರ್ಗವೆಂದು ಟ್ರಂಪ್ ಸೂಚಿಸಿದರು.