ಹನೂರು, ಸೆ.20– ತಾಲ್ಲೂಕಿನ ಪ್ರಸಿದ್ದ ಪುಣ್ಯ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ ಮಹದೇಶ್ವರಬೆಟ್ಟ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ನಡೆದಿದ್ದು, 29 ದಿನದಲ್ಲಿ 1.70 ಕೋಟಿ ರೂ. ಸಂಗ್ರಹವಾಗಿದೆ.
ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರ ಸಮ್ಮುಖದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಹಣ ಎಣಿಕೆ ಕಾರ್ಯ ನಡೆದಿದ್ದು, 29 ದಿನಗಳಲ್ಲಿ 1.70 ಕೋಟಿ ರೂ. ನಗದು ರೂಪದಲ್ಲಿ ಹುಂಡಿ ಮತ್ತು ಇ-ಹುಂಡಿ ಸೇರಿ) ಹಾಗೂ ಚಿನ್ನ 30 ಗ್ರಾಂ., ಬೆಳ್ಳಿ 1 ಕೆ.ಜಿ 100 ಗ್ರಾಂ. ಹುಂಡಿಯಲ್ಲಿ ದೊರೆತಿದೆ.
ಈ ಬಾರಿ ವಿದೇಶಿ ನೋಟುಗಳು ಇಲ್ಲ ಮತ್ತು ಎರಡು ಸಾವಿರ ಮುಖಬೆಲೆ ಮೂರು ನೋಟುಗಳು ಹುಂಡಿಯಲ್ಲಿ ದೊರೆತಿವೆ. ಭಕ್ತರಿಂದ ಹರಕೆ ರೂಪದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಕಾಣಿಕೆ ಸಂದಿರುವುದು ಅಮಾವಾಸ್ಯೆ, ಹುಣ್ಣಿಮೆಯ ರಜೆ ದಿನಗಳಂದು. ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿರುವುದರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಿದೆ.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ.ಜಿ.ಎಲ್., ಪ್ರಾಧಿಕಾರದ ಹಣಕಾಸು ಮತ್ತು ಲೆಕ್ಕ ಪತ್ರ ಸಲಹೆಗಾರ ಮಹದೇವು ಸಿ.. ಲೆಕ್ಕಧೀಕ್ಷಕ ಗುರುಮಲ್ಲಯ್ಯ ಸರಗೂರು ಮಹದೇವಸ್ವಾಮಿ, ಚಾಮರಾಜನಗರ ಜಿಲ್ಲಾಡಳಿತ ಕಚೇರಿ ಸಂಗೀತ ಪ್ರ.ದ.ಸ ಹಾಗೂ ಪ್ರಾಧಿಕಾರದ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕೊಳ್ಳೇಗಾಲದ ಬ್ಯಾಂಕ್ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕರು, ಸಿಬ್ಬಂದಿ ಹಾಗೂ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯ ಮರಿಸ್ವಾಮಿ ಕಾಗಲವಾಡಿ, ಭಾಗ್ಯಮ್ಮ ಕುಪ್ಯಾ ಮತ್ತಿತರರಿದ್ದರು.