ಬೆಂಗಳೂರು, ಸೆ.19- ನಗರದ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು ಹಲವಾರು ಕಸರತ್ತುಗಳನ್ನು ಆರಂಭಿಸಿರುವ ಜಿಬಿಎ ಇದೀಗ 110 ಕಿ.ಮೀ ದೂರದ ಎತ್ತರದ ಕಾರಿಡಾರ್ ನಿರ್ಮಾಣ ಮಾಡಲು ಮುಂದಾಗಿದೆ.
ಬಿ ಸೈಲ್ ಸಂಸ್ಥೆಯಿಂದ 110 ಕಿ.ಮೀ ಎತ್ತರದ ಕಾರಿಡಾರ್ ಕಾಮಗಾರಿಯನ್ನು 18.000 ಸಾವಿರ ಕೋಟಿ ವೆಚ್ಚದ ನಿರ್ಮಿಸಲು ತೀರ್ಮಾನಿಸಲಾಗಿದೆ.ನಗರ ಬೆಳೆದಂತೆ ಹೊರ ಭಾಗದ ಪ್ರದೇಶಗಳಲ್ಲೂ ಸಂಚಾರ ದಟ್ಟಣೆ ಉಲ್ಬಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾರಿಡಾರ್ ರಸ್ತೆಯನ್ನು ನಗರದ ಹೊರ ಭಾಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಿ ಸೈಲ್ ನಿರ್ದೇಶಕ ಪ್ರಹ್ಲಾದ್ ಮಾಹಿತಿ ನೀಡಿದ್ದಾರೆ.
ಹೊಸ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಡಿಪಿಅರ್ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಕೂಡ ಅನುಮೋದನೆ ನೀಡಿದ್ದು, ಡಿಸೆಂಬರ್ ವೇಳೆಗೆ ಕಾಮಗಾರಿ ಶುರು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾಮಗಾರಿಗೆ ನಿಗದಿಪಡಿಸಿರುವ 18 ಸಾವಿರ ಕೋಟಿ ರೂ.ಗಳಲ್ಲಿ 3 ಸಾವಿರ ಕೋಟಿ ಭೂಸ್ವಾಧೀನಕ್ಕೆ ಉಳಿದ 15000 ಕೋಟಿ ರೂ.ಗಳಲ್ಲಿ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಈ ಕಾರಿಡಾರ್ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ನೀವು ಟೋಲ್ ನೀಡಬೇಕಾಗುತ್ತದೆ.ಈ ಕಾರಿಡಾರ್ ರಸ್ತೆಯನ್ನು ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ನೂತನ ತಂತ್ರಜ್ಞಾನದಿಂದ ಹೈಟೆಕ್ ಕಾರಿಡಾರ್ ನಿರ್ಮಾಣ ಮಾಡಲಾಗುವುದು. ಇನ್ನೂ ಗುಂಡಿ ಬಿದ್ದ ರಸ್ತೆಗಳಿಗೆ ಮುಕ್ತಿ ನೀಡಲು ನಗರದ 500 ಕಿ.ಮೀ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಲಾಗುತ್ತೆ ಎಂದು ಅವರು ಮಾಹಿತಿ ನೀಡಿದರು.
ಇನ್ನೂ 440 ಕಿ.ಮೀ ಮೆಟ್ರೋ ಹಳಿಗಳ ಸಮೀಪ 9 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಜೋಡಿ ರಸ್ತೆ ನಿರ್ಮಾಣ. 5500 ಕೋಟಿ ರೂ ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ನಿರ್ಮಿಸುತ್ತೇವೆ. ಕಾರಿಡಾರ್ ನಿರ್ಮಾಣಕ್ಕಾಗಿ ನಗರದ ಹೊರ ವಲಯಗಳಲ್ಲಿ 16 ಜಾಗಗಳನ್ನು ಗುರುತಿಸಲಾಗಿದೆ. ಒಟ್ಟಾರೆ ಮೂರ್ನಾಲ್ಕು ವರ್ಷಗಳಗಲ್ಲಿ ನಗರವನ್ನು ಸಂಚಾರ ದಟ್ಟಣೆ ಮುಕ್ತ ಪ್ರದೇಶವನ್ನಾಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.